< ಕೀರ್ತನೆಗಳು 1 >

1 ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, 2 ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. 3 ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. 4 ದುಷ್ಟರೋ ಹಾಗಲ್ಲ; ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ. 5 ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ, ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ. 6 ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.

< ಕೀರ್ತನೆಗಳು 1 >