< ಜ್ಞಾನೋಕ್ತಿಗಳು 7 >

1 ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ.
ಮಗನೇ, ನನ್ನ ಮಾತುಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.
2 ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.
ನನ್ನ ಆಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣುಗುಡ್ಡೆಯಂತೆ ನನ್ನ ಕಟ್ಟಳೆಗಳನ್ನು ಕಾಪಾಡು.
3 ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ.
ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿಟ್ಟುಕೋ; ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
4 ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ.
ಜ್ಞಾನಕ್ಕೆ, “ನೀನು ನನ್ನ ಸಹೋದರಿ,” ಎಂದೂ, ಒಳನೋಟಕ್ಕೆ, “ನನ್ನ ಬಂಧು” ಎಂದೂ ಹೇಳು.
5 ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು.
ಅವು ವ್ಯಭಿಚಾರಿಣಿಯಿಂದಲೂ ಸವಿಮಾತನಾಡುವ ದಾರಿತಪ್ಪಿದ ಸ್ತ್ರೀಯಿಂದಲೂ ನಿನ್ನನ್ನು ಕಾಪಾಡುತ್ತವೆ.
6 ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು
ನಾನು ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ಇಣಕಿ ನೋಡಿದಾಗ,
7 ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು.
ಮುಗ್ಧರ ನಡುವೆ, ಯುವಕರ ಮಧ್ಯದಲ್ಲಿ, ತಿಳುವಳಿಕೆಯಿಲ್ಲದ ಯೌವನಸ್ಥನನ್ನು ಕಂಡೆನು.
8 ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ,
ಅವನು ಅವಳ ಮೂಲೆ ಮನೆಯ ದಿಕ್ಕಿನಲ್ಲಿ ಬೀದಿಯಿಂದ ಹಾದುಹೋಗುತ್ತಿದ್ದನು.
9 ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.
ಸಂಜೆಯ ಮಬ್ಬಿನಲ್ಲಿ ರಾತ್ರಿಯ ಕತ್ತಲೆಯು ಕವಿಯುತ್ತಿತ್ತು.
10 ೧೦ ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
11 ೧೧ ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ;
ಅವಳು ಕೂಗಾಟದವಳು, ಹಟಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವುದೇ ಇಲ್ಲ.
12 ೧೨ ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು.
ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ ಹೀಗೆ ಅವಳು ಮೂಲೆ ಮೂಲೆಗೂ ಹೊಂಚು ಹಾಕುತ್ತಾಳೆ.
13 ೧೩ ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ,
ಅವಳು ಆ ಯುವಕನನ್ನು ಹಿಡಿದುಕೊಂಡು ಮುದ್ದಿಟ್ಟು, ನಾಚಿಕೆಯಿಲ್ಲದೆ ಅವಳು ಹೀಗೆನ್ನುತ್ತಾಳೆ:
14 ೧೪ “ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ,
“ಈ ದಿವಸ ನನ್ನ ಹರಕೆಗಳನ್ನು ನಾನು ಸಲ್ಲಿಸಿದ್ದೇನೆ. ನಾನು ನನ್ನ ಸಮಾಧಾನದ ಯಜ್ಞವನ್ನು ಅರ್ಪಿಸಿದ್ದೇನೆ.
15 ೧೫ ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.
ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ಹುಡುಕಿ ಕಂಡುಕೊಂಡಿದ್ದೇನೆ.
16 ೧೬ ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ.
ಈಜಿಪ್ಟಿನ ನಯವಾದ ನಾರು ಮಡಿಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
17 ೧೭ ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ.
ರಕ್ತಬೋಳ, ಅಗರು, ಲವಂಗ, ಚಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆಗೊಳಿಸಿದ್ದೇನೆ.
18 ೧೮ ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ.
ಬಾ, ಬೆಳಗಿನವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಂಡು ಕಾಮ ವಿಲಾಸಗಳಿಂದ ನಾವು ಸಂತೋಷಿಸೋಣ.
19 ೧೯ ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ.
ಏಕೆಂದರೆ ಯಜಮಾನನು ಮನೆಯಲ್ಲಿ ಇಲ್ಲ; ಅವನು ದೀರ್ಘ ಪ್ರಯಾಣದಲ್ಲಿದ್ದಾನೆ.
20 ೨೦ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು.
ಅವನು ತನ್ನೊಂದಿಗೆ ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಹುಣ್ಣಿಮೆಗೆ ಮುಂಚೆ ಅವನು ಮನೆಗೆ ಬರುವುದಿಲ್ಲ.”
21 ೨೧ ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ.
ಮನವೊಲಿಸುವ ಮಾತುಗಳಿಂದ ಅವಳು ಅವನನ್ನು ದಾರಿ ತಪ್ಪಿಸಿ, ಅವಳು ತನ್ನ ಮೋಹಕ ಮಾತುಗಳಿಂದ ಅವನನ್ನು ಆಕರ್ಷಿಸುತ್ತಾಳೆ.
22 ೨೨ ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ,
ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ, ಅಥವಾ ಜಿಂಕೆಯು ಬಲೆಗೆ ಸಿಕ್ಕಿಬೀಳುವಂತೆ,
23 ೨೩ ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
ಅವನು ತನ್ನ ಪ್ರಾಣವು ಅಪಾಯದಲ್ಲಿರುವುದನ್ನು ತಿಳಿಯದೆ, ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವವರೆಗೆ, ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
24 ೨೪ ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
ಆದ್ದರಿಂದ ನನ್ನ ಮಕ್ಕಳೇ, ನನಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
25 ೨೫ ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ.
ಅವಳ ಮಾರ್ಗಗಳಿಗೆ ನಿಮ್ಮ ಹೃದಯವು ತಿರುಗದೆ ಇರಲಿ; ತಪ್ಪಿಯೂ ಅವಳ ದಾರಿಯಲ್ಲಿ ಹೋಗಬೇಡಿರಿ.
26 ೨೬ ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ.
ಏಕೆಂದರೆ ಅನೇಕರು ಅವಳಿಗೆ ಬಲಿಯಾಗಿ ಬಿದ್ದಿದ್ದಾರೆ. ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.
27 ೨೭ ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ. (Sheol h7585)
ಅವಳ ಮನೆಯು ಪಾತಾಳಕ್ಕೆ ಹೆದ್ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದು ಹೋಗುತ್ತದೆ. (Sheol h7585)

< ಜ್ಞಾನೋಕ್ತಿಗಳು 7 >