< ಜ್ಞಾನೋಕ್ತಿಗಳು 5 >

1 ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ವಿವೇಕದಿಂದ ಕೂಡಿದ ನನ್ನ ಬೋಧನೆಗೆ ಕಿವಿಗೊಡು. 2 ಹೀಗಾದರೆ ನೀನು ವಿವೇಚನೆಯನ್ನು ಹೊಂದಿಕೊಳ್ಳುವಿ, ನಿನ್ನ ತುಟಿಗಳು ತಿಳಿವಳಿಕೆಯನ್ನು ಕಾಪಾಡುವವು. 3 ವೇಶ್ಯಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವುದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. 4 ಅವಳು ಕಡೆಯಲ್ಲಿ ವಿಷದಂತೆ ಕಹಿಯೂ, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು. 5 ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು, ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು. (Sheol h7585) 6 ಅವಳ ನಡತೆಯು ಚಂಚಲವಾಗಿರುವುದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ತಿಳಿದೇ ಇಲ್ಲ. 7 ಹೀಗಿರಲು ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ದೂರವಾಗಿರಬೇಡ. 8 ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ ಅವಳ ಮನೆಬಾಗಿಲ ಹತ್ತಿರ ಹೋದೆಯಾ, ಎಚ್ಚರಿಕೆ! 9 ಎಚ್ಚರವಹಿಸಿಕೋ, ನಿನ್ನ ಪುರುಷತ್ವವು ಪರಾಧೀನವಾಗುವುದು, ನಿನ್ನ ಆಯುಷ್ಯವು ಕ್ರೂರರ ವಶವಾಗುವುದು. 10 ೧೦ ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ. 11 ೧೧ ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚಿಕೊಂಡು, 12 ೧೨ “ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರ ಮಾಡಿತು, 13 ೧೩ ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ! 14 ೧೪ ನಾನು ದೇವಜನರ ಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು” ಎಂದು ಅಂದುಕೊಳ್ಳುವಿ. 15 ೧೫ ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. 16 ೧೬ ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ? 17 ೧೭ ಅವು ನಿನಗೊಬ್ಬನಿಗೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು. 18 ೧೮ ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. 19 ೧೯ ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು. 20 ೨೦ ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ? 21 ೨೧ ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ. 22 ೨೨ ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು. 23 ೨೩ ಸದುಪದೇಶದ ಕೊರತೆಯಿಂದಲೇ ನಾಶವಾಗುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು.

< ಜ್ಞಾನೋಕ್ತಿಗಳು 5 >