< ಜ್ಞಾನೋಕ್ತಿಗಳು 2 >

1 ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,
ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
2 ನಿನ್ನ ಕಿವಿಯನ್ನು ಜ್ಞಾನದ ಕಡೆಗೂ, ಹೃದಯವನ್ನು ವಿವೇಕದ ಕಡೆಗೂ ತಿರುಗಿಸು;
ನೀನು ಜ್ಞಾನಕ್ಕೆ ಕಿವಿಗೊಟ್ಟು, ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
3 ಬುದ್ಧಿಗಾಗಿ ಮೊರೆಯಿಟ್ಟು, ವಿವೇಕಕ್ಕಾಗಿ ಕೂಗಿಕೋ.
ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು, ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
4 ಅದನ್ನು ಬೆಳ್ಳಿಯಂತೆಯು ಮತ್ತು ನಿಕ್ಷೇಪದಂತೆಯು ಹುಡುಕು;
ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
5 ಆಗ ನೀನು ಯೆಹೋವನ ಭಯವನ್ನು ಅರಿತು, ದೈವಜ್ಞಾನವನ್ನು ಪಡೆದುಕೊಳ್ಳುವಿ.
ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ; ದೇವರ ಅರಿವನ್ನು ಕಂಡುಕೊಳ್ಳುವೆ.
6 ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳಿವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.
ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
7 ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು,
ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.
8 ನ್ಯಾಯಮಾರ್ಗವನ್ನು ರಕ್ಷಿಸುತ್ತಾ, ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.
ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ; ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.
9 ಹೀಗಿರಲು ನೀನು ನೀತಿ, ನ್ಯಾಯ, ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.
ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ, ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.
10 ೧೦ ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವುದು, ತಿಳಿವಳಿಕೆಯು ನಿನ್ನ ಆತ್ಮಕ್ಕೆ ಹಿತಕರವಾಗಿರುವುದು.
ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ, ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.
11 ೧೧ ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.
ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು; ತಿಳುವಳಿಕೆಯು ನಿನ್ನನ್ನು ಕಾಪಾಡುವುದು.
12 ೧೨ ಇದರಿಂದ ನೀನು ದುರ್ಮಾರ್ಗದಿಂದಲೂ, ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.
ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.
13 ೧೩ ಅವರಾದರೋ ಕತ್ತಲೆಯ ಮಾರ್ಗಗಳನ್ನು ಹಿಡಿಯಬೇಕೆಂದು, ಧರ್ಮಮಾರ್ಗಗಳನ್ನು ತೊರೆದುಬಿಡುವರು.
ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.
14 ೧೪ ಅವರು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸಿ, ಕೆಟ್ಟವರ ದುಷ್ಟತನದಲ್ಲಿ ಆನಂದಿಸುವರು.
ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.
15 ೧೫ ಅವರ ಮಾರ್ಗಗಳು ವಕ್ರವಾಗಿವೆ. ಅವರ ನಡತೆಗಳು ದುರ್ನಡತೆಗಳೇ.
ಅವರ ಮಾರ್ಗಗಳು ವಕ್ರವಾಗಿವೆ; ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.
16 ೧೬ ವಿವೇಕವು ನಿನ್ನನ್ನು ಜಾರಳಿಂದ ಅಂದರೆ ಸವಿಮಾತನಾಡುವ ಪರಸ್ತ್ರೀಯಿಂದ ತಪ್ಪಿಸುವುದು.
ಜಾರಿಣಿಯಿಂದಲೂ ದಾರಿತಪ್ಪಿದ ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.
17 ೧೭ ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ, ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳೆ.
ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ, ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.
18 ೧೮ ಅವಳ ಮನೆಯು ಪಾತಾಳಕ್ಕೆ ಇಳಿಯುವ ದಾರಿ, ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ.
ಏಕೆಂದರೆ ಅವಳ ಮನೆ ಮರಣ ಮಾರ್ಗ. ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.
19 ೧೯ ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವುದಿಲ್ಲ, ಅವರಿಗೆ ಜೀವದ ಮಾರ್ಗವು ದೊರೆಯುವುದೇ ಇಲ್ಲ.
ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ; ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.
20 ೨೦ ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ ವಿವೇಕವು ನಿನ್ನನ್ನು ಪ್ರೇರೇಪಿಸಿ, ನೀತಿವಂತರ ದಾರಿಗಳನ್ನು ಹಿಡಿಯುವ ಹಾಗೆ ಮಾಡುವುದು.
ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ ನೀತಿವಂತರ ದಾರಿಯನ್ನು ನೀನು ಹಿಡಿಯುವೆ.
21 ೨೧ ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.
ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.
22 ೨೨ ದುಷ್ಟರಾದರೋ ದೇಶದೊಳಗಿಂದ ತೆಗೆದುಹಾಕಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.
ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.

< ಜ್ಞಾನೋಕ್ತಿಗಳು 2 >