< ಜ್ಞಾನೋಕ್ತಿಗಳು 13 >

1 ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.
ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ; ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.
2 ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ.
ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ, ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.
3 ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.
ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
4 ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.
ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ; ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.
5 ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ.
ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ, ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.
6 ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು.
ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ; ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.
7 ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.
ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ; ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.
8 ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.
ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ; ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.
9 ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.
ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ; ದುಷ್ಟರ ದೀಪವು ಆರಿಹೋಗುವುದು.
10 ೧೦ ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.
ಎಲ್ಲಿ ಗರ್ವವೋ ಅಲ್ಲಿ ಕಲಹ; ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.
11 ೧೧ ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು.
ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು; ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.
12 ೧೨ ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.
ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ; ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.
13 ೧೩ ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.
ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.
14 ೧೪ ಜ್ಞಾನಿಯ ಬೋಧನೆ ಜೀವದ ಬುಗ್ಗೆ, ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.
ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.
15 ೧೫ ಸುಬುದ್ಧಿಯು ದಯಾಸ್ಪದವು, ದ್ರೋಹಿಯ ಮಾರ್ಗವು ನಾಶಕರ.
ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ; ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.
16 ೧೬ ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು.
ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.
17 ೧೭ ಕೆಟ್ಟ ದೂತನು ಕೇಡಿಗೆ ಬೀಳುವನು, ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು.
ದುಷ್ಟ ದೂತನು ಕೇಡಿಗೆ ಬೀಳುತ್ತಾನೆ; ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.
18 ೧೮ ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, ಗದರಿಕೆಯನ್ನು ಗಮನಿಸುವವನಿಗೆ ಮಾನ.
ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು; ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.
19 ೧೯ ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ; ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.
20 ೨೦ ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟಪಡುವನು.
ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.
21 ೨೧ ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು.
ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ; ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.
22 ೨೨ ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.
ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು; ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.
23 ೨೩ ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.
ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ; ಅನ್ಯಾಯವು ಅದನ್ನು ಹಾರಿಸಿಬಿಡುವುದು.
24 ೨೪ ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.
ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ; ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.
25 ೨೫ ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, ದುಷ್ಟನ ಹೊಟ್ಟೆ ಹಸಿದಿರುವುದು.
ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.

< ಜ್ಞಾನೋಕ್ತಿಗಳು 13 >