< ಅರಣ್ಯಕಾಂಡ 8 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ, ಹೇಳಿದ್ದೇನೆಂದರೆ: 2 “ಆರೋನನು ದೇವಸ್ಥಾನದ ದೀಪಗಳನ್ನು ಕ್ರಮಪಡಿಸುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಾಗಿರುವ ಸ್ಥಳಕ್ಕೆ ಬೆಳಕುಕೊಡುವಂತೆ ಅವುಗಳನ್ನು ಇಡಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದನು. 3 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು. ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಕೊಡುವಂತೆ ಆ ದೀಪಗಳನ್ನು ಕ್ರಮವಾಗಿ ಇಟ್ಟನು. 4 ದೀಪಸ್ತಂಭವೂ, ಅದರ ಬುಡದ ಭಾಗವೂ, ಪುಷ್ಪಾಲಂಕಾರಗಳೂ ಬಂಗಾರದ ನಕಾಸಿ ಕೆಲಸದಿಂದ ಮಾಡಲ್ಪಟ್ಟಿತ್ತು. ಯೆಹೋವನು ತೋರಿಸಿದ ಮಾದರಿಯಂತೆ ಮೋಶೆ ಅದನ್ನು ಮಾಡಿಸಿದನು. 5 ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ, 6 “ನೀನು ಇಸ್ರಾಯೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸಿಬೇಕು. 7 ಅವರನ್ನು ಶುದ್ಧೀಕರಿಸಬೇಕಾದ ಕ್ರಮ ಹೇಗೆಂದರೆ: ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮುಕಿಸಬೇಕು. ಅವರು ಸರ್ವಾಂಗ ಕ್ಷೌರಮಾಡಿಸಿಕೊಳ್ಳಲಿ. ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. 8 ತರುವಾಯ ಅವರು ಸರ್ವಾಂಗಹೊಮಕ್ಕಾಗಿ ಒಂದು ಹೋರಿಯನ್ನೂ ಅದರೊಡನೆ ಸಮರ್ಪಿಸಬೇಕಾದ ಧಾನ್ಯನೈವೇದ್ಯ ಅಂದರೆ ಎಣ್ಣೆ ಬೆರೆಸಿದ ಗೋದಿಯ ಹಿಟ್ಟನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಹೋರಿಯನ್ನು ತೆಗೆದುಕೊಳ್ಳಬೇಕು. 9 ಆಗ ನೀನು ಲೇವಿಯರನ್ನು ದೇವದರ್ಶನ ಗುಡಾರದ ಮುಂದೆ ಕರೆದುಕೊಂಡು ಬಂದು ಇಸ್ರಾಯೇಲರ ಸಮೂಹವನ್ನೆಲ್ಲಾ ಕೂಡಿಸಬೇಕು. 10 ೧೦ ಲೇವಿಯರನ್ನು ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಿದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು. 11 ೧೧ ಲೇವಿಯರು ಯೆಹೋವನ ಸೇವಾಕಾರ್ಯವನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲರ ನಿಮಿತ್ತ ಅವರನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು. 12 ೧೨ “ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು. ನಂತರ ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ, ಸರ್ವಾಂಗಹೋಮವಾಗಿ ಮತ್ತೊಂದು ಹೋರಿಯನ್ನು ಸಮರ್ಪಿಸಬೇಕು. ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು. 13 ೧೩ ನೀನು ಆರೋನನ ಮತ್ತು ಅವನ ಮಕ್ಕಳ ಮುಂದೆ ಲೇವಿಯರನ್ನು ನಿಲ್ಲಿಸಿ ಅವರನ್ನು ನೈವೇದ್ಯದಂತೆ ಯೆಹೋವನಿಗೆ ಸಮರ್ಪಿಸಬೇಕು. 14 ೧೪ ಹೀಗೆ ನೀನು ಲೇವಿಯರನ್ನು ಇಸ್ರಾಯೇಲರಿಂದ ಪ್ರತ್ಯೇಕಿಸಿದಾಗ ಅವರು ನನ್ನ ಸೊತ್ತಾಗುವರು. 15 ೧೫ “ಅದಾದ ನಂತರ ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ನೀನು ಅವರನ್ನು ಶುದ್ಧೀಕರಿಸಿ ನೈವೇದ್ಯದಂತೆ ಸಮರ್ಪಿಸಬೇಕು. 16 ೧೬ ಇಸ್ರಾಯೇಲರಲ್ಲಿ ಇವರು ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಇಸ್ರಾಯೇಲರಲ್ಲಿ ಚೊಚ್ಚಲ ಮಕ್ಕಳಿಗೆ ಬದಲಾಗಿ ನಾನು ಲೇವಿಯರನ್ನು ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ. 17 ೧೭ ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರೂ ಪಶುಗಳೂ ಎಲ್ಲಾ ನನ್ನ ಸ್ವಂತ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದುದನ್ನು ನಾನು ಸಂಹರಿಸಿದಾಗ ಇಸ್ರಾಯೇಲರ ಚೊಚ್ಚಲಾದುದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನು. 18 ೧೮ ನಾನು ಇಸ್ರಾಯೇಲರ ಚೊಚ್ಚಲಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ. 19 ೧೯ ಇಸ್ರಾಯೇಲರಿಗಾಗಿ ದೇವದರ್ಶನ ಗುಡಾರದ ಸೇವಾಕಾರ್ಯವನ್ನು ನಡಿಸುವುದಕ್ಕೂ ದೋಷಪರಿಹಾರವನ್ನು ಮಾಡುವುದಕ್ಕೂ ಲೇವಿಯರನ್ನು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಹೀಗಿರುವುದರಿಂದ ಇಸ್ರಾಯೇಲರು ದೇವಾಲಯದ ಹತ್ತಿರಕ್ಕೆ ಬಂದಾಗ ಅವರಿಗೆ ಅಪಾಯವು ಸಂಭವಿಸುವುದಿಲ್ಲ.” 20 ೨೦ ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆ, ಆರೋನರೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು. 21 ೨೧ ಲೇವಿಯರು ತಮ್ಮನ್ನು ಶುದ್ಧಪಡಿಸಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಆರೋನನು ಅವರನ್ನು ನೈವೇದ್ಯದಂತೆ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ, ಅವರನ್ನು ಶುದ್ಧೀಕರಿಸುವುದಕ್ಕಾಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಿದನು. 22 ೨೨ ಆ ಮೇಲೆ ಲೇವಿಯರು ತಮಗೆ ನೇಮಕವಾದ ಕೆಲಸವನ್ನು ದೇವದರ್ಶನ ಗುಡಾರದಲ್ಲಿ ಆರೋನನ ಮತ್ತು ಅವನ ಮಕ್ಕಳ ಕೈಕೆಳಗೆ ಆರಂಭಿಸಿದರು. ಅವರ ವಿಷಯದಲ್ಲಿ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು. 23 ೨೩ ಪುನಃ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 24 ೨೪ “ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಇಪ್ಪತ್ತೈದು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರು ದೇವದರ್ಶನ ಗುಡಾರದ ಸೇವಮಂಡಳಿಗೆ ಸೇರಬೇಕು. 25 ೨೫ ಅವರು ಐವತ್ತು ವರ್ಷದವರಾದ ನಂತರ ಆ ಮಂಡಳಿಯನ್ನು ಬಿಟ್ಟು ದೇವಾಲಯದ ಸೇವಾಕಾರ್ಯದಿಂದ ಬಿಡುಗಡೆಯಾಗುವರು. 26 ೨೬ ಅಂಥವರು ತಮ್ಮ ಸ್ವಕುಲದವರ ಜೊತೆಯಲ್ಲಿ ದೇವದರ್ಶನ ಗುಡಾರವನ್ನು ಕಾಯುವ ಸೇವೆಯನ್ನು ಮಾಡಬಹುದೇ ಹೊರತು ಅವರಿಂದ ಬೇರೆ ಸೇವಾಕಾರ್ಯವನ್ನು ಮಾಡಿಸಬಾರದು. ಲೇವಿಯರು ಕಾಪಾಡಬೇಕಾದ ಕರ್ತವ್ಯಗಳನ್ನು ನೀನು ಹೀಗೆ ಅವರಿಗೆ ನೇಮಿಸಬೇಕು.”

< ಅರಣ್ಯಕಾಂಡ 8 >