< ಅರಣ್ಯಕಾಂಡ 14 >

1 ಆಗ ಜನಸಮೂಹದವರೆಲ್ಲರೂ ತಮ್ಮ ಸ್ವರ ಎತ್ತಿ ಆ ರಾತ್ರಿಯೆಲ್ಲಾ ಗೋಳಾಡಿದರು.
ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು.
2 ಇಸ್ರಾಯೇಲರೆಲ್ಲರೂ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಗುಣುಗುಟ್ಟಿ, “ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ ದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು
ಇಸ್ರಾಯೇಲರೆಲ್ಲರು ಮೋಶೆಗೂ ಆರೋನನಿಗೂ ವಿರೋಧವಾಗಿ ಗೊಣಗುಟ್ಟಿದರು. ಅವರು, “ನಾವು ಈಜಿಪ್ಟ್ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಮರುಭೂಮಿಯಲ್ಲಾದರೂ ಸತ್ತಿದ್ದರೆ ಚೆನ್ನಾಗಿತ್ತು.
3 ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವುದಕ್ಕೆ ಈ ದೇಶಕ್ಕೆ ಕರೆದುಕೊಂಡು ಬಂದನು. ನಮ್ಮ ಹೆಂಡತಿಯರು ಮತ್ತು ಮಕ್ಕಳು ಬೇರೆಯವರ ಪಾಲಾಗುವರು. ನಾವು ಐಗುಪ್ತ ದೇಶಕ್ಕೆ ತಿರುಗಿ ಹೋಗುವುದು ಒಳ್ಳೆಯದಲ್ಲವೇ” ಎಂದು ಮಾತನಾಡಿಕೊಂಡರು.
ನಾವು ಖಡ್ಗದಿಂದ ಕೊಲೆಯಾಗುವ ಹಾಗೆಯೂ ನಮ್ಮ ಹೆಂಡತಿಯರು ಮಕ್ಕಳು ಸುಲಿಗೆಯಾಗುವ ಹಾಗೆಯೂ ಯೆಹೋವ ದೇವರು ನಮ್ಮನ್ನು ಈ ದೇಶಕ್ಕೆ ಏಕೆ ಬರಮಾಡಿದ್ದಾರೆ? ಈಜಿಪ್ಟ್ ದೇಶಕ್ಕೆ ನಾವು ತಿರುಗಿ ಹೋಗುವುದು ನಮಗೆ ಒಳ್ಳೆಯದಲ್ಲವೋ?
4 ಹೀಗೆ ಅವರು ಒಬ್ಬರ ಸಂಗಡಲೊಬ್ಬರು, “ನಾವು ಬೇರೆ ನಾಯಕನನ್ನು ನೇಮಿಸಿಕೊಂಡು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗೋಣ” ಎಂದು ಮಾತನಾಡಿಕೊಂಡರು.
ನಾವು ನಾಯಕನನ್ನು ನೇಮಿಸಿಕೊಂಡು ಈಜಿಪ್ಟ್ ದೇಶಕ್ಕೆ ಹಿಂದಿರುಗೋಣ ಬನ್ನಿರಿ,” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
5 ಆಗ ಮೋಶೆ ಮತ್ತು ಆರೋನರು ಇಸ್ರಾಯೇಲರ ಸರ್ವಸಮೂಹದವರ ಮುಂದೆ ಅಡ್ಡಬಿದ್ದರು.
ಆಗ ಮೋಶೆಯೂ ಆರೋನನೂ ಇಸ್ರಾಯೇಲರ ಸಮಸ್ತ ಜನರ ಕೂಟದ ಮುಂದೆ ಅಡ್ಡಬಿದ್ದರು.
6 ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
ಇದಲ್ಲದೆ ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,
7 ಅವರು ಇಸ್ರಾಯೇಲರ ಸರ್ವಸಮೂಹದವರಿಗೆ ಹೀಗೆ ಹೇಳಿದರು, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು.
ಇಸ್ರಾಯೇಲರ ಸಮಸ್ತ ಜನಸಮೂಹಕ್ಕೆ, “ಸಂಚರಿಸಿ ನೋಡುವುದಕ್ಕೆ ನಾವು ದಾಟಿಹೋದ ದೇಶವು ಅತ್ಯುತ್ತಮವಾದ ದೇಶವೇ.
8 ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಹಾಲೂ, ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.
ಯೆಹೋವ ದೇವರು ನಮ್ಮನ್ನು ಇಷ್ಟಪಟ್ಟರೆ ಹಾಲೂ ಜೇನೂ ಹರಿಯುವ ದೇಶವಾಗಿರುವ ಆ ದೇಶಕ್ಕೆ ನಮ್ಮನ್ನು ಬರಮಾಡಿ, ಅದನ್ನು ನಮಗೆ ಕೊಡುವರು.
9 ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಇದಲ್ಲದೆ ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ಸುಲಭವಾಗಿ ಜಯಿಸಿಬಿಡುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ, ಯೆಹೋವನು ನಮ್ಮ ಸಂಗಡ ಇದ್ದಾನೆ. ಅವರಿಗೆ ಭಯಪಡಬೇಡಿರಿ” ಎಂದರು.
ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು.
10 ೧೦ ಆದರೆ ಜನಸಮೂಹದವರೆಲ್ಲರೂ ಅವರ ಮಾತುಗಳನ್ನು ಕೇಳದೆ, ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರುವಾಗ, ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಪ್ರಕಾಶಿಸಿ ಇಸ್ರಾಯೇಲರೆಲ್ಲರಿಗೂ ಕಾಣಿಸಿಕೊಂಡಿತು.
ಆಗ ಸಭೆಯವರೆಲ್ಲರೂ ಅವರಿಗೆ ಕಲ್ಲೆಸೆಯಬೇಕೆಂದಿದ್ದರು. ಯೆಹೋವ ದೇವರ ಮಹಿಮೆಯು ದೇವದರ್ಶನ ಗುಡಾರದಲ್ಲಿ ಇಸ್ರಾಯೇಲರಿಗೆಲ್ಲಾ ಪ್ರತ್ಯಕ್ಷವಾಯಿತು.
11 ೧೧ ಯೆಹೋವನು ಮೋಶೆಗೆ, “ಈ ಜನರು ಇನ್ನು ಎಷ್ಟರವರೆಗೆ ನನ್ನನ್ನು ಅಲಕ್ಷ್ಯಮಾಡುವರು? ನಾನು ನಡೆಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರು?
ಆಗ ಯೆಹೋವ ದೇವರು ಮೋಶೆಗೆ, “ಈ ಜನರು ಎಷ್ಟರವರೆಗೆ ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ಮಾಡಿದ ಸಕಲ ಸೂಚಕಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಎಷ್ಟು ಮಾತ್ರಕ್ಕು ನಂಬದೆ ಇರುವರು?
12 ೧೨ ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡುವೆನು. ಈ ಜನರಿಗಿಂತ ನಿನ್ನನ್ನು ದೊಡ್ಡದಾಗಿಯೂ, ಬಲಿಷ್ಠವಾಗಿಯೂ ಇರುವ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲ ಮಾಡುವೆನು. ನಿನ್ನನ್ನು ಅವರಿಗಿಂತ ದೊಡ್ಡದಾದ ಮತ್ತು ಬಲವುಳ್ಳ ಜನಾಂಗವನ್ನಾಗಿ ಮಾಡುವೆನು,” ಎಂದರು.
13 ೧೩ ಅದಕ್ಕೆ ಮೋಶೆಯು ಯೆಹೋವನಿಗೆ, “ನೀನು ಹೀಗೆ ಮಾಡುವುದಾದರೆ ಐಗುಪ್ತ್ಯರು ಈ ಸುದ್ದಿಯನ್ನು ಕೇಳುವರು. ಅವರ ಕೈಯಿಂದ ನೀನು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಈ ಸಂಗತಿಯನ್ನು ಈ ಕಾನಾನ್ ದೇಶದ ನಿವಾಸಿಗಳಿಗೆ ತಿಳಿಸುವರು.
ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ!
14 ೧೪ ಅಲ್ಲದೆ ಯೆಹೋವನಾದ ನೀನು ಇಸ್ರಾಯೇಲರ ಮಧ್ಯದಲ್ಲಿ ಇರುವ ಸಂಗತಿಯನ್ನು, ನೀನು ಇಸ್ರಾಯೇಲರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವುದನ್ನು, ಹಗಲಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಇದ್ದು ಇವರ ಮುಂದೆ ನಡೆದುಹೋಗುವುದಾಗಿ ಹಾಗೂ ನೀನಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಈ ದೇಶದವರು ಕೇಳಿದ್ದಾರೆ.
ಅವರು ಈ ದೇಶದ ನಿವಾಸಿಗಳಿಗೆ ಅದನ್ನು ಹೇಳುವರು. ನೀವು ಈ ಜನರ ಸಂಗಡ ಇದ್ದೀಯೆಂದೂ, ಯೆಹೋವ ದೇವರಾದ ನೀವೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀರಿ ಎಂದೂ ನೀವು ಹಗಲು ಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀರಿ ಎಂದೂ ನೀವಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಎಂದೂ ಅವರು ಈಗಾಗಲೇ ಕೇಳಿದ್ದಾರೆ.
15 ೧೫ ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗದವರು ನಿನ್ನ ವಿಷಯದಲ್ಲಿ,
ಈಗ ನೀವು ಈ ಜನರನ್ನೆಲ್ಲಾ ಕೊಂದುಹಾಕಿದರೆ, ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳು ನಿಮ್ಮ ವಿಷಯದಲ್ಲಿ,
16 ೧೬ “‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ, ಅವರನ್ನು ಅರಣ್ಯದಲ್ಲಿ ಕೊಂದುಹಾಕಿಬಿಟ್ಟನು’ ಎಂದು ಮಾತನಾಡಿಕೊಳ್ಳುವರು.
ಯೆಹೋವ ದೇವರು ಈ ಜನರನ್ನು ಅವರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶಕ್ಕೆ ತರಲಾರದ ಕಾರಣ ಅವರನ್ನು ಮರುಭೂಮಿಯಲ್ಲಿ ಕೊಂದುಹಾಕಿದರು,” ಎಂದು ಹೇಳುವರು.
17 ೧೭ ಈಗ ನೀನು ಹೇಳಿದ ಪ್ರಕಾರ ಯೆಹೋವನ ಬಲವು ದೊಡ್ಡದಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನಿನ್ನ ವಿಷಯದಲ್ಲಿ,
“ಈಗ ನೀವು ಹೇಳಿದ ಪ್ರಕಾರ ಯೆಹೋವ ದೇವರ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.
18 ೧೮ ‘ಯೆಹೋವನು ದೀರ್ಘಶಾಂತನು, ದಯೆಯುಳ್ಳವನು, ಅಪರಾಧ ಪಾಪಗಳನ್ನು ಕ್ಷಮಿಸುವವನು, ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ಹೇಳಿದ್ದಿ.
ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ?
19 ೧೯ ನಾವು ಐಗುಪ್ತ ದೇಶದಿಂದ ಬಂದ ದಿನದಿಂದ ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.
ನಿಮ್ಮ ಪ್ರೀತಿಯು ದೊಡ್ಡದಾಗಿರುವ ಪ್ರಕಾರವೂ ನೀವು ಈಜಿಪ್ಟಿನಿಂದ ಇಲ್ಲಿಯವರೆಗೆ ಈ ಜನರ ಪಾಪಗಳನ್ನು ಮನ್ನಿಸಿದ ಪ್ರಕಾರ ಈಗಲೂ ಈ ಜನರ ಪಾಪವನ್ನು ಮನ್ನಿಸಿರಿ,” ಎಂದು ಬೇಡಿಕೊಂಡನು.
20 ೨೦ ಅದಕ್ಕೆ ಯೆಹೋವನು, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಅವರನ್ನು ಕ್ಷಮಿಸಿದ್ದೇನೆ.
ಆಗ ಯೆಹೋವ ದೇವರು, “ನಿನ್ನ ಮಾತಿನ ಪ್ರಕಾರ ಮನ್ನಿಸಿದ್ದೇನೆ.
21 ೨೧ ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.
ಆದರೆ ನನ್ನ ಜೀವದಾಣೆ, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು.
22 ೨೨ ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ
ಏಕೆಂದರೆ ನನ್ನ ಮಹಿಮೆಯನ್ನೂ, ಈಜಿಪ್ಟ್ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ ನಾನು ಮಾಡಿದ ಸೂಚಕಕಾರ್ಯಗಳನ್ನೂ ನೋಡಿದ ಈ ಸಕಲ ಜನರು, ನನ್ನನ್ನು ಈಗ ಹತ್ತು ಸಾರಿ ಪರೀಕ್ಷಿಸಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,
23 ೨೩ ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.
ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ.
24 ೨೪ ನನ್ನ ದಾಸನಾದ ಕಾಲೇಬನಿಗೆ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದ್ದರಿಂದ ಅವನು ಸಂಚರಿಸಿದ ಆ ದೇಶದಲ್ಲಿ ಅವನನ್ನು ಸೇರಿಸುವೆನು, ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.
ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ಬೇರೆ ಆತ್ಮವಿದ್ದುದರಿಂದಲೂ, ಅವನು ಹೃದಯಪೂರ್ವಕವಾಗಿ ನನ್ನನ್ನು ಹಿಂಬಾಲಿಸಿದ್ದುದರಿಂದಲೂ ಅವನು ಸಂಚರಿಸಿ ಬಂದ ಆ ದೇಶಕ್ಕೆ ಅವನನ್ನು ಸೇರಿಸುವೆನು. ಅವನ ಸಂತಾನವು ಅದನ್ನು ಸ್ವಾಧೀನಪಡಿಸಿಕೊಳ್ಳುವುದು.
25 ೨೫ ಅಮಾಲೇಕ್ಯರೂ, ಕಾನಾನ್ಯರೂ ಆ ತಗ್ಗಿನಲ್ಲಿ ವಾಸವಾಗಿದ್ದಾರೆ. ನೀವು ನಾಳೆ ಹಿಂದಿರುಗಿ ಕೆಂಪು ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಅರಣ್ಯಕ್ಕೆ ಪ್ರಯಾಣಮಾಡಬೇಕು” ಎಂದು ಹೇಳಿದನು.
ಅಮಾಲೇಕ್ಯರೂ, ಕಾನಾನ್ಯರೂ ತಗ್ಗಿನಲ್ಲಿ ವಾಸ ಮಾಡುತ್ತಿರುವುದರಿಂದ ನಾಳೆ ನೀವು ತಿರುಗಿಕೊಂಡು, ಕೆಂಪುಸಮುದ್ರದ ಮಾರ್ಗವಾಗಿ ಮರುಭೂಮಿಗೆ ಹೊರಡಿರಿ,” ಎಂದರು.
26 ೨೬ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,
27 ೨೭ “ನನಗೆ ವಿರುದ್ಧವಾಗಿ ಗುಣುಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ದಿನ ಸಹಿಸಿಕೊಳ್ಳಲಿ? ಇಸ್ರಾಯೇಲರು ನನಗೆ ವಿರುದ್ಧವಾಗಿ ಗುಣುಗುಟ್ಟುವ ಮಾತುಗಳು ನನಗೆ ಕೇಳಿಸಿದವು.
“ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ.
28 ೨೮ ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನು ಹೇಳುವುದೇನೆಂದರೆ, ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಅಂದುಕೊಂಡ ಪ್ರಕಾರವೇ ನಾನು ಮಾಡುತ್ತೇನೆ; ನಿಮ್ಮ ಶವಗಳು ಈ ಅರಣ್ಯದಲ್ಲಿಯೇ ಬೀಳುವವು.
ಆದ್ದರಿಂದ ನೀನು ಅವರಿಗೆ, ‘ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.
29 ೨೯ ನೀವು ನನಗೆ ವಿರುದ್ಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರು ಅಂದರೆ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರೆಲ್ಲರೂ ಅರಣ್ಯದಲ್ಲಿಯೇ ಸಾಯುವರು.
ಈ ಮರುಭೂಮಿಯಲ್ಲಿ ನನಗೆ ವಿರೋಧವಾಗಿ ಗೊಣಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸತ್ತು ಹೋಗುವಿರಿ.
30 ೩೦ ಯೆಫುನ್ನೆಯ ಮಗನಾದ ಕಾಲೇಬನು ಮತ್ತು ನೂನನ ಮಗನಾದ ಯೆಹೋಶುವನು ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಸೇರುವುದಿಲ್ಲ.
ಯೆಫುನ್ನೆಯ ಮಗ ಕಾಲೇಬನೂ, ನೂನನ ಮಗ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡುವುದಕ್ಕೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವೆಲ್ಲರೂ ಬಾರದೆ ಇರುವಿರಿ.
31 ೩೧ ಆದರೆ ಇತರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದು ಹೇಳಿದ ದೇಶವನ್ನು ಅವರು ಅನುಭವಿಸುವರು.
ಆದರೆ ಸೆರೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು, ನೀವು ಅಲಕ್ಷ್ಯಮಾಡಿದ ದೇಶವನ್ನು ಅವರು ಅನುಭವಿಸುವರು.
32 ೩೨ ನೀವಂತೂ ಈ ಅರಣ್ಯದಲ್ಲಿ ಸಾಯುವಿರಿ.
ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಮರುಭೂಮಿಯಲ್ಲಿ ಬೀಳುವುವು.
33 ೩೩ ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲಿ ಬೀಳುವವರೆಗೂ ನೀವು ಮಾಡಿದ ದ್ರೋಹದ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನಲ್ವತ್ತು ವರ್ಷ ಮರುಭೂಮಿಯಲ್ಲಿ ವಾಸಿಸಬೇಕು.
ಇದಲ್ಲದೆ ನಿಮ್ಮ ಮಕ್ಕಳು ನಲವತ್ತು ವರುಷ ಮರುಭೂಮಿಯಲ್ಲಿ ಅಲೆದಾಡಿ, ನಿಮ್ಮ ಹೆಣಗಳು ಮರುಭೂಮಿಯಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಅಪನಂಬಿಗಸ್ತಿಕೆಯನ್ನು ಅನುಭವಿಸುವಿರಿ.
34 ೩೪ ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.
35 ೩೫ ಇದು ಯೆಹೋವನೆಂಬ ನಾನೇ ಹೇಳಿದ ಮಾತು. ನನಗೆ ವಿರುದ್ಧವಾಗಿ ಸೇರಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಪ್ರಕಾರವೇ ಮಾಡುತ್ತೇನೆ. ಈ ಅರಣ್ಯದಲ್ಲಿಯೇ ಇವರೆಲ್ಲರೂ ಸಾಯಬೇಕು’” ಎಂದು ಹೇಳಿದನು.
ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು.
36 ೩೬ ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟ ಮನುಷ್ಯರು ಹಿಂದಿರುಗಿ ಬಂದು ಆ ದೇಶದ ವಿಷಯದಲ್ಲಿ ಅಶುಭ ಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟುವಂತೆ ಮಾಡಿದರು.
ದೇಶವನ್ನು ಪರೀಕ್ಷಿಸುವುದಕ್ಕೆ ಮೋಶೆಯ ಅಪ್ಪಣೆಯ ಮೇರೆಗೆ ಹಿಂದಿರುಗಿ, ಆ ದೇಶದ ವಿಷಯವಾಗಿ ಕೆಟ್ಟ ಸುದ್ದಿಯನ್ನು ಎಬ್ಬಿಸಿ, ಸಮಸ್ತ ಸಭೆಯನ್ನು ಮೋಶೆಗೆ ವಿರೋಧವಾಗಿ ಗೊಣಗುಟ್ಟುವಂತೆ ಮಾಡಿದರು.
37 ೩೭ ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವ ದೇವರ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
38 ೩೮ ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಮನುಷ್ಯರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಉಳಿದರು.
ಆದರೆ ದೇಶವನ್ನು ಪರೀಕ್ಷಿಸುವುದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ಉಳಿದರು.
39 ೩೯ ಮೋಶೆ ಯೆಹೋವನ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ತಿಳಿಸಲಾಗಿ ಅವರು ಬಹಳ ದುಃಖಪಟ್ಟರು.
ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು.
40 ೪೦ ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ; ಯೆಹೋವನು ವಾಗ್ದಾನ ಮಾಡಿದ ಸ್ಥಳಕ್ಕೆ ಹತ್ತೋಣ ಬನ್ನಿ” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋದರು.
ಮರುದಿವಸ ಬೆಳಿಗ್ಗೆ ಅವರು ಎದ್ದು, ಬೆಟ್ಟದ ತುದಿಯ ಮೇಲಕ್ಕೆ ಏರಿ, “ಇಗೋ, ಯೆಹೋವ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವುದಕ್ಕೆ ಇದ್ದೇವೆ. ನಾವು ಪಾಪಮಾಡಿದ್ದೇವೆ,” ಎಂದರು.
41 ೪೧ ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ಇದು ಸಫಲವಾಗುವುದಿಲ್ಲ.
ಆಗ ಮೋಶೆಯು, “ನೀವು ಏಕೆ ಹೀಗೆ ಯೆಹೋವ ದೇವರ ಆಜ್ಞೆಯನ್ನು ಮೀರುತ್ತೀರಿ? ಅದು ಸಫಲವಾಗುವುದಿಲ್ಲ.
42 ೪೨ ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ, ಹತ್ತಬೇಡಿರಿ. ನೀವು ಶತ್ರುಗಳ ಮುಂದೆ ನಿಲ್ಲಲಾರದೆ ಬಿದ್ದು ಸತ್ತುಹೋಗುವಿರಿ.
ಯೆಹೋವ ದೇವರು ನಿಮ್ಮ ಸಂಗಡ ಇಲ್ಲ ಅದಕ್ಕಾಗಿ ನಿಮ್ಮ ಶತ್ರುಗಳು ನಿಮ್ಮನ್ನು ಪರಾಜಯಗೊಳಿಸದಂತೆ ಏರಿ ಹೋಗಬೇಡಿರಿ.
43 ೪೩ ಅಲ್ಲಿ ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿ ಇರುವುದರಿಂದ ನೀವು ಅವರ ಕತ್ತಿಯಿಂದ ಸತ್ತುಹೋಗುವಿರಿ. ನೀವು ಯೆಹೋವನ ಮಾತನ್ನು ಅನುಸರಿಸದೆ ತಿರುಗಿಬಿದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.
ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿರುವುದರಿಂದ ನೀವು ಅವರ ಖಡ್ಗಕ್ಕೆ ತುತ್ತಾಗುವಿರಿ. ನೀವು ಯೆಹೋವ ದೇವರ ಕಡೆಯಿಂದ ತಿರುಗಿದ ಕಾರಣ, ಆತನು ನಿಮ್ಮ ಸಂಗಡ ಇರುವುದಿಲ್ಲ,” ಎಂದನು.
44 ೪೪ ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತಿದರು. ಯೆಹೋವನ ಒಡಂಬಡಿಕೆಯ ಮಂಜೂಷವಾಗಲಿ ಮೋಶೆಯಾಗಲಿ ಪಾಳೆಯವನ್ನು ಬಿಟ್ಟು ಹೊರಡಲಿಲ್ಲ.
ಆದರೆ ಅವರು ಹಟಮಾಡಿ, ಬೆಟ್ಟದ ತುದಿಯ ಮೇಲೆ ಏರಿಹೋದರು. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.
45 ೪೫ ಆಗ ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಮತ್ತು ಕಾನಾನ್ಯರೂ ಇಳಿದು ಬಂದು ಇಸ್ರಾಯೇಲರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಸಂಹರಿಸಿದರು.
ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ ಅಟ್ಟಿಬಿಟ್ಟರು.

< ಅರಣ್ಯಕಾಂಡ 14 >