< ಮೀಕನು 5 >

1 ಚಿಯೋನ್ ನಗರವೇ ನಿನ್ನ ಸೇನಾವ್ಯೂಹಗಳನ್ನು ಈಗ ಒಟ್ಟುಗೂಡಿಸು. ಆಹಾ ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು. 2 ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಕುಲದ ಮೂಲವು ಪುರಾತನವೂ ಮತ್ತು ಅನಾದಿಯೂ ಆದದ್ದು. 3 ಹೀಗಿರಲು ಪ್ರಸವವೇದನೆ ಪಡತಕ್ಕವಳು ಮಗನನ್ನು ಹೆರುವವರೆಗೂ ನನ್ನ ಜನರು ಶತ್ರುವಶವಾಗಿರುವಂತೆ ಮಾಡುವೆನು. ಅನಂತರ ಆ ಮಗನ ಸಹೋದರರಲ್ಲಿ ಉಳಿದವರು ಇಸ್ರಾಯೇಲರೊಂದಿಗೆ ಹಿಂದಿರುಗುವರು 4 ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು. 5 ಆತನೇ ನಮಗೆ ಸಮಾಧಾನಪ್ರದನು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಠರನ್ನು ನೇಮಿಸುವೆವು. 6 ಅವರ ಶಸ್ತ್ರಾಸ್ತ್ರಗಳು ಅಶ್ಶೂರ ದೇಶವನ್ನು ಧ್ವಂಸಮಾಡುವುದು. ನಿಮ್ರೋದ್ ಸೀಮೆಯ ಪ್ರವೇಶಸ್ಥಾನಗಳು ಅವರ ಖಡ್ಗಕ್ಕೆ ತುತ್ತಾಗುವವು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಪ್ರಾಂತ್ಯವನ್ನು ತುಳಿದುಹಾಕುವಾಗ ಆ ಸಮಾಧಾನಪ್ರದನು ನಮ್ಮನ್ನು ಅವರ ಕೈಯೊಳಗಿಂದ ಉದ್ಧರಿಸುವನು. 7 ಯೆಹೋವನ ವರವಾದ ಇಬ್ಬನಿಯೂ ಮತ್ತು ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಮಾನವರ ಪ್ರಯತ್ನವಿಲ್ಲದೆ ಹೇಗೆ ಸಮೃದ್ಧಿಯಾಗಿ ಬೆಳೆಯುವವು, ಮಾನವರ ನೆರವನ್ನು ನಿರೀಕ್ಷಿಸದೆ ಹೇಗೆ ಹಿತಕರವಾಗಿರುವವೋ, ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವುದು. 8 ಇದಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು, ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳ, ಬಹು ಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವರು. 9 ಯಾಕೋಬೇ, ನಿನ್ನ ಕೈ ನಿನ್ನ ವಿರೋಧಿಗಳ ಮೇಲೆ ಎತ್ತಲ್ಪಡಲಿ. ನಿನ್ನ ವೈರಿಗಳೆಲ್ಲಾ ನಿರ್ಮೂಲವಾಗಲಿ. 10 ೧೦ ಯೆಹೋವನು ಇಂತೆನ್ನುತ್ತಾನೆ, “ಆ ದಿನಗಳಲ್ಲಿ ನಿನ್ನ ಕುದುರೆಗಳನ್ನು ನಿನ್ನೊಳಗಿಂದ ಕಡಿದುಬಿಡುವೆನು. ನಿನ್ನ ರಥಗಳನ್ನು ನಾಶಗೊಳಿಸುವೆನು. 11 ೧೧ ನಿನ್ನ ದೇಶದ ಪಟ್ಟಣಗಳನ್ನು ಹಾಳುಮಾಡಿ, ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು. 12 ೧೨ ನಿನ್ನ ಕೈಯಲ್ಲಿನ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನಲ್ಲಿ ಕಣಿಯವರು ಇರುವುದಿಲ್ಲ. 13 ೧೩ ನಿನ್ನ ಮೂರ್ತಿಗಳನ್ನು, ಕಲ್ಲುಕಂಬಗಳನ್ನು ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು. ನಿನ್ನ ಕೈರೂಪಿಸಿದ್ದನ್ನು ಇನ್ನು ಪೂಜಿಸದಂತೆ ಮಾಡುವೆ. 14 ೧೪ ನಿನ್ನ ಅಶೇರವೆಂಬ ವಿಗ್ರಹಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಬಿಟ್ಟು, ನಿನ್ನ ಪಟ್ಟಣಗಳನ್ನು ನಿರ್ಮೂಲಮಾಡುವೆನು. 15 ೧೫ ಅವಿಧೇಯ ಜನಾಂಗಗಳಿಗೆ ಉಗ್ರಕೋಪದಿಂದ ಮುಯ್ಯಿ ತೀರಿಸುವೆನು.”

< ಮೀಕನು 5 >