ಲೂಕನು 8

1 ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ, 2 ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು, 3 ಹೆರೋದನ ಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಹೆಂಡತಿ ಯೋಹಾನಳು, ಸುಸನ್ನಳು, ಇನ್ನು ಬೇರೆ ಅನೇಕರು. ಇವರು ತಮ್ಮ ಸ್ವಂತ ಆಸ್ತಿಯಿಂದ ಅವರಿಗೆ ಉಪಚಾರಮಾಡುತ್ತಿದ್ದರು. 4 ಬಹುಜನರು ಗುಂಪುಗುಂಪಾಗಿ ಬೇರೆ ಬೇರೆ ಪಟ್ಟಣಗಳಿಂದ ಆತನ ಬಳಿಗೆ ಬರುತ್ತಿರಲು ಯೇಸು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನೆಂದರೆ, 5 “ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು. 6 ಬೇರೆ ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವು ಮೊಳೆತು ಬಂದರೂ ತೇವವಿಲ್ಲದ ಕಾರಣ ಒಣಗಿಹೋದವು. 7 ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳೊಳಗೆ ಬಿದ್ದವು. ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅದುಮಿಬಿಟ್ಟವು. 8 ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು, ಮೊಳೆತು, ನೂರರಷ್ಟು ಫಲವನ್ನು ಕೊಟ್ಟವು.” ಈ ಮಾತುಗಳನ್ನು ಹೇಳಿ ಆತನು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಕೂಗಿ ಹೇಳಿದನು. 9 ಯೇಸುವಿನ ಶಿಷ್ಯರು ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ, 10 ೧೦ ಆತನು, “ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೆ ಕೊಡಲಾಗಿದೆ, ಉಳಿದವರಿಗೆ ‘ಕಣ್ಣಿದ್ದರೂ ನೋಡದಂತೆಯೂ, ಕೇಳಿಸಿಕೊಂಡರೂ ಗ್ರಹಿಸದಂತೆಯೂ’ ಸಾಮ್ಯರೂಪವಾಗಿ ಹೇಳಲಾಗುತ್ತದೆ. 11 ೧೧ ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ. 12 ೧೨ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು. 13 ೧೩ ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದು ಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬೀಳಲ್ಪಟ್ಟ ಬೀಜಗಳು. 14 ೧೪ ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು. 15 ೧೫ ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು. 16 ೧೬ “ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಪಾತ್ರೆಯಿಂದ ಮುಚ್ಚುವುದಿಲ್ಲ, ಮಂಚದ ಕೆಳಗೂ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 17 ೧೭ ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ ಮತ್ತು ಪ್ರಕಟವಾಗದೆ ಇರುವಂಥ ಒಂದು ಗುಟ್ಟೂ ಇರುವುದಿಲ್ಲ, ಅದು ಬಟ್ಟಬಯಲಾಗುವುದು. 18 ೧೮ ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು. 19 ೧೯ ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು. 20 ೨೦ ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ, 21 ೨೧ ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು. 22 ೨೨ ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು. 23 ೨೩ ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು. 24 ೨೪ ಹೀಗಿರಲಾಗಿ ಅವರು ಆತನ ಹತ್ತಿರ ಬಂದು, “ಗುರುವೇ, ಗುರುವೇ, ನಾವು ಸಾಯುತ್ತಿದ್ದೇವೆ” ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರಿನ ಅಲೆಗಳನ್ನೂ ಗದರಿಸಿದನು. ಆಗ ಅವು ನಿಂತು, ಶಾಂತವಾಯಿತು. 25 ೨೫ ತರುವಾಯ ಆತನು, “ನಿಮ್ಮ ನಂಬಿಕೆ ಎಲ್ಲಿ?” ಎಂದು ಅವರನ್ನು ಕೇಳಿದನು. ಅವರು ಭಯಪಟ್ಟು, “ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ. ಅವು ಕೂಡ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ?” ಎಂದು ಆಶ್ಚರ್ಯಪಟ್ಟು ಒಬ್ಬರಿಗೊಬ್ಬರು ಮಾತನಾಡಿಕೊಂಡು. 26 ೨೬ ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಯನ್ನು ತಲುಪಿದರು. 27 ೨೭ ಯೇಸು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಅವನು ಬಹುಕಾಲದಿಂದ ವಸ್ತ್ರವನ್ನೇ ಧರಿಸದೆ ಮನೆಯಲ್ಲಿ ವಾಸಿಸದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು. 28 ೨೮ ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ, “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಅಂದನು. 29 ೨೯ ಏಕೆಂದರೆ, ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆ ಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. 30 ೩೦ ಯೇಸುವು ಅವನಿಗೆ, “ನಿನ್ನ ಹೆಸರೇನೆಂದು?” ಕೇಳಲು ಅವನು, “ನನ್ನ ಹೆಸರು ದಂಡು” ಅಂದನು, ಏಕೆಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದವು. 31 ೩೧ ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು. (Abyssos g12) 32 ೩೨ ಅಲ್ಲಿಯ ಗುಡ್ಡದ ಮೇಲೆ ಹಂದಿಗಳ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮಗೆ ಅಪ್ಪಣೆಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು. ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು, 33 ೩೩ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಉಗ್ರವಾಗಿ ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಕಟ್ಟಿ ಸತ್ತು ಹೋದವು. 34 ೩೪ ಮೇಯಿಸುವವರು ನಡೆದದ್ದನ್ನು ಕಂಡು ಓಡಿ ಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು, 35 ೩೫ ಜನರು ನಡೆದ ಸಂಗತಿಯನ್ನು ನೋಡುವುದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದಾಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿರುವುದನ್ನು ಕಂಡು ಹೆದರಿದರು. 36 ೩೬ ನಡೆದ ಸಂಗತಿಯನ್ನು ನೋಡಿದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು, 37 ೩೭ ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯ ಉಂಟಾದದ್ದರಿಂದ ಅವರು ಆತನನ್ನು, ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು. 38 ೩೮ ಹೊರಡುವಾಗ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನು, ನಾನು ನಿನ್ನ ಜೊತೆಯಲ್ಲಿಯೇ ಇರುತ್ತೇನೆ ಎಂದು ಆತನನ್ನು ಬೇಡಿಕೊಂಡಾಗ, 39 ೩೯ ಆತನು, “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಏನೇನು ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ನಿನ್ನವರಿಗೆ ವಿವರವಾಗಿ ಹೇಳು” ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು. 40 ೪೦ ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನಿಗಾಗಿ ಕಾಯುತ್ತಿದ್ದು ಅವನನ್ನು ಸಂತೋಷದಿಂದ ಸ್ವೀಕರಿಸಿದರು. 41 ೪೧ ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದನು. ಏಕೆಂದರೆ ಹೆಚ್ಚುಕಡಿಮೆ ಹನ್ನೆರಡು ವರ್ಷದವಳಾದ ಅವನ ಒಬ್ಬಳೇ ಮಗಳು ಸಾಯುವ ಸ್ಥಿತಿಯಲ್ಲಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಯೇಸು ಹೋಗುತ್ತಿರುವಲ್ಲಿ ಜನಸಮೂಹವು ಸುತ್ತಲಿನಿಂದಲೂ ಆತನನ್ನು ನೂಕಾಡುತ್ತಿತ್ತು. 42 ೪೨ 43 ೪೩ ಆಗ ಹನ್ನೆರಡು ವರ್ಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. 44 ೪೪ ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. 45 ೪೫ ಆಗ ಯೇಸುವು, “ನನ್ನನ್ನು ಮುಟ್ಟಿದವರಾರು?” ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, “ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ” ಅಂದನು. 46 ೪೬ ಆದರೆ ಯೇಸುವು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು” ಅಂದಾಗ, 47 ೪೭ ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು. 48 ೪೮ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದನು. 49 ೪೯ ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, “ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ” ಅಂದನು. 50 ೫೦ ಆದರೆ ಯೇಸು ಅದನ್ನು ಕೇಳಿ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು” ಎಂದು ಉತ್ತರಕೊಟ್ಟನು. 51 ೫೧ ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ. 52 ೫೨ ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು ಅವರಿಗೆ, “ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಅನ್ನಲು, 53 ೫೩ ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು. 54 ೫೪ ಆದರೆ ಆತನು ಆಕೆಯ ಕೈ ಹಿಡಿದು, “ಮಗಳೇ, ಎದ್ದೇಳು” ಎಂದು ಕೂಗಿ ಹೇಳಿದನು. 55 ೫೫ ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು. 56 ೫೬ ಆಕೆಯ ತಂದೆತಾಯಿಗಳು ಬೆರಗಾದರು. ಆತನು, ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.