< ಯಾಜಕಕಾಂಡ 26 >

1 “ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಅಥವಾ ಕಲ್ಲು ಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವುದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು. 2 ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು. 3 “ನೀವು ನನ್ನ ನಿಯಮಗಳನ್ನು ಕೈಕೊಂಡು, ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ, 4 ನಾನು ಮುಂಗಾರು ಮತ್ತು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವವು ಹಾಗು ತೋಟದ ಮರಗಳು ಹೇರಳವಾದ ಫಲಕೊಡುವವು. 5 ಕಣತುಳಿಸುವ ಕೆಲಸವು ದ್ರಾಕ್ಷಿಯ ಬೆಳೆಯ ಕಾಲದ ತನಕ ಮತ್ತು ದ್ರಾಕ್ಷಿಯ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು, ನೀವು ಸಮೃದ್ಧಿಯಾಗಿ ಊಟ ಮಾಡುವಿರಿ, ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಮಾಡುವಿರಿ. 6 ನಿಮ್ಮ ದೇಶದಲ್ಲಿ ನಿಮಗೆ ಸಮಾಧಾನವನ್ನು ಅನುಗ್ರಹಿಸುವೆನು; ಯಾರ ಭಯವೂ ಇಲ್ಲದೆ ಮಲಗಿಕೊಳ್ಳುವಿರಿ; ದುಷ್ಟಮೃಗಗಳನ್ನು ದೇಶದಿಂದ ತೆಗೆದುಹಾಕುವೆನು; ನಿಮ್ಮ ದೇಶವು ಶತ್ರುಗಳ ಕತ್ತಿಯಿಂದ ಹಾಳಾಗುವುದಿಲ್ಲ. 7 ನೀವು ನಿಮ್ಮ ವೈರಿಗಳನ್ನು ಓಡಿಸುವಿರಿ ಮತ್ತು ಅವರನ್ನು ಕತ್ತಿಯಿಂದ ಸಂಹರಿಸುವಿರಿ. 8 ನಿಮ್ಮಲ್ಲಿ ಐದು ಜನರು ನೂರು ಜನರನ್ನೂ ಮತ್ತು ನೂರು ಜನರು ಹತ್ತು ಸಾವಿರ ಜನರನ್ನೂ ಓಡಿಸುವರು; ನಿಮ್ಮ ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು. 9 ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ಬಹುಸಂತಾನವನ್ನು ಕೊಟ್ಟು ಹೆಚ್ಚಿಸುವೆನು; ನಿಮ್ಮೊಂದಿಗೆ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು. 10 ೧೦ ನೀವು ಬಹುದಿನದಿಂದ ಇಟ್ಟುಕೊಂಡಿರುವ ಹಳೆಯ ಧಾನ್ಯವನ್ನು ಊಟಮಾಡುವಿರಿ; ಹೊಸದಕ್ಕೆ ಸ್ಥಳ ಉಂಟಾಗುವಂತೆ ಹಳೆಯದನ್ನು ತೆಗೆಯುವಿರಿ. 11 ೧೧ ನಾನು ನಿಮ್ಮ ನಡುವೆ ವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವುದಿಲ್ಲ. 12 ೧೨ ನಿಮ್ಮ ನಡುವೆ ತಿರುಗಾಡುತ್ತಾ ನಿಮಗೆ ದೇವರಾಗಿರುವೆನು, ನೀವು ನನಗೆ ಪ್ರಜೆಯಾಗಿರುವಿರಿ. 13 ೧೩ ನೀವು ಐಗುಪ್ತ್ಯರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ; ನಿಮ್ಮನ್ನು ಕುಗ್ಗಿಸಿದ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನು. 14 ೧೪ “ಆದರೆ ನೀವು ನನ್ನ ಮಾತನ್ನು ಕೇಳದೆ ಈ ಆಜ್ಞೆಗಳನ್ನೆಲ್ಲಾ ಅನುಸರಿಸದೆ, 15 ೧೫ ನನ್ನ ನಿಯಮಗಳನ್ನು ಬೇಡವೆಂದು ನನ್ನ ವಿಧಿಗಳನ್ನು ತಳ್ಳಿಬಿಟ್ಟರೆ ನೀವು ನನ್ನ ಆಜ್ಞೆಗಳನ್ನು ಅನುಸರಿಸದೆ ನನ್ನ ನಿಬಂಧನೆಯನ್ನು ಮೀರಿ ನಡೆದರೆ, 16 ೧೬ ನಾನು ನಿಮಗೆ ಮಾಡುವುದೇನೆಂದರೆ, ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವುದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು. 17 ೧೭ ನಾನು ನಿಮ್ಮ ಮೇಲೆ ಉಗ್ರಕೋಪಗೊಳ್ಳುವುದರಿಂದ ನೀವು ನಿಮ್ಮ ಶತ್ರುಗಳ ಮುಂದೆ ಸೋತು ಹೋಗುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು; ಯಾರೂ ಬೆನ್ನಟ್ಟಿ ಬರದಿದ್ದರು ನೀವು ಹೆದರಿ ಓಡುವಿರಿ. 18 ೧೮ “ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಕೊಡದೆ ಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ನಿಮ್ಮನ್ನು ಶಿಕ್ಷಿಸುವೆನು. 19 ೧೯ ನಿಮ್ಮ ಗರ್ವಕ್ಕೆ ಕಾರಣವಾದ ಬಲವನ್ನು ಮುರಿಯುವೆನು. ನಿಮ್ಮ ಮೇಲಿರುವ ಆಕಾಶವನ್ನು ಕಬ್ಬಿಣದಂತೆಯೂ ಹಾಗು ನೀವು ಸಾಗುವಳಿಮಾಡುವ ಭೂಮಿಯನ್ನು ತಾಮ್ರದಂತೆಯೂ ಮಾಡುವೆನು. 20 ೨೦ ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು; ನಿಮ್ಮ ಭೂಮಿಯಲ್ಲಿ ಬೆಳೆಯಾಗುವುದಿಲ್ಲ, ತೋಟಗಳ ಮರಗಳು ಫಲ ಕೊಡುವುದಿಲ್ಲ. 21 ೨೧ “ನೀವು ನನ್ನ ಮಾತನ್ನು ಕೇಳದೆ ನನ್ನ ವಿರುದ್ಧವಾಗಿ ನಡೆದರೆ ನಾನು ನಿಮ್ಮ ಪಾಪಗಳ ನಿಮಿತ್ತ ಇನ್ನೂ ಏಳರಷ್ಟಾಗಿ ನಿಮ್ಮನ್ನು ಬಾಧಿಸುವೆನು. 22 ೨೨ ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ. 23 ೨೩ “ಇಷ್ಟು ಶಿಕ್ಷೆಗಳಿಂದಲೂ ನೀವು ನನ್ನ ಆಜ್ಞೆಗೆ ಒಳಗಾಗದೆ ನನಗೆ ವಿರೋಧವಾಗಿ ನಡೆದರೆ, 24 ೨೪ ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಬಾಧಿಸುವೆನು. 25 ೨೫ ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನೆಯನ್ನು ಮೀರಿದ್ದರಿಂದ ಆ ಕತ್ತಿಯು ಪ್ರತಿದಂಡನೆಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗ ಉಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ. 26 ೨೬ ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ. 27 ೨೭ “ಇದನ್ನೆಲ್ಲಾ ನೀವು ಅನುಭವಿಸಿದ ಮೇಲೆಯೂ ಇನ್ನೂ ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ, 28 ೨೮ ನಾನು ನಿಮ್ಮ ಮೇಲೆ ಕೋಪಗೊಂಡವನಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟಾಗಿ ಶಿಕ್ಷಿಸುವೆನು. 29 ೨೯ ನೀವು ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳ ಮಾಂಸವನ್ನೇ ತಿನ್ನುವಿರಿ. 30 ೩೦ ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು. 31 ೩೧ ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಪರಿಮಳವನ್ನು ನಾನು ಮೂಸಿಯೂ ನೋಡುವುದಿಲ್ಲ. 32 ೩೨ ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಹಾಳುಮಾಡುವೆನು; ಅದರಲ್ಲಿ ವಾಸವಾಗಿರುವ ನಿಮ್ಮ ಶತ್ರುಗಳೂ ಅದನ್ನು ನೋಡಿ ಆಶ್ಚರ್ಯಪಡುವರು. 33 ೩೩ ನಿಮ್ಮನ್ನು ಅನ್ಯಜನಗಳಲ್ಲಿ ಚದುರಿಸಿ, ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವುದು, ನಿಮ್ಮ ಪಟ್ಟಣಗಳು ನಾಶವಾಗುವವು. 34 ೩೪ ನೀವು ನಿಮ್ಮ ಶತ್ರುಗಳ ದೇಶದಲ್ಲಿ ಸೆರೆ ಇರುವ ದಿನಗಳಲ್ಲೆಲ್ಲಾ ನಿಮ್ಮ ದೇಶವು ಹಾಳುಬಿದ್ದು ತನಗೆ ಸಲ್ಲಬೇಕಾಗಿದ್ದ ಸಬ್ಬತ್ ಕಾಲವನ್ನು ಅನುಭವಿಸುವುದು; ಅದು ವಿಶ್ರಾಂತಿಯನ್ನು ಹೊಂದಿ ಸಬ್ಬತ್ ಕಾಲವನ್ನು ಅನುಭವಿಸುವುದು. 35 ೩೫ ನೀವು ಅದರಲ್ಲಿ ವಾಸವಾಗಿದ್ದಾಗ ಅದಕ್ಕೆ ತಕ್ಕ ಸಬ್ಬತ್ ಕಾಲದಲ್ಲಿ ದೊರೆಯದ ವಿಶ್ರಾಂತಿಯನ್ನು, ಅದು ಹಾಳುಬಿದ್ದಿರುವ ಎಲ್ಲಾ ದಿನಗಳಲ್ಲಿ ಅನುಭವಿಸುವುದು. 36 ೩೬ “ನಿಮ್ಮಲ್ಲಿ ಯಾರಾರು ಶತ್ರುಗಳ ದೇಶದಲ್ಲಿ ಉಳಿದಿರುವರೋ ಅವರ ಹೃದಯಗಳಲ್ಲಿ ನಾನು ಭೀತಿಯನ್ನು ಹುಟ್ಟಿಸುವೆನು. ಗಾಳಿಯಿಂದ ಬಡಿದಾಡುವ ಉದುರೆಲೆಯ ಸಪ್ಪಳವೂ ಅವರಲ್ಲಿ ದಿಗಿಲು ಹುಟ್ಟಿಸುವುದು. ಅವರು ಆ ಸಪ್ಪಳವನ್ನು ಕೇಳಿ ಕತ್ತಿಯ ಎದುರಿನಿಂದ ಓಡಿಹೋಗುವವರಂತೆ ಓಡಿಹೋಗುವರು. ಯಾರೂ ಬೆನ್ನಟ್ಟಿ ಬಾರದಿರುವಾಗಲೂ ಅವರು ಓಡಿಹೋಗಿ ಬೀಳುವರು. 37 ೩೭ ಯಾರೂ ಓಡಿಸದಿದ್ದರೂ ಕತ್ತಿಗೆ ಹೆದರಿ ಓಡುವವರಂತೆ ಒಬ್ಬರ ಮೇಲೊಬ್ಬರು ಬೀಳುವರು; ಶತ್ರುಗಳ ಮುಂದೆ ನಿಲ್ಲಲಾರದೆ ತತ್ತರಿಸುವಿರಿ. 38 ೩೮ ಅನ್ಯಜನಗಳಲ್ಲಿ ಚದರಿಸಲ್ಪಟ್ಟು ಕಾಣಿಸದೆ ಹೋಗುವಿರಿ, ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ನುಂಗಿಬಿಡುವುದು. 39 ೩೯ ನಿಮ್ಮಲ್ಲಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ಮತ್ತು ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷೀಣವಾಗಿ ಹೋಗುವರು. 40 ೪೦ “ಆದರೆ ಅವರು ತಾವೂ ಹಾಗು ತಮ್ಮ ಪೂರ್ವಿಕರು ನನಗೆ ದ್ರೋಹಿಗಳಾಗಿ ಪಾಪಮಾಡಿದವರೆಂದೂ ಅರಿಕೆಮಾಡಿದರೆ, ತಾವು ನನಗೆ ವಿರೋಧವಾಗಿ ನಡೆದುದರಿಂದಲೇ 41 ೪೧ ನಾನು ಅವರಿಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶದಲ್ಲಿ ಸೆರೆಯವರನ್ನಾಗಿ ಮಾಡಬೇಕಾಯಿತೆಂದೂ ಒಪ್ಪಿ, ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆ ಬಾಗಿ ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವುದಾದರೆ, 42 ೪೨ ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವರಿಗೆ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನೆರವೇರಿಸುವೆನು; ಅವರ ಸ್ವದೇಶವನ್ನೂ ನಾನು ದಯೆಯಿಂದ ಜ್ಞಾಪಿಸಿಕೊಳ್ಳುವೆನು. 43 ೪೩ ಅವರು ಬಿಟ್ಟುಹೋದ ಸ್ವದೇಶವು ನಿರ್ಜನವಾಗಿ ಬಿದ್ದಿರುವಾಗ ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು. ಅವರು ಯೆಹೋವನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣವೇ ತಮ್ಮ ಪಾಪದ ಫಲವನ್ನು ಅನುಭವಿಸಬೇಕಾಗಿರುವುದು. 44 ೪೪ ಆದರೂ ಅವರು ಶತ್ರುಗಳ ದೇಶದಲ್ಲಿರುವಾಗಲೂ ನಾನು ಅವರನ್ನು ಬೇಡವೆನ್ನುವುದಿಲ್ಲ, ತಾತ್ಸಾರಮಾಡುವುದಿಲ್ಲ; ನಾನು ಅವರಿಗೆ ಮಾಡಿದ ಒಡಂಬಡಿಕೆಯನ್ನು ಮೀರುವುದಿಲ್ಲ, ಅವರನ್ನು ಇಲ್ಲದಂತೆ ಮಾಡುವುದಿಲ್ಲ; ನಾನು ಅವರ ದೇವರಾದ ಯೆಹೋವನಲ್ಲವೇ. 45 ೪೫ ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಎಲ್ಲಾ ಜನಾಂಗಗಳ ಎದುರಿನಲ್ಲಿಯೇ ಐಗುಪ್ತದೇಶದೊಳಗಿಂದ ಬರಮಾಡಿದೆನಲ್ಲವೇ. ನಾನು ಯೆಹೋವನು” ಎಂಬುದೇ. 46 ೪೬ ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ಕೊಟ್ಟ ಆಜ್ಞಾವಿಧಿಗಳೇ ಇವು.

< ಯಾಜಕಕಾಂಡ 26 >