< ಯಾಜಕಕಾಂಡ 14 >

1 ಯೆಹೋವನು ಮೋಶೆಯೊಂದಿಗೆ ಮಾತನಾಡಿ,
ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
2 “ಕುಷ್ಠರೋಗಿಯು ಶುದ್ಧನಾಗುವ ದಿನದಲ್ಲಿ ಅವನ ವಿಷಯವಾಗಿ ನಡೆಸಬೇಕಾದ ಕ್ರಮ ಹೇಗೆಂದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಹೋಗಬೇಕು.
“ಚರ್ಮರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ. ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
3 ಯಾಜಕನು ಪಾಳೆಯದ ಹೊರಗೆ ಹೋಗಿ ಅವನಲ್ಲಿರುವ ಕುಷ್ಠವು ವಾಸಿಯಾಗಿದೆಯೋ ಎಂದು ಪರೀಕ್ಷಿಸಬೇಕು.
ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು. ಚರ್ಮರೋಗದಿಂದ ರೋಗಿಯು ಗುಣವಾದನೆಂದು ಯಾಜಕನು ಪರೀಕ್ಷಿಸಿದರೆ,
4 ವಾಸಿಯಾಗಿದೆ ಎಂದು ಕಂಡು ಬಂದರೆ ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಸಜೀವವಾದ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕೆಂದು ಯಾಜಕನು ಆಜ್ಞಾಪಿಸಬೇಕು.
ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು.
5 ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಆಜ್ಞಾಪಿಸಬೇಕು.
ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
6 “ಅವನು ಮತ್ತೊಂದು ಪಕ್ಷಿಯನ್ನು, ಆ ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ಹರಿಯುವ ನೀರಿನ ಮೇಲೆ ವಧಿಸಿದ ಆ ಮೊದಲನೆಯ ಪಕ್ಷಿಯ ರಕ್ತದಲ್ಲಿ ಈ ಎಲ್ಲಾ ವಸ್ತುಗಳನ್ನು ಮತ್ತು ಆ ಪಕ್ಷಿಯನ್ನು ಸಜೀವವಾಗಿಯೇ ಅದ್ದಬೇಕು.
ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಂಡು, ಹರಿಯುವ ನೀರಿನ ಬಳಿಯಲ್ಲಿ ವಧಿಸಿದ ಆ ಪಕ್ಷಿಯ ರಕ್ತದಲ್ಲಿ ಅದ್ದಿ,
7 ಆಮೇಲೆ ಅವನು ಕುಷ್ಠರೋಗದ ವಿಷಯದಲ್ಲಿ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಆ ರಕ್ತವನ್ನು ಚಿಮುಕಿಸಿ, ಅವನನ್ನು ಶುದ್ಧನೆಂದು ನಿರ್ಣಯಿಸಿ, ಆ ಜೀವವುಳ್ಳ ಪಕ್ಷಿಯನ್ನು ಅಡವಿಯ ಕಡೆಗೆ ಬಿಟ್ಟುಬಿಡಬೇಕು.
ಚರ್ಮರೋಗದಿಂದ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ, ಅವನನ್ನು ಶುದ್ಧನೆಂದು ನುಡಿದು, ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟುಬಿಡಬೇಕು.
8 ಆಗ ಶುದ್ಧಮಾಡಿಸಿಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸರ್ವಾಂಗಕ್ಷೌರ ಮಾಡಿಸಿಕೊಂಡು ಸ್ನಾನಮಾಡಿದ ಮೇಲೆ ಶುದ್ಧನಾಗುವನು; ತರುವಾಯ ಅವನು ಪಾಳೆಯದೊಳಗೆ ಬರಬಹುದು; ಆದರೂ ಏಳು ದಿನಗಳ ತನಕ ತನ್ನ ಡೇರೆಯ ಹೊರಗೆ ಇರಬೇಕು.
“ಶುದ್ಧವಾಗುವುದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ, ತನ್ನ ಎಲ್ಲಾ ಕೂದಲನ್ನು ಬೋಳಿಸಿಕೊಂಡು, ತಾನು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು. ತರುವಾಯ ಅವನು ಪಾಳೆಯದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳವರೆಗೆ ಕಾಯಬೇಕು.
9 ಏಳನೆಯ ದಿನದಲ್ಲಿ ತನ್ನ ತಲೆಗೂದಲು, ಗಡ್ಡ, ಹುಬ್ಬು, ಮೈಗೂದಲು ಇವುಗಳನ್ನೆಲ್ಲಾ ಕ್ಷೌರಮಾಡಿಸಿಕೊಂಡು, ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಆಗ ಅವನು ಶುದ್ಧನಾಗುವನು.
ಆದರೆ ಏಳನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ, ಗಡ್ಡವನ್ನೂ, ತನ್ನ ಕಣ್ಣುಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಬೋಳಿಸಿಕೊಳ್ಳಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
10 ೧೦ “ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನು, ಪೂರ್ಣಾಂಗವಾದ ಒಂದು ವರ್ಷದ ಕುರಿಯನ್ನು, ನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಒಂಭತ್ತು ಸೇರು ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತೆಗೆದುಕೊಂಡು ಬರಬೇಕು.
“ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.
11 ೧೧ ಶುದ್ಧಿ ಮಾಡುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯೆಹೋವ ದೇವರ ಮುಂದೆ ನಿಲ್ಲಿಸಬೇಕು.
12 ೧೨ ಯಾಜಕನು ಆ ಟಗರುಗಳಲ್ಲಿ ಒಂದನ್ನು ಮತ್ತು ಆ ಒಂದು ಸೇರು ಎಣ್ಣೆಯನ್ನು ಪ್ರಾಯಶ್ಚಿತ್ತಯಜ್ಞವಾಗಿ ಸಮರ್ಪಿಸಬೇಕು. ಅವುಗಳನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು.
“ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಂಡು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸಿ, ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
13 ೧೩ ದೋಷಪರಿಹಾರಕ ಯಜ್ಞಪಶುವನ್ನು ಮತ್ತು ಸರ್ವಾಂಗಹೋಮ ಪಶುವನ್ನು ವಧಿಸುವ ಸ್ಥಳದಲ್ಲೇ ಅಂದರೆ ದೇವಸ್ಥಾನದ ಪ್ರಾಕಾರದೊಳಗೆ ಆ ಟಗರು ವಧಿಸಲ್ಪಡಬೇಕು. ಏಕೆಂದರೆ ದೋಷಪರಿಹಾರಕ ಯಜ್ಞದ್ರವ್ಯದಂತೆಯೇ ಪ್ರಾಯಶ್ಚಿತ್ತ ಯಜ್ಞದ್ರವ್ಯವೂ ಯಾಜಕನಿಗೆ ಸಲ್ಲತಕ್ಕದ್ದು, ಅದು ಮಹಾಪರಿಶುದ್ಧವಾಗಿವೆ.
ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.
14 ೧೪ ಆಗ ಯಾಜಕನು ಆ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು.
ಯಾಜಕನು ಪ್ರಾಯಶ್ಚಿತ್ತ ಬಲಿಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಮತ್ತು ಯಾಜಕನು ಅದನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿನ ಮೇಲೆಯೂ, ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಹಚ್ಚಬೇಕು.
15 ೧೫ ಆಗ ಯಾಜಕನು ಆ ಒಂದು ಸೇರು ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
ಯಾಜಕನು ಒಂದನೆಯ ಮೂರು ಭಾಗದಷ್ಟು ಎಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
16 ೧೬ ತನ್ನ ಬಲಗೈಯ ಬೆರಳನ್ನು ಅದರಲ್ಲಿ ಅದ್ದಿ, ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಬೆರಳಿನಿಂದ ಚಿಮುಕಿಸಬೇಕು.
ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ, ತನ್ನ ಬೆರಳಿನಿಂದ ಆ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
17 ೧೭ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆ ಮತ್ತು ಅವನ ಬಲಗೈಯ ಹೆಬ್ಬೆರಳಿನ ಮೇಲೆ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಹಚ್ಚಬೇಕು. ಅದೇ ರೀತಿ ಪ್ರಾಯಶ್ಚಿತ್ತ ಬಲಿಯ ರಕ್ತದ ಮೇಲೆ ಹಚ್ಚಬೇಕು.
18 ೧೮ ಅವನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದುಬಿಡಬೇಕು. ಹೀಗೆ ಯಾಜಕನು ಯೆಹೋವನ ಸನ್ನಿಧಿಯಲ್ಲಿ ಅವನ ದೋಷವನ್ನು ಪರಿಹರಿಸುವನು.
ಯಾಜಕನ ಕೈಯಲ್ಲಿರುವ ಉಳಿದ ಆ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
19 ೧೯ “ಅದಲ್ಲದೆ ಯಾಜಕನು ಶುದ್ಧಮಾಡಿಸಿಕೊಳ್ಳುವವನ ಅಪವಿತ್ರತೆಯನ್ನು ಹೋಗಲಾಡಿಸುವುದಕ್ಕೆ ಆ ಕುರಿಯನ್ನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಿ ಅವನ ದೋಷವನ್ನು ಪರಿಹರಿಸುವನು. ಆ ಮೇಲೆ ಯಾಜಕನು ಆ ಎರಡನೆಯ ಟಗರುಮರಿಯನ್ನು ಸರ್ವಾಂಗಹೋಮಕ್ಕಾಗಿ ವಧಿಸಬೇಕು.
“ಯಾಜಕನು ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಶುದ್ಧಮಾಡಿಸಿಕೊಳ್ಳುವವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ತರುವಾಯ ಅವನು ದಹನಬಲಿಯ ಪ್ರಾಣಿಯನ್ನು ವಧಿಸಬೇಕು.
20 ೨೦ ಅವನು ಆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರ ಮಾಡಿದಾಗ ಅವನು ಶುದ್ಧನಾಗುವನು.
ಯಾಜಕನು ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
21 ೨೧ “ಅವನು ಬಡವನಾಗಿದ್ದು ಅಷ್ಟನ್ನು ಸಮರ್ಪಿಸುವುದಕ್ಕೆ ಆಗದಿದ್ದರೆ ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಂದು ಟಗರುಮರಿಯನ್ನು ತಂದು ದೋಷಪರಿಹಾರ ಮಾಡಿಸಿಕೊಳ್ಳುವುದಕ್ಕಾಗಿ ಯಾಜಕನ ಕೈಯಿಂದ ನೈವೇದ್ಯವಾಗಿ ನಿವಾಳಿಸಬೇಕು; ಮತ್ತು ಧಾನ್ಯನೈವೇದ್ಯಕ್ಕಾಗಿ ಹತ್ತರಲ್ಲಿ ಒಂದು ಭಾಗ ಎಣ್ಣೆ ಕಲಸಿದ ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತರಬೇಕು.
“ಅವನು ಬಡವನಾಗಿದ್ದರೆ ಅಷ್ಟೊಂದು ತರುವುದಕ್ಕೆ ಆಗದಿದ್ದರೆ, ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಬಲಿ ಕೊಡಲು ನೈವೇದ್ಯ ಮಾಡುವುದಕ್ಕೆ ಒಂದು ಕುರಿಮರಿಯನ್ನೂ, ಎಣ್ಣೆ ಬೆರೆಸಿದ ಒಂದುವರೆ ಕಿಲೋಗ್ರಾಂ ನಯವಾದ ಹಿಟ್ಟನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ
22 ೨೨ ಅದಲ್ಲದೆ ಅವನು ತನ್ನ ಸ್ಥಿತಿಗೆ ತಕ್ಕಂತೆ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ದೋಷಪರಿಹಾರಕ ಯಜ್ಞವಾಗಿ ಒಂದನ್ನು, ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಸಮರ್ಪಿಸಬೇಕು.
ಮತ್ತು ಅವನಿಂದಾಗುವಷ್ಟು ಎರಡು ಬೆಳವಕ್ಕಿಗಳನ್ನೂ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನೂ ತೆಗೆದುಕೊಳ್ಳಬೇಕು. ಅವುಗಳಲ್ಲಿ ಒಂದು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದು ದಹನಬಲಿಗಾಗಿಯೂ ಇರುವುದು.
23 ೨೩ ಅವನು ತನ್ನ ಶುದ್ಧೀಕರಣಕ್ಕಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯೆಹೋವನ ಸನ್ನಿಧಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
“ಅವನು ತನ್ನ ಶುದ್ಧತೆಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಯೆಹೋವ ದೇವರ ಎದುರಿನಲ್ಲಿ ತರಬೇಕು.
24 ೨೪ ಯಾಜಕನು ಪ್ರಾಯಶ್ಚಿತ್ತಯಜ್ಞದ ಕುರಿಯನ್ನು, ಒಂದು ಸೇರು ಎಣ್ಣೆಯನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
ಯಾಜಕನು ಪ್ರಾಯಶ್ಚಿತ್ತದ ಸಮರ್ಪಣೆಯ ಆ ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
25 ೨೫ ಪ್ರಾಯಶ್ಚಿತ್ತಯಜ್ಞದ ಕುರಿಯನ್ನು ವಧಿಸಿದನಂತರ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಬೇಕು.
ಅವನು ಪ್ರಾಯಶ್ಚಿತ್ತ ಬಲಿಗಾಗಿ ಆ ಕುರಿಮರಿಯನ್ನು ವಧಿಸಬೇಕು. ಆ ಪ್ರಾಯಶ್ಚಿತ್ತ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು, ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ ಹಚ್ಚಬೇಕು.
26 ೨೬ ಅನಂತರ ಯಾಜಕನು ಆ ಎಣ್ಣೆಯಲ್ಲಿ ಸ್ವಲ್ಪವನ್ನು ತನ್ನ ಎಡಗೈಯಲ್ಲಿ ಹೊಯ್ದುಕೊಂಡು,
ಇದಲ್ಲದೆ ಯಾಜಕನು ತನ್ನ ಸ್ವಂತ ಎಡ ಅಂಗೈಯಲ್ಲಿ ಎಣ್ಣೆಯನ್ನು ಸುರಿಯಬೇಕು.
27 ೨೭ ಅದರಲ್ಲಿ ಸ್ವಲ್ಪವನ್ನು ಬಲಗೈಯ ಬೆರಳಿನಿಂದ ಏಳು ಸಾರಿ ಯೆಹೋವನ ಸನ್ನಿಧಿಯಲ್ಲಿ ಚಿಮುಕಿಸಬೇಕು.
ಯಾಜಕನು ತನ್ನ ಬಲಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
28 ೨೮ ಆಮೇಲೆ ಯಾಜಕನು ತನ್ನ ಕೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧ ಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆಟ್ಟಿಗೂ ಪ್ರಾಯಶ್ಚಿತ್ತಯಜ್ಞ ಪಶುವಿನ ರಕ್ತವನ್ನು ಹಚ್ಚಿದ ಸ್ಥಳಗಳಲ್ಲಿಯೇ ಹಚ್ಚಬೇಕು.
ಇದಲ್ಲದೆ ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಪ್ರಾಯಶ್ಚಿತ್ತ ಬಲಿಯ ರಕ್ತದ ಸ್ಥಳದ ಮೇಲೆಯೂ ಹಚ್ಚಬೇಕು.
29 ೨೯ ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವುದಕ್ಕಾಗಿ ಯಾಜಕನು ತನ್ನ ಕೈಯಲ್ಲಿರುವ ಉಳಿದ ಎಣ್ಣೆಯನ್ನೆಲ್ಲಾ ಅವನ ತಲೆಯ ಮೇಲೆ ಹೊಯ್ಯಬೇಕು.
ಯಾಜಕನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು, ಯೆಹೋವ ದೇವರ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
30 ೩೦ ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳನ್ನಾಗಲಿ
ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಬೆಳವಕ್ಕಿಗಳಲ್ಲಿಯಾಗಲಿ ಪಾರಿವಾಳದ ಮರಿಗಳಲ್ಲಿಯಾಗಲಿ ಸಮರ್ಪಿಸಬೇಕು.
31 ೩೧ ಪಾರಿವಾಳದ ಮರಿಗಳನ್ನಾಗಲಿ ದೋಷಪರಿಹಾರಕ ಯಜ್ಞವಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಮತ್ತೊಂದನ್ನು ಧಾನ್ಯನೈವೇದ್ಯದೊಂದಿಗೆ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.
ಅದರಂತೆಯೇ ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಧಾನ್ಯಸಮರ್ಪಣೆಯೊಂದಿಗೆ ಸಮರ್ಪಿಸಬೇಕು, ಶುದ್ಧಪಡಿಸಿಕೊಳ್ಳುವವನಿಗೋಸ್ಕರ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.”
32 ೩೨ “ಶುದ್ಧೀಕರಣ ಯಜ್ಞಗಳನ್ನು ಮಾಡುವುದಕ್ಕೆ ಗತಿಯಿಲ್ಲದ ಕುಷ್ಠರೋಗಿಯ ವಿಷಯದಲ್ಲಿ ಇದೇ ನಿಯಮ” ಎಂದು ಹೇಳಿದನು.
ಚರ್ಮರೋಗವುಳ್ಳವನು ಶುದ್ಧತೆ ಮಾಡಿಸಿಕೊಳ್ಳಲು ಗತಿಯಿಲ್ಲದವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
33 ೩೩ ಯೆಹೋವನು ಮೋಶೆ ಮತ್ತು ಆರೋನರಿಗೆ,
ಯೆಹೋವ ದೇವರು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
34 ೩೪ “ನಾನು ನಿಮಗೆ ಸ್ವದೇಶವಾಗಿ ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ,
“ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,
35 ೩೫ ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.
ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.
36 ೩೬ ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವುದಕ್ಕೆ ಮೊದಲು ಆ ಮನೆಯನ್ನು ಬರಿದುಮಾಡಲು ಆಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾಗುತ್ತದೆ. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವುದಕ್ಕೆ ಒಳಗೆ ಹೋಗಬೇಕು.
ಆಗ ಯಾಜಕನು ಆ ಮನೆಯಲ್ಲಿ ಬೂಜನ್ನು ಪರೀಕ್ಷಿಸುವುದಕ್ಕೆ ಹೋಗುವ ಮೊದಲು, ಆ ಮನೆಯೊಳಗೆ ಇರುವವುಗಳು ಅಶುದ್ಧವಾಗದಂತೆ ಆ ಮನೆಯನ್ನು ಬರಿದುಮಾಡಬೇಕೆಂದು ಆಜ್ಞಾಪಿಸಬೇಕು. ತರುವಾಯ ಯಾಜಕನು ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
37 ೩೭ ಅವನು ಮನೆಯ ಗೋಡೆಗಳಲ್ಲಿರುವ ರೋಗದ ಗುರುತುಗಳನ್ನು ಪರೀಕ್ಷಿಸಿ ನೋಡುವಾಗ ಆ ಗುರುತುಗಳು ಹಸುರಾಗಿ ಅಥವಾ ಕೆಂಪಾಗಿ ಇದ್ದು, ಗೋಡೆಯ ಮಟ್ಟಕ್ಕಿಂತ ಆಳವಾಗಿ ತೋರಿದರೆ,
ಅವನು ಆ ಬೂಜನ್ನು ಪರೀಕ್ಷಿಸಿದಾಗ, ಅದು ಮನೆಯ ಗೋಡೆಗಳಲ್ಲಿ ತಗ್ಗಾದ ಸಾಲುಗಳಲ್ಲಿ ಹಸಿರಾಗಿಯಾದರೂ, ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ,
38 ೩೮ ಯಾಜಕನು ಹೊರಗೆ ಬಂದು ಆ ಮನೆಯನ್ನು ಏಳು ದಿನಗಳವರೆಗೂ ಮುಚ್ಚಿಸಿಬಿಡಬೇಕು.
ಯಾಜಕನು ಆ ಮನೆಯ ಹೊರಗೆ ಮನೆಯ ಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳವರೆಗೆ ಮುಚ್ಚಬೇಕು.
39 ೩೯ ಏಳನೆಯ ದಿನದಲ್ಲಿ ಯಾಜಕನು ಬಂದು ಪರೀಕ್ಷಿಸಿ ನೋಡುವಾಗ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ,
ಏಳನೆಯ ದಿನದಲ್ಲಿ ಯಾಜಕನು ತಿರುಗಿಬಂದು ಪರೀಕ್ಷಿಸಿದಾಗ, ಆ ಬೂಜು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ,
40 ೪೦ ಆ ಗುರುತುಗಳು ಇರುವ ಕಲ್ಲುಗಳನ್ನು ತೆಗೆದುಬಿಟ್ಟು, ಊರಿನ ಹೊರಗೆ ಅಪವಿತ್ರವಾದ ಸ್ಥಳದಲ್ಲಿ ಹಾಕಿಸಬೇಕು.
ಬೂಜುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ,
41 ೪೧ ಅದಲ್ಲದೆ ಅವನು ಆ ಮನೆಯ ಗೋಡೆಗಳ ಒಳಗೋಡೆಯನ್ನೆಲ್ಲಾ ಕೆರೆದು, ಅದರ ಮಣ್ಣನ್ನು ಊರಿನ ಹೊರಗೆ ಅಪವಿತ್ರ ಸ್ಥಳದಲ್ಲಿ ಹಾಕಿಸಬೇಕು.
ಆ ಮನೆಯ ಒಳಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯಬೇಕೆಂದೂ,
42 ೪೨ ಆಗ ಅವರು ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ, ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.
ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.
43 ೪೩ “ಅವನು ಆ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ರೋಗದ ಗುರುತು ಪುನಃ ಕಂಡುಬಂದರೆ ಯಾಜಕನು ಬಂದು ಅದನ್ನು ನೋಡಬೇಕು.
“ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆತ್ತಿ ಗಿಲಾವು ಮಾಡಿಸಿದ ಮೇಲೆ ಆ ಬೂಜು ತಿರುಗಿ ಕಾಣಬಂದರೆ,
44 ೪೪ ಆ ಗುರುತು ಮನೆಯ ಗೋಡೆಗಳಲ್ಲಿ ಹಬ್ಬಿಕೊಂಡಿದ್ದರೆ ಅದು ಪ್ರಾಣಹಾನಿಕರವಾದ ಕುಷ್ಠವೇ; ಆ ಮನೆ ಅಶುದ್ಧವಾಗಿರುವುದು.
ಯಾಜಕನು ಬಂದು ಪರೀಕ್ಷಿಸಬೇಕು. ಆಗ ಬೂಜು ಮನೆಯಲ್ಲಿ ಹರಡಿಕೊಂಡಿದ್ದರೆ, ಆ ಮನೆಯಲ್ಲಿ ಅದೊಂದು ನಾಶಕರವಾದ ಬೂಜು ಆಗಿರುವುದು, ಆ ಮನೆ ಅಶುದ್ಧವಾದದ್ದು.
45 ೪೫ ಅವನು ಆ ಮನೆಯನ್ನು ಕೆಡವಿ, ಅದರ ಎಲ್ಲಾ ಕಲ್ಲುಗಳನ್ನು, ತೊಲೆಗಳನ್ನು ಮತ್ತು ಮಣ್ಣನ್ನು ಊರಿನ ಹೊರಗೆ ಅಪವಿತ್ರಸ್ಥಳದಲ್ಲಿ ಹಾಕಿಸಬೇಕು.
ಅವನು ಆ ಮನೆಯನ್ನು ಕೆಡವಿಹಾಕಿ, ಅದರ ಕಲ್ಲುಗಳನ್ನೂ, ಮರಗಳನ್ನೂ, ಆ ಮನೆಯ ಎಲ್ಲಾ ಧೂಳನ್ನೂ ತೆಗೆದು, ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
46 ೪೬ ಆ ಮನೆಯು ಮುಚ್ಚಿರುವ ದಿನಗಳಲ್ಲಿ ಯಾವನಾದರೂ ಒಳಕ್ಕೆ ಹೋದರೆ ಅವನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
“ಆ ಮನೆಯು ಮುಚ್ಚಿರುವ ಕಾಲದಲ್ಲೆಲ್ಲಾ ಅದರೊಳಗೆ ಯಾವನಾದರೂ ಹೋದರೆ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು.
47 ೪೭ ಆ ಮನೆಯಲ್ಲಿ ಮಲಗಿಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅಲ್ಲಿ ಊಟಮಾಡಿದವನೂ ಬಟ್ಟೆಗಳನ್ನು ಒಗೆದುಕೊಳ್ಳಬೇಕು.
ಆ ಮನೆಯೊಳಗೆ ಮಲಗಿಕೊಳ್ಳುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ಆ ಮನೆಯೊಳಗೆ ತಿನ್ನುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
48 ೪೮ “ಆದರೆ ತಾನು ಆ ಮನೆಗೆ ಹೊಸದಾಗಿ ಗಿಲಾವು ಮಾಡಿಸಿದ ಮೇಲೆ ಯಾಜಕನು ಬಂದು ಪರೀಕ್ಷಿಸುವಾಗ ಆ ರೋಗದ ಗುರುತು ಕಾಣಿಸದೆಹೋದರೆ, ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.
“ಆದರೆ ಯಾಜಕನು ಒಳಗೆ ಬಂದು ಅದನ್ನು ಪರೀಕ್ಷಿಸಿದಾಗ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ಬೂಜು ಹರಡಿಕೊಂಡಿರದಿದ್ದರೆ, ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸಬೇಕು. ಏಕೆಂದರೆ ಆ ಬೂಜು ಹೊರಟುಹೋಯಿತು.
49 ೪೯ ಆ ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಳ್ಳಬೇಕು.
ಆ ಮನೆಯನ್ನು ಶುದ್ಧಪಡಿಸುವುದಕ್ಕೋಸ್ಕರ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣ ದಾರವನ್ನೂ, ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
50 ೫೦ ಅವನು ಒಂದು ಪಕ್ಷಿಯನ್ನು ಒರತೆ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು,
ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
51 ೫೧ ಆ ದೇವದಾರಿನ ಕಟ್ಟಿಗೆಯನ್ನು, ಹಿಸ್ಸೋಪಿನ ಬರಲನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಸಜೀವವಾದ ಮತ್ತೊಂದು ಪಕ್ಷಿಯನ್ನು ತೆಗೆದುಕೊಂಡು ತಾನು ವಧಿಸಿದ ಪಕ್ಷಿಯ ರಕ್ತದಲ್ಲಿಯೂ ಹಾಗು ಒರತೆಯ ನೀರಿನಲ್ಲಿಯೂ ಅದ್ದಿ ಏಳು ಸಾರಿ ಆ ಮನೆಯ ಗೋಡೆಗಳಿಗೆ ಪ್ರೋಕ್ಷಿಸಬೇಕು.
ತರುವಾಯ ದೇವದಾರು ಕಟ್ಟಿಗೆಯನ್ನೂ, ಹಿಸ್ಸೋಪನ್ನೂ, ರಕ್ತವರ್ಣ ದಾರವನ್ನೂ, ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು, ಅವುಗಳನ್ನು ವಧಿಸಿದ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ, ಏಳು ಸಾರಿ ಆ ಮನೆಗೆ ಚಿಮುಕಿಸಬೇಕು.
52 ೫೨ ಹಾಗೆ ಆ ಪಕ್ಷಿಯ ರಕ್ತ, ಸೆಲೇ ನೀರು, ಸಜೀವಪಕ್ಷಿ, ದೇವದಾರಿನ ಕಟ್ಟಿಗೆ, ಹಿಸ್ಸೋಪು, ರಕ್ತವರ್ಣದ ದಾರ ಇವುಗಳಿಂದ ಆ ಮನೆಯನ್ನು ಅವನು ಶುದ್ಧಿಮಾಡುವನು.
ಅವನು ಪಕ್ಷಿಯ ರಕ್ತದಿಂದಲೂ, ಹರಿಯುವ ನೀರಿನಿಂದಲೂ, ಸಜೀವವುಳ್ಳ ಪಕ್ಷಿಯಿಂದಲೂ, ದೇವದಾರು ಕಟ್ಟಿಗೆಯಿಂದಲೂ, ಹಿಸ್ಸೋಪಿನಿಂದಲೂ, ರಕ್ತವರ್ಣ ದಾರದಿಂದಲೂ ಆ ಮನೆಯನ್ನು ಶುದ್ಧೀಕರಿಸಬೇಕು.
53 ೫೩ ಅವನು ಆ ಜೀವವುಳ್ಳ ಪಕ್ಷಿಯನ್ನು ಊರ ಹೊರಕ್ಕೆ ಅಡವಿಯ ಕಡೆಗೆ ಬಿಟ್ಟುಬಿಡಬೇಕು. ಹೀಗೆ ಅವನು ಆ ಮನೆಗೋಸ್ಕರ ದೋಷಪರಿಹಾರ ಮಾಡಿದಾಗ ಅದು ಶುದ್ಧವಾಗಿರುವುದು.
ಆದರೆ ಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲಗಳಲ್ಲಿ ಬಿಟ್ಟುಬಿಡಬೇಕು. ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅದು ಶುದ್ಧವಾಗುವುದು.”
54 ೫೪ “ನಾನಾ ವಿಧವಾದ ಕುಷ್ಠರೋಗದ ಗುರುತುಗಳು ಅಂದರೆ,
ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,
55 ೫೫ ಕೂದಲು ಬೆಳೆಯದ ಗಾಯ, ಬಟ್ಟೆಯಲ್ಲಿ ಅಥವಾ ಮನೆಯ ಗೋಡೆಯಲ್ಲಿ ಕಾಣಿಸುವ ಕುಷ್ಠ ರೋಗದ ಗುರುತು,
ಬಟ್ಟೆಯ ಮತ್ತು ಮನೆಯ ಬೂಜಿಗೂ,
56 ೫೬ ಶರೀರದ ಚರ್ಮದ ಮೇಲೆ ಉಂಟಾಗುವ ಬಾವು, ಗುಳ್ಳೆ, ಹೊಳೆಯುವ ಕಲೆ
ಬಾವು, ಚರ್ಮವ್ಯಾಧಿಗೂ, ಹೊಳೆಯುವ ಕಲೆಗೂ
57 ೫೭ ಇವುಗಳಲ್ಲಿ ಶುದ್ಧ ಅಥವಾ ಅಶುದ್ಧದ ಭೇದವನ್ನು ತಿಳಿಸುವ ನಿಯಮ ಇದೇ” ಎಂದು ಹೇಳಿದನು.
ಅವುಗಳ ಶುದ್ಧಾಶುದ್ಧ ಬೇಧವನ್ನು ಬೋಧಿಸುವ ನಿಯಮಗಳು ಇವೇ. ಚರ್ಮರೋಗಗಳ ಹಾಗೂ ಬೂಜಿನ ವಿಷಯದಲ್ಲಿರುವ ನಿಯಮಗಳು ಇವೇ.

< ಯಾಜಕಕಾಂಡ 14 >