< ನ್ಯಾಯಸ್ಥಾಪಕರು 6 >

1 ಇಸ್ರಾಯೇಲರು ತಿರುಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದ್ದರಿಂದ ಆತನು ಅವರನ್ನು ಏಳು ವರ್ಷಗಳ ಕಾಲ ಮಿದ್ಯಾನ್ಯರ ಕೈಗೆ ಒಪ್ಪಿಸಿದನು. 2 ಮಿದ್ಯಾನ್ಯರ ಹಸ್ತವು ಬಲಗೊಂಡಿದ್ದರಿಂದ ಇಸ್ರಾಯೇಲರು ಅವರಿಗೆ ಹೆದರಿ ಪರ್ವತಗಳಲ್ಲಿ ಗುಹೆಗಳನ್ನು, ಕಂದರಗಳನ್ನು ಮಾಡಿಕೊಂಡು ಅದರಲ್ಲಿ ವಾಸಿಸುತ್ತಿದ್ದರು. 3 ಇವರು ಬಿತ್ತನೆಮಾಡಿದಾಗಲೆಲ್ಲಾ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಇವರಿಗೆ ವಿರೋಧವಾಗಿ ದಂಡೆತ್ತಿ ಬಂದು ಇಳಿದುಕೊಳ್ಳುತ್ತಿದ್ದರು. 4 ಅವರು ಗಾಜಾ ಪ್ರಾಂತ್ಯದವರೆಗಿದ್ದ ಎಲ್ಲಾ ಭೂಮಿಯ ಹುಟ್ಟುವಳಿಯನ್ನು ಹಾಳುಮಾಡಿಬಿಡುತ್ತಿದ್ದುದರಿಂದ ಇವರಿಗೆ ದವಸಧಾನ್ಯವಾಗಲಿ, ಕುರಿ, ದನ, ಕತ್ತೆಗಳಾಗಲಿ ಉಳಿಯಲೇ ಇಲ್ಲ. 5 ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ಮಿಡತೆಗಳಂತೆ ಗುಂಪುಗುಂಪಾಗಿ ಬರುತ್ತಿದ್ದರು. ಅವರೂ ಅವರ ಒಂಟೆಗಳೂ ಅಸಂಖ್ಯವಾಗಿದ್ದವು. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು. 6 ಇಸ್ರಾಯೇಲರು ಮಿದ್ಯಾನ್ಯರ ದೆಸೆಯಿಂದ ಬಹಳವಾಗಿ ಕುಗ್ಗಿಹೋಗಿ ಯೆಹೋವನಿಗೆ ಮೊರೆಯಿಟ್ಟರು. 7 ಇಸ್ರಾಯೇಲರು ಮಿದ್ಯಾನ್ಯರ ಹಿಂಸೆಯನ್ನು ಸಹಿಸಲಾರದೆ ಯೆಹೋವನಿಗೆ ಮೊರೆಯಿಟ್ಟಾಗ 8 ಆತನು ಅವರ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಅವನು ಬಂದು ಅವರಿಗೆ, “ಇಸ್ರಾಯೇಲರ ದೇವರಾದ ಯೆಹೋವನ ಮಾತನ್ನು ಕೇಳಿರಿ; ಆತನು ಹೇಳುವುದೇನೆಂದರೆ ‘ನೀವು ದಾಸತ್ವದಲ್ಲಿದ್ದ ಐಗುಪ್ತದಿಂದ ನಿಮ್ಮನ್ನು ಕರೆತಂದೆನು. 9 ಐಗುಪ್ತ್ಯರಿಂದ ನಿಮ್ಮನ್ನು ಬಿಡಿಸಿದ್ದಲ್ಲದೆ ಬೇರೆ ಎಲ್ಲಾ ಬಾಧಕರಿಂದಲೂ ನಿಮ್ಮನ್ನು ಬಿಡಿಸಿ, ಅವರನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ನಿಮಗೆ ಕೊಟ್ಟೆನು. 10 ೧೦ ಯೆಹೋವನೆಂಬ ನಾನೇ ನಿಮ್ಮ ದೇವರಾಗಿದ್ದೇನೆಂದೂ, ನೀವು ಅಮೋರಿಯರ ಮಧ್ಯದಲ್ಲಿ ವಾಸಿಸುತ್ತಿದ್ದಾಗ ಅವರ ದೇವತೆಗಳನ್ನು ಪೂಜಿಸಬಾರದೆಂದೂ ಆಜ್ಞಾಪಿಸಿದ್ದೆನು; ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ’” ಅಂದನು. 11 ೧೧ ಆ ಮೇಲೆ ಯೆಹೋವನ ದೂತನು ಬಂದು ಒಫ್ರದಲ್ಲಿದ್ದ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿನ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. 12 ೧೨ ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಅಂದನು. 13 ೧೩ ಆಗ ಗಿದ್ಯೋನನು ಅವನಿಗೆ “ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು? ನಮ್ಮ ಹಿರಿಯರು, ಯೆಹೋವನು ಅದ್ಭುತಗಳನ್ನು ನಡಿಸಿ ತಮ್ಮನ್ನು ಐಗುಪ್ತದಿಂದ ಬಿಡಿಸಿದನೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಆತನು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾನಲ್ಲಾ” ಅಂದನು. 14 ೧೪ ಆಗ ಯೆಹೋವನು ಅವನನ್ನು ಚೆನ್ನಾಗಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ನಿನ್ನ ಈ ಬಲದಿಂದ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಹೇಳಿದನು. 15 ೧೫ ಆಗ ಗಿದ್ಯೋನನು ಆತನಿಗೆ, “ಕರ್ತನೇ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು” ಅಂದನು. 16 ೧೬ ಯೆಹೋವನು ಅವನಿಗೆ, “ನಾನು ನಿನ್ನ ಸಂಗಡ ಇರುವುದರಿಂದ ನೀನು ಮಿದ್ಯಾನ್ಯರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ” ಅಂದನು. 17 ೧೭ ಅವನು ಆತನಿಗೆ, “ಕರ್ತನೇ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವವರು ತಾವೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. 18 ೧೮ ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವ ವರೆಗೆ ತಾವು ಈ ಸ್ಥಳವನ್ನು ಬಿಡಬಾರದು” ಎಂದು ಬಿನ್ನವಿಸಲು ಆತನು, “ನೀನು ತಿರುಗಿ ಬರುವ ವರೆಗೆ ನಾನು ಇಲ್ಲೇ ಇರುವೆನು” ಅಂದನು. 19 ೧೯ ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ತೆಗೆದುಕೊಂಡು, ಒಂದು ಏಫಾ ಅಂದರೆ ಸುಮಾರು ಮೂವ್ವತ್ತು ಸೇರು ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು, ಮಾಂಸವನ್ನು ಸಿದ್ಧಮಾಡಿ, ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಏಲಾ ಮರದ ಕೆಳಗೆ ಆತನ ಮುಂದೆ ತಂದಿಟ್ಟನು. 20 ೨೦ ಆಗ ದೇವದೂತನು ಅವನಿಗೆ, “ಮಾಂಸವನ್ನೂ, ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಅದರ ಮೇಲೆ ಹೊಯ್ಯಿ” ಅನ್ನಲು ಅವನು ಹಾಗೆಯೇ ಮಾಡಿದನು. 21 ೨೧ ಅನಂತರ ಯೆಹೋವನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ, ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು; ಯೆಹೋವನ ದೂತನು ಅದೃಶ್ಯನಾದನು. 22 ೨೨ ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು. 23 ೨೩ ಆದರೆ ಯೆಹೋವನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ” ಅಂದನು. 24 ೨೪ ಗಿದ್ಯೋನನು ಅಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ಷಾಲೋಮ್ ಎಂದು ಹೆಸರಿಟ್ಟನು; ಅದು ಈ ವರೆಗೂ ಅಬೀಯೆಜೆರನ ಗೋತ್ರದವರ ಒಫ್ರದಲ್ಲಿರುತ್ತದೆ. 25 ೨೫ ಅದೇ ದಿನ ರಾತ್ರಿಯಲ್ಲಿ ಯೆಹೋವನು ಅವನಿಗೆ, “ನೀನು ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನೂ, ಏಳು ವರ್ಷದ ಇನ್ನೊಂದು ಹೋರಿಯನ್ನೂ ತೆಗೆದುಕೊಂಡು ಹೋಗಿ ನಿನ್ನ ತಂದೆಯು ಕಟ್ಟಿರುವ ಬಾಳನ ಯಜ್ಞವೇದಿಯನ್ನು ಕೆಡವಿ, ಅದರ ಬಳಿಯಲ್ಲಿರುವ ಅಶೇರವೆಂಬ ವಿಗ್ರಹಸ್ತಂಭವನ್ನು ಕಡಿದುಹಾಕು. 26 ೨೬ ಈ ಗುಡ್ದದ ಶಿಖರದಲ್ಲಿ ಯೆಹೋವನಿಗೋಸ್ಕರ ನೇಮಕವಾದ ರೀತಿಯಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸು. ನೀನು ಕಡಿದು ಹಾಕಿದ ಅಶೇರ ವಿಗ್ರಹಸ್ತಂಭದಿಂದ ಬೆಂಕಿಮಾಡಿ, ಆ ಎರಡನೆಯ ಹೋರಿಯನ್ನೂ ಸರ್ವಾಂಗಹೋಮವಾಗಿ ಸಮರ್ಪಿಸು” ಎಂದು ಹೇಳಿದನು. 27 ೨೭ ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ ಯೆಹೋವನು ಹೇಳಿದಂತೆಯೇ ಮಾಡಿದನು. ಆದರೆ ಅವನು ತನ್ನ ಮನೆಯವರಿಗೂ, ಊರಿನವರಿಗೂ ಹೆದರಿಕೊಂಡಿದ್ದರಿಂದ ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು. 28 ೨೮ ಊರಿನ ಜನರು ಹೊತ್ತಾರೆಯಲ್ಲೆದ್ದು ಬಾಳನ ಯಜ್ಞವೇದಿಯು ಕೆಡವಲ್ಪಟ್ಟಿರುವುದನ್ನೂ, ಅದರ ಸಮೀಪದಲ್ಲಿದ್ದ ವಿಗ್ರಹಸ್ತಂಭವು ಕಡಿಯಲ್ಪಟ್ಟಿರುವುದನ್ನೂ, ಹೊಸದಾಗಿ ಕಟ್ಟಿದ ಯಜ್ಞವೇದಿಯ ಮೇಲೆ ಎರಡನೆಯ ಹೋರಿಯು ಯಜ್ಞವಾದದ್ದನ್ನೂ ಕಂಡು, 29 ೨೯ “ಹೀಗೆ ಮಾಡಿದವರಾರು?” ಎಂದು ಒಬ್ಬರನ್ನೊಬ್ಬರು ವಿಚಾರಿಸುವಲ್ಲಿ ಯೋವಾಷನ ಮಗನಾದ ಗಿದ್ಯೋನನೇ ಎಂದು ತಿಳಿದು ಬಂದಿತು. 30 ೩೦ ಆ ಜನರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ಕರೆದುಕೊಂಡು ಬಾ; ಅವನು ಸಾಯಬೇಕು; ಯಾಕೆಂದರೆ ಬಾಳನ ಯಜ್ಞವೇದಿಯನ್ನು ಕೆಡವಿ ಅದರ ಬಳಿಯಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನು ಕಡಿದುಹಾಕಿದ್ದಾನೆ” ಅಂದರು. 31 ೩೧ ಯೋವಾಷನು ತನಗೆ ವಿರೋಧವಾಗಿ ನಿಂತವರೆಲ್ಲರಿಗೆ, “ಬಾಳನಿಗೋಸ್ಕರ ನೀವು ವ್ಯಾಜ್ಯಮಾಡಬೇಕೋ? ನೀವು ಅವನನ್ನು ರಕ್ಷಿಸಬೇಕೋ? ಅವನಿಗಾಗಿ ವ್ಯಾಜ್ಯಮಾಡುವವರು ಈ ಹೊತ್ತೇ ಕೊಲ್ಲಲ್ಪಡಲಿ. ಬಾಳನು ದೇವನಾಗಿದ್ದರೆ ತನ್ನ ಯಜ್ಞವೇದಿಯನ್ನು ಕೆಡವಿಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯಮಾಡಲಿ” ಎಂದನು. 32 ೩೨ ಆ ದಿನದಲ್ಲಿ ಅವನು, “ಬಾಳನು ತನ್ನ ಯಜ್ಞವೇದಿಯನ್ನು ಕೆಡವಿಬಿಟ್ಟವನೊಡನೆ ತಾನೇ ವ್ಯಾಜ್ಯಮಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ಯೆರುಬ್ಬಾಳ ಎಂಬ ಹೆಸರಾಯಿತು. 33 ೩೩ ಇಷ್ಟರಲ್ಲಿ ಮಿದ್ಯಾನ್ಯರೂ, ಅಮಾಲೇಕ್ಯರೂ, ಮೂಡಣದೇಶದವರೂ ಸೇರಿ ಹೊಳೆದಾಟಿ ಬಂದು ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. 34 ೩೪ ಆಗ ಗಿದ್ಯೋನನ ಮೇಲೆ ಯೆಹೋವನ ಆತ್ಮವು ಬಂದಿತ್ತು. ಅವನು ಕೊಂಬನ್ನು ಊದಲು ಅಬೀಯೆಜೆರನ ಗೋತ್ರದವರು ಬಂದು ಅವನನ್ನು ಹಿಂಬಾಲಿಸಿದರು. 35 ೩೫ ಅವನು ಉಳಿದ ಮನಸ್ಸೆಯವರ ಬಳಿಗೆ ದೂತರನ್ನು ಕಳುಹಿಸಲಾಗಿ ಅವರೂ ಕೂಡಿಬಂದರು. ಆಶೇರ್, ಜೆಬುಲೂನ್, ನಫ್ತಾಲಿ ಕುಲಗಳವರ ಬಳಿಗೆ ದೂತರನ್ನು ಕಳುಹಿಸಲು ಅವರೂ ಬಂದು ಯುದ್ಧಪ್ರಯಾಣಕ್ಕೋಸ್ಕರ ಸೇರಿಕೊಂಡರು. 36 ೩೬ ಮತ್ತು ಗಿದ್ಯೋನನು ದೇವರಿಗೆ, “ನೀನು ಹೇಳಿದಂತೆ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೋ ಇಲ್ಲವೋ ಎಂಬುದನ್ನು ತಿಳಿಯಪಡಿಸು. 37 ೩೭ ಇಗೋ, ನಾನು ಕಣದಲ್ಲಿ ಕುರಿಯ ಉಣ್ಣೆಯನ್ನು ಇಡುತ್ತೇನೆ; ಅದರಲ್ಲಿ ಮಾತ್ರ ಮಂಜುಬಿದ್ದು ನೆಲವೆಲ್ಲಾ ಒಣಗಿದ್ದರೆ ನೀನು ಹೇಳಿದಂತೆಯೇ ಇಸ್ರಾಯೇಲರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೆಂದು ತಿಳಿಯುವೆನು” ಎಂಬುದಾಗಿ ವಿಜ್ಞಾಪಿಸಿದನು. 38 ೩೮ ಹಾಗೆಯೇ ಆಯಿತು; ಅವನು ಮರುದಿನ ಹೊತ್ತಾರೆಯಲ್ಲಿ ಎದ್ದು ಉಣ್ಣೆಯನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು. 39 ೩೯ ಅವನು ತಿರುಗಿ ದೇವರಿಗೆ, “ಸ್ವಾಮೀ, ಸಿಟ್ಟಾಗಬಾರದು; ಇನ್ನೊಂದು ಸಾರಿ ಮಾತನಾಡುತ್ತೇನೆ. ಇನ್ನು ಒಂದೇ ಸಾರಿ ಈ ಉಣ್ಣೆಯಿಂದ ನಿನ್ನನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ಉಣ್ಣೆ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿ ಬಿದ್ದಿರಲಿ” ಅಂದನು. 40 ೪೦ ಆ ರಾತ್ರಿ ದೇವರು ಹಾಗೆಯೇ ಮಾಡಿದನು; ಉಣ್ಣೆ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.

< ನ್ಯಾಯಸ್ಥಾಪಕರು 6 >