< ಯೆಹೋಶುವನು 20 >

1 ಯೆಹೋವನು ಯೆಹೋಶುವನನ್ನು ಕುರಿತು, 2 “ನೀನು ಇಸ್ರಾಯೇಲರಿಗೆ ‘ನಾನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ನೀವು ನಿಮಗೋಸ್ಕರ ಕೆಲವು ಆಶ್ರಯ ನಗರಗಳನ್ನು ಗೊತ್ತು ಮಾಡಿಕೊಳ್ಳಿರಿ; 3 ನಿಮ್ಮಲ್ಲಿ ತಿಳಿಯದೆ ಆಕಸ್ಮಾತ್ತಾಗಿ ನರಹತ್ಯಮಾಡಿದವನು ಅಲ್ಲಿಗೆ ಓಡಿಹೋಗಲಿ. ಹತವಾದವನ ಸಮೀಪ ಬಂಧುವು ಮುಯ್ಯಿತೀರಿಸದಂತೆ ಅವು ನಿಮಗೆ ಆಶ್ರಯಸ್ಥಾನಗಳಾಗಿರಲಿ. 4 ಅಂಥ ಪಟ್ಟಣಕ್ಕೆ ಓಡಿ ಹೋದವನು ಮೊದಲು ಊರ ಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಕ್ಕೆ ಸೇರಿಸಿಕೊಂಡು, ಅವನ ವಾಸಕ್ಕೆ ಸ್ಥಳ ಕೊಡಲಿ 5 ಹತವಾದವನ ಸಮೀಪ ಬಂಧುವು ಕೊಂದವನನ್ನು ಹಿಂದಟ್ಟಿಕೊಂಡು ಅಲ್ಲಿಗೆ ಬಂದರೆ ಅವರು ಅವನನ್ನು ಅವನ ಕೈಗೆ ಒಪ್ಪಿಸಬಾರದು. ಏಕೆಂದರೆ ಅವನು ನೆರೆಯವನನ್ನು ಹಳೆಯ ದ್ವೇಷವೇನೂ ಇಲ್ಲದೆ ಆಕಸ್ಮಾತ್ತಾಗಿ ಕೊಂದನು. 6 ಒಂದು ಸಭೆಯನ್ನು ಸೇರಿಸಿ ಅಂಥವನನ್ನು ವಿಚಾರಿಸಬೇಕು; ಮತ್ತು ಅವನು ಆಗಿನ ಮಹಾಯಾಜಕನ ಜೀವಮಾನವೆಲ್ಲಾ ಅದೇ ಪಟ್ಟಣದಲ್ಲಿ ಇರಬೇಕು. ಆ ನಂತರ ತಾನು ಬಿಟ್ಟು ಬಂದ ಪಟ್ಟಣದಲ್ಲಿರುವ ಮನೆಗೆ ಹಿಂತಿರುಗಿ ಹೋಗಬಹುದು’ ಎಂದು ಹೇಳು” ಎಂದನು. 7 ಇಸ್ರಾಯೇಲ್ಯರು ನಫ್ತಾಲಿ ಕುಲದವರ ಪರ್ವತಪ್ರದೇಶವಾದ ಗಲಿಲಾಯ ಪ್ರಾಂತ್ಯದಲ್ಲಿನ ಕೆದೆಷ್, ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿನ ಶೆಕೆಮ್ ಹಾಗೂ ಯೆಹೂದ್ಯರ ಬೆಟ್ಟದ ಸೀಮೆಯಲ್ಲಿ ಹೆಬ್ರೋನ್ ಅನ್ನಿಸಿಕೊಳ್ಳುವ ಕಿರ್ಯತರ್ಬ ಎಂಬ ಪಟ್ಟಣಗಳನ್ನು ನೇಮಿಸಿದರು. 8 ಇವುಗಳನ್ನು ಮಾತ್ರವಲ್ಲದೆ, ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನಿನ ಆಚೆಯಲ್ಲಿ ರೂಬೇನ್ಯರ ಬೆಟ್ಟದ ಮೇಲಿನ ಅರಣ್ಯ ಪ್ರದೇಶದಲ್ಲಿರುವ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದ ರಾಮೋತ್, ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್ ಎಂಬ ಪಟ್ಟಣಗಳನ್ನು ನೇಮಿಸಿದನು. 9 ಇಸ್ರಾಯೇಲ್ಯರೆಲ್ಲರಿಗೂ ಹಾಗೂ ಅವರ ಮಧ್ಯದಲ್ಲಿ ವಾಸಮಾಡುತ್ತಿದ್ದ ಪರದೇಶಿಗಳಿಗೂ ಇವು ಆಶ್ರಯ ನಗರಗಳಾಗಿ ನೇಮಕ ಆಗಿದ್ದವು. ಬೇರೊಬ್ಬನನ್ನು ಆಕಸ್ಮಾತ್ತಾಗಿ ಕೊಂದವನು ಓಡಿಹೋಗಿ ಹತನಾದವನ ಹತ್ತಿರದ ಬಂಧುವಿನಿಂದ ತಲೆ ತಪ್ಪಿಸಿ ಕೊಳ್ಳಬಹುದು. ಅಲ್ಲದೆ ತಾನು ನ್ಯಾಯ ಸಭೆಯ ಮುಂದೆ ನಿಲ್ಲುವವರೆಗೆ ಅಲ್ಲೇ ಇರಬಹುದಾಗಿದೆ.

< ಯೆಹೋಶುವನು 20 >