< ಯೋಹಾನನು 6 >

1 ತರುವಾಯ ಯೇಸು ಗಲಿಲಾಯದ ಸಮುದ್ರವನ್ನು ದಾಟಿ, ಆಚೆ ದಡಕ್ಕೆ ಹೋದನು. ಅದಕ್ಕೆ ತಿಬೇರಿಯ ಸಮುದ್ರವೆಂತಲೂ ಹೇಳುತ್ತಾರೆ. 2 ಬಹು ಜನರು ಆತನು ರೋಗಿಗಳಲ್ಲಿ ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ, ಜನರ ದೊಡ್ಡಗುಂಪು ಆತನನ್ನು ಹಿಂಬಾಲಿಸುತ್ತಿತ್ತು. 3 ಆದರೆ ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕುಳಿತುಕೊಂಡನು. 4 ಆಗ ಯೆಹೂದ್ಯರ ಪಸ್ಕದ ಹಬ್ಬವು ಹತ್ತಿರವಾಗಿತ್ತು. 5 ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಜನರ ದೊಡ್ಡಗುಂಪು ತನ್ನ ಕಡೆಗೆ ಬರುವುದನ್ನು ನೋಡಿ “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ?” ಎಂದು ಫಿಲಿಪ್ಪನನ್ನು ಕೇಳಿದನು. 6 ತಾನು ಮಾಡಲಿದ್ದಕಾರ್ಯ ಯೇಸುವಿಗೆ ತಿಳಿದಿದ್ದರೂ, ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ, ಆ ಪ್ರಶ್ನೆಯನ್ನು ಕೇಳಿದನು. 7 ಅದಕ್ಕೆ ಫಿಲಿಪ್ಪನು, “ಪ್ರತಿಯೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೂ ಇನ್ನೂರು ದಿನಾರಿ ಮೌಲ್ಯದ ರೊಟ್ಟಿಯಾದರೂ ಅವರಿಗೆ ಸಾಲುವುದಿಲ್ಲ” ಎಂದನು. 8 ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ; 9 “ಇಲ್ಲಿ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ, ಎರಡು ಮೀನುಗಳೂ ಇವೆ. ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು?” ಎಂದು ಹೇಳಲು, 10 ೧೦ ಯೇಸು “ಆ ಜನರನ್ನು ಊಟಕ್ಕೆ ಕುಳ್ಳಿರಿಸಿರಿ” ಎಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು. ಜನರು ಹುಲ್ಲಿನ ಮೇಲೆ ಕುಳಿತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. 11 ೧೧ ಆಮೇಲೆ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಹಂಚಿದನು. ಅದೇ ರೀತಿ ಮೀನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದನು. 12 ೧೨ ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ, ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಎಂದು ಹೇಳಿದನು. 13 ೧೩ ಅವರು ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಕೂಡಿಸಿ, ಹನ್ನೆರಡು ಪುಟ್ಟಿಗಳಿಗೆ ತುಂಬಿಸಿದರು. 14 ೧೪ ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ, “ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಈತನೇ” ಎಂದು ಹೇಳಿಕೊಂಡರು. 15 ೧೫ ಆಗ ಯೇಸು, ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ತಿಳಿದುಕೊಂಡು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೋಗಿಬಿಟ್ಟನು. 16 ೧೬ ಸಂಜೆಯಾದಾಗ ಆತನ ಶಿಷ್ಯರು ಸಮುದ್ರದ ದಡಕ್ಕೆ ಬಂದು, 17 ೧೭ ದೋಣಿಯನ್ನು ಹತ್ತಿ, ಸಮುದ್ರ ಮಾರ್ಗವಾಗಿ ಕಪೆರ್ನೌಮಿನ ಕಡೆಗೆ ಹೊರಟರು. ಆಗಲೇ ಕತ್ತಲಾಗಿತ್ತು ಆದರೆ ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18 ೧೮ ಬಿರುಗಾಳಿ ಬೀಸುತ್ತಿದ್ದುದರಿಂದ ಸಮುದ್ರವು ಅಲ್ಲೋಲಕಲ್ಲೋಲವಾಯಿತು. 19 ೧೯ ಹೀಗಿರಲಾಗಿ ಅವರು ಹುಟ್ಟು ಹಾಕುತ್ತಾ ಸುಮಾರು ಒಂದು ಹರದಾರಿ ದೂರ ಹೋದ ಬಳಿಕ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ನೋಡಿ ಭಯಪಟ್ಟರು. 20 ೨೦ ಆದರೆ ಯೇಸು ಅವರಿಗೆ, “ಭಯಪಡಬೇಡಿರಿ, ನಾನೇ!” ಎಂದನು. 21 ೨೧ ಆಗ ಆತನನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಆ ಕ್ಷಣವೇ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಮುಟ್ಟಿತು. 22 ೨೨ ಮರುದಿನ ಸಮುದ್ರದ ಆಚೇಕಡೆಯಲ್ಲಿ ನಿಂತಿದ್ದ ಜನರು ಅಲ್ಲಿ ಒಂದೇ ದೋಣಿ ಲಭ್ಯವಿದೆ ಇದೆ, ಮತ್ತು ಯೇಸು ತನ್ನ ಶಿಷ್ಯರ ಸಂಗಡ ಆ ದೋಣಿಯಲ್ಲಿ ಹತ್ತಲಿಲ್ಲವೆಂದೂ ಅವರಿಗೆ ಅರಿವಾಯಿತು. ಏಕೆಂದರೆ, ಶಿಷ್ಯರು ಮಾತ್ರ ಆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. 23 ೨೩ ಅಷ್ಟರೊಳಗೆ ತಿಬೇರಿಯಾದಿಂದ ಬೇರೆ ದೋಣಿಗಳು ಹೊರಟು, ಕರ್ತನು ದೇವರಿಗೆ ಕೃತಜ್ಞತೆ ಸಲ್ಲಿಸಿ, ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು. 24 ೨೪ ಹೀಗಿರಲಾಗಿ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ಅರಿತು ತಾವೇ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು. 25 ೨೫ ಮತ್ತು ಸಮುದ್ರದ ಆಚೆಕಡೆಯಲ್ಲಿ ಆತನನ್ನು ಕಂಡು “ಗುರುವೇ, ಯಾವಾಗ ಇಲ್ಲಿಗೆ ಬಂದಿ?” ಎಂದು ಕೇಳಿದರು. 26 ೨೬ ಯೇಸು ಅವರಿಗೆ “ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ. 27 ೨೭ ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ” ಎಂದನು. (aiōnios g166) 28 ೨೮ ಅವರು ಆತನಿಗೆ “ದೇವರ ಕ್ರಿಯೆಗಳನ್ನು ನಾವು ಮಾಡಬೇಕಾದರೆ ಏನು ಮಾಡಬೇಕೆಂದು” ಕೇಳಿದ್ದಕ್ಕೆ, 29 ೨೯ ಯೇಸುವು, “ದೇವರ ಕ್ರಿಯೆ ಯಾವುದೆಂದರೆ, ಆತನು ಕಳುಹಿಸಿಕೊಟ್ಟಾತನನ್ನು ನೀವು ನಂಬುವುದೇ” ಎಂದನು. 30 ೩೦ ಅವರು ಆತನನ್ನು “ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕಕಾರ್ಯ ಮಾಡುತ್ತೀ? ನೀನು ಏನುಮಾಡುತ್ತಿ? 31 ೩೧ ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ, 32 ೩೨ ಯೇಸು ಅವರಿಗೆ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ, ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. 33 ೩೩ ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು. 34 ೩೪ ಆಗ ಅವರು “ಆಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದರು. 35 ೩೫ ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂಬಾಯಾರಿಕೆಯಾಗುವುದಿಲ್ಲ. 36 ೩೬ ಆದರೆ ನೀವು ನನ್ನನ್ನು ನೋಡಿದ್ದರೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. 37 ೩೭ ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವನನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ. 38 ೩೮ ನಾನು ನನ್ನ ಸ್ವಂತ ಚಿತ್ತದಂತೆ ಮಾಡುವುದಕ್ಕಾಗಿ ಬಂದಿಲ್ಲ, ಆದರೆ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಇಳಿದು ಬಂದಿರುವೆ. 39 ೩೯ ನನ್ನನ್ನು ಕಳುಹಿಸಿದಾತನ ಚಿತ್ತವು ಏನೆಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆಅವರನ್ನು ಕಡೆ ದಿನದಲ್ಲಿ ಎಬ್ಬಿಸಬೇಕೆಂಬುದೇ. 40 ೪೦ ಮಗನನ್ನು ನೋಡಿ ತಂದೆಯಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ತಂದೆಯ ಚಿತ್ತವಾಗಿದೆ, ಮತ್ತು ನಾನು ಕಡೆ ದಿನದಲ್ಲಿ ಅವನನ್ನು ಎಬ್ಬಿಸುವೆನು” ಎಂದು ಹೇಳಿದನು. (aiōnios g166) 41 ೪೧ ಆತನು, “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗೊಣಗುಟ್ಟಿ, 42 ೪೨ “ಈತನು ಯೋಸೇಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಇಳಿದು ಬಂದೆನು’ ಎಂದು ಈತನು ಹೇಳುವುದಾದರೂ ಹೇಗೆ?” ಎಂದರು. 43 ೪೩ ಅದಕ್ಕೆ ಯೇಸು ಅವರಿಗೆ, “ನಿಮ್ಮ ನಿಮ್ಮೊಳಗೆ ಗೊಣಗುಟ್ಟುವುದನ್ನು ನಿಲ್ಲಿಸಿರಿ” ಎಂದು ಉತ್ತರ ಕೊಟ್ಟನು. 44 ೪೪ “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಸೆಳೆಯದ ಹೊರತು, ಯಾವನೂ ನನ್ನ ಬಳಿಗೆ ಬರಲಾರನು, ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು. 45 ೪೫ ‘ಅವರೆಲ್ಲರೂ ದೇವರಿಂದಲೇ ಬೋಧಿಸಲ್ಪಡುವರು’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾರೆ. 46 ೪೬ ದೇವರಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆಯೇ ಹೊರತು ಮತ್ಯಾರು ತಂದೆಯನ್ನು ನೋಡಿಲ್ಲ; ಆತನೊಬ್ಬನೇ ತಂದೆಯನ್ನು ನೋಡಿದವನು. 47 ೪೭ ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. (aiōnios g166) 48 ೪೮ ನಾನೇ ಜೀವದ ರೊಟ್ಟಿ 49 ೪೯ ನಿಮ್ಮ ಪೂರ್ವಿಕರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತು ಹೋದರು. 50 ೫೦ ಪರಲೋಕದಿಂದ ಇಳಿದು ಬರುವಂಥ ಆ ರೊಟ್ಟಿ, ಎಂಥದೆಂದರೆ ಅದನ್ನು ತಿಂದವನು ಎಂದಿಗೂ ಸಾಯುವುದಿಲ್ಲ. 51 ೫೧ ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು. (aiōn g165) 52 ೫೨ ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೇ?” ಎಂದು ತಮ್ಮತಮ್ಮೊಳಗೆ ವಾಗ್ವಾದಮಾಡಲು ಪ್ರಾರಂಭಿಸಿದರು. 53 ೫೩ ಅದಕ್ಕೆ ಯೇಸು ಅವರಿಗೆ, “ನಿಮಗೆ ನಿಜ ನಿಜವಾಗಿ ಹೇಳುತ್ತೇನೆ; ನೀವು ಮನುಷ್ಯಕುಮಾರನ ದೇಹವನ್ನು ತಿಂದು ಮತ್ತು ಆತನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ನಿತ್ಯಜೀವವಿರುವುದಿಲ್ಲ. 54 ೫೪ ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿಯುವನೋ ಅವನು ನಿತ್ಯ ಜೀವವನ್ನು ಹೊಂದುವನು. ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು. (aiōnios g166) 55 ೫೫ ಏಕೆಂದರೆ ನನ್ನ ದೇಹವೇ ನಿಜವಾದ ಆಹಾರವೂ ಮತ್ತು ನನ್ನ ರಕ್ತವೇ ನಿಜವಾದ ಪಾನವೂ ಆಗಿದೆ. 56 ೫೬ ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿದಿದ್ದಾನೋ ಅವನು ನನ್ನಲ್ಲಿ ನೆಲೆಸಿರುತ್ತಾನೆ; ನಾನು ಅವನಲ್ಲಿ ನೆಲೆಸಿರುತ್ತೇನೆ. 57 ೫೭ ಜೀವವುಳ್ಳ ತಂದೆಯು ನನ್ನನ್ನು ಅಧಿಕಾರದೊಂದಿಗೆ ಕಳುಹಿಸಿಕೊಟ್ಟಿದ್ದಾನೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುತ್ತೇನೆ, ಅದರಂತೆ ನನ್ನನ್ನು ತಿನ್ನುವವನೂ ನನ್ನ ನಿಮಿತ್ತವಾಗಿಯೇ ಜೀವಿಸುವನು. 58 ೫೮ ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೇ, ನಿಮ್ಮ ಪೂರ್ವಿಕರು ಮನ್ನಾವನ್ನು ತಿಂದರೂ ಸತ್ತರು, ಆದರೆ, ಈ ರೊಟ್ಟಿಯನ್ನು ತಿನ್ನುವವನು ಸದಾಕಾಲಕ್ಕೂ ಜೀವಿಸುವನು” ಎಂದು ಹೇಳಿದನು. (aiōn g165) 59 ೫೯ ಈ ವಿಷಯಗಳನ್ನು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶ ಮಾಡುವಾಗ ಹೇಳಿದನು. 60 ೬೦ ಯೇಸುವಿನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ “ಇದು ಕಠಿಣವಾದ ಮಾತು, ಇದನ್ನು ಪಾಲಿಸುವವರು ಯಾರು?” ಎಂದು ಮಾತನಾಡಿಕೊಂಡರು. 61 ೬೧ ತನ್ನ ಶಿಷ್ಯರು ಇದಕ್ಕೆ ಗೊಣಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ “ಈ ಮಾತಿನಿಂದ ನಿಮಗೆ ಬೇಸರವಾಯಿತೋ? 62 ೬೨ ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ? 63 ೬೩ ಜೀವ ಕೊಡುವುದು ಆತ್ಮವೇ. ದೇಹವು ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ, ಜೀವವಾಗಿಯೂ ಇವೆ. 64 ೬೪ ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ” ನಂಬದವರು ಯಾರೆಂದೂ ಹಾಗೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು. 65 ೬೫ ಆತನು “ತಂದೆಯು ಅನುಗ್ರಹಿಸದ ಹೊರತು ಯಾರೂ ನನ್ನ ಬಳಿಗೆ ಬರಲಾರರು ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ,” ಎಂದನು. 66 ೬೬ ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಆತನನ್ನು ಬಿಟ್ಟು ಹೊರಟುಹೋದರು ಮತ್ತು ಆತನ ಜೊತೆಯಲ್ಲಿ ಸಂಚಾರ ಮಾಡುವುದನ್ನು ಬಿಟ್ಟರು. 67 ೬೭ ಆದಕಾರಣ ಯೇಸು ಇದನ್ನು ನೋಡಿ, ತನ್ನ ಹನ್ನೆರಡು ಮಂದಿ ಶಿಷ್ಯಂದಿರಿಗೆ “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಿದ್ದಕ್ಕೆ, 68 ೬೮ ಸೀಮೋನ್ ಪೇತ್ರನು ಆತನಿಗೆ “ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳಿವೆಯಲ್ಲಾ. (aiōnios g166) 69 ೬೯ ನೀನು ದೇವರಿಂದ ಬಂದ ಅತಿಪರಿಶುದ್ಧನೆಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ” ಎಂದನು. 70 ೭೦ ಅದಕ್ಕೆ ಯೇಸು “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ತೆಗೆದುಕೊಂಡೆನಲ್ಲವೇ? ಆದರೂ ನಿಮ್ಮಲ್ಲಿಯೂ ಒಬ್ಬನು ಸೈತಾನನಿದ್ದಾನೆ” ಎಂದನು. 71 ೭೧ ಈ ಮಾತು, ಆತನು ಸೀಮೋನ್ ಇಸ್ಕರಿಯೋತನ ಮಗನಾದ ಯೂದನ ವಿಷಯವಾಗಿ ಹೇಳಿದನು, ಏಕೆಂದರೆ, ಅವನು ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದು, ಅವನೇ ಆತನನ್ನು ಹಿಡಿದು ಕೊಡುವುದಕ್ಕಿದ್ದನು.

< ಯೋಹಾನನು 6 >