< ಯೋವೇಲನು 3 >

1 ಇಗೋ ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ, ನಾನು ಯೆಹೂದದ ಮತ್ತು ಯೆರೂಸಲೇಮಿನ ಸಂಪತ್ತನ್ನು ಪುನಃಸ್ಥಾಪಿಸುವಾಗ, 2 ನಾನು ಸಕಲ ಜನಾಂಗಗಳನ್ನು ಕೂಡಿಸುವೆನು, ಮತ್ತು ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ ಬರಮಾಡುವೆನು. ಅಲ್ಲಿ ನನ್ನ ಜನರಿಗೆ ನ್ಯಾಯತೀರ್ಪನ್ನು ಕೊಡುವೆನು. ಏಕೆಂದರೆ ನನ್ನ ಜನರು ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯ ಅವರೊಂದಿಗೆ ವ್ಯಾಜ್ಯ ಮಾಡುವೆನು. ಅವರು ನನ್ನ ಜನರನ್ನು ದೇಶದೇಶಗಳಿಗೆ ಚದುರಿಸಿ ನನ್ನ ದೇಶವನ್ನು ಹಂಚಿಕೊಂಡರು. 3 ಹೌದು ನನ್ನ ಜನರಿಗಾಗಿ ಚೀಟುಹಾಕಿ, ವೇಶ್ಯ ವೃತ್ತಿಗೆ ತಮ್ಮ ಗಂಡು ಮಕ್ಕಳನ್ನು ಮಾರಾಟ ಮಾಡಿ, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕೆ ಬದಲು ಮಾಡಿದ್ದಾರೆ. 4 ತೂರ್, ಚೀದೋನ್, ಫಿಲಿಷ್ಟಿಯರ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರುದ್ಧ ನಿಮಗೆ ಕೋಪವೇಕೆ? ನನಗೆ ಪ್ರತಿಕಾರ ಮಾಡುವಿರೋ? ನೀವು ನನಗೆ ಪ್ರತಿಕಾರ ಮಾಡಿದರೆ, ನೀವು ಮಾಡುವ ಕೇಡನ್ನು ತ್ವರೆಯಾಗಿ ನಿಮ್ಮ ತಲೆಗೆ ಬರುವಂತೆ ಮಾಡುವೆನು. 5 ನನ್ನ ಬೆಳ್ಳಿ ಬಂಗಾರಗಳನ್ನು ದೋಚಿಕೊಂಡು, ನನ್ನ ಅಮೂಲ್ಯವಾದ ವಸ್ತ್ರಗಳನ್ನು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ. 6 ಯೆಹೂದದ ಮತ್ತು ಯೆರೂಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ. ಅವರನ್ನು ಸ್ವಂತ ನಾಡಿನಿಂದ ದೂರಮಾಡಿದ್ದೀರಿ. 7 ಹೀಗಿರಲು ಇಗೋ, ನೀವು ಅವರನ್ನು ಮಾರಿದ ಸ್ಥಳದೊಳಗಿಂದ ಹೊರಟು ಬರುವಂತೆ ನಾನು ಅವರನ್ನು ಹುರಿದುಂಬಿಸಿ, ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು. 8 ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು, ಯೆಹೂದ್ಯರಿಗೆ ಮಾರುವೆನು. ಅವರು ಆ ಮಕ್ಕಳನ್ನು ದೂರದ ಜನಾಂಗವಾದ, ಶೆಬದವರಿಗೆ ಮಾರಿಬಿಡುವರು. ಯೆಹೋವನೇ ಇದನ್ನು ನುಡಿದಿದ್ದಾನೆ. 9 ಎಲ್ಲಾ ಜನರಿಗೆ ಹೀಗೆ ಪ್ರಕಟಿಸಿರಿ: ಜನಾಂಗಗಳೇ ಯುದ್ಧಸನ್ನದ್ಧರಾಗಿರಿ, ಶೂರರನ್ನು ಎಚ್ಚರಪಡಿಸಿರಿ, ಶೂರರು ಒಟ್ಟುಗೂಡಲಿ, ಶೂರರೆಲ್ಲರೂ ಯುದ್ಧಕ್ಕೆ ಹೊರಡಲಿ. 10 ೧೦ ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ, ಕತ್ತಿಗಳನ್ನಾಗಿ ಮಾಡಿರಿ. ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ. ಬಲಹೀನನು, “ನಾನು ಶೂರನು” ಎಂದು ಹೇಳಲಿ. 11 ೧೧ ಸುತ್ತಮುತ್ತಲಿನ ಜನಾಂಗಗಳೇ, ತ್ವರೆಯಾಗಿ ಕೂಡಿಬನ್ನಿರಿ, ನೀವೆಲ್ಲರೂ ಒಟ್ಟಾಗಿ ಕೂಡಿಬನ್ನಿರಿ. ಯೆಹೋವನೇ, ನಿನ್ನ ಶೂರರನ್ನು ರಣರಂಗಕ್ಕೆ ಇಳಿಸು. 12 ೧೨ ಜನಾಂಗಗಳು ಎಚ್ಚೆತ್ತುಕೊಂಡು, ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ ಬರಲಿ. ಅಲ್ಲಿ ನಾನು ಸುತ್ತಣ ಜನಾಂಗಗಳಿಗೆಲ್ಲಾ, ನ್ಯಾಯತೀರಿಸಲು ಆಸೀನನಾಗುವೆನು. 13 ೧೩ ಯೆಹೋವನ ಸೈನ್ಯದವರೇ, ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ. ಬನ್ನಿರಿ, ದ್ರಾಕ್ಷಿಯನ್ನು ತುಳಿಯಿರಿ, ದ್ರಾಕ್ಷಿಯ ಅಲೆಯು ತುಂಬಿದೆ. ತೊಟ್ಟಿಗಳು ತುಂಬಿ ತುಳುಕುತ್ತಿವೆ. ಜನಾಂಗಗಳ ದುಷ್ಟತನವು ವಿಪರೀತವಾಗಿದೆ. 14 ೧೪ ಆಹಾ ತೀರ್ಪಿನ ತಗ್ಗಿನಲ್ಲಿ ಗುಂಪುಗುಂಪುಗಳಾಗಿ ಜನರಿದ್ದಾರೆ. ಏಕೆಂದರೆ ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿದೆ. 15 ೧೫ ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಗುಂದುತ್ತವೆ. 16 ೧೬ ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ಧ್ವನಿಗೈಯುತ್ತಾನೆ. ಭೂಮಿ ಹಾಗು ಆಕಾಶಗಳು ನಡುಗುತ್ತವೆ, ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ, ಮತ್ತು ಇಸ್ರಾಯೇಲರಿಗೆ ರಕ್ಷಣದುರ್ಗವೂ ಆಗಿರುವನು. 17 ೧೭ ನಿಮ್ಮ ದೇವರಾದ ಯೆಹೋವನು ನಾನೇ ಎಂದು ನಿಮಗೆ ಮನದಟ್ಟಾಗುವುದು. ಆಗ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಸುವುದರಿಂದ, ಯೆರೂಸಲೇಮ್ ಪವಿತ್ರವಾಗಿರುವುದು. ಅನ್ಯರು ಇನ್ನು ಅದರಲ್ಲಿ ಹಾದುಹೋಗುವುದಿಲ್ಲ. 18 ೧೮ ಆ ದಿನದಲ್ಲಿ, ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವುದು, ಗುಡ್ಡಗಳಿಂದ ಹಾಲು ಹರಿಯುವುದು, ಯೆಹೂದದ ಹಳ್ಳಗಳಲ್ಲೆಲ್ಲಾ ನೀರು ತುಂಬಿರುವುದು, ಯೆಹೋವನ ಆಲಯದೊಳಗೆ ಬುಗ್ಗೆಯು ಉಕ್ಕಿ ಬಂದು, ಶಿಟ್ಟೀಮಿನ ಹಳ್ಳವನ್ನು ತಂಪುಮಾಡುವುದು. 19 ೧೯ ಐಗುಪ್ತ್ಯವು ಹಾಳಾಗುವುದು, ಎದೋಮ್, ಹಾಳಾದ ಬೆಂಗಾಡಾಗುವುದು, ಏಕೆಂದರೆ ಅವರು ಯೆಹೂದ್ಯರನ್ನು ಹಿಂಸಿಸಿ, ಅವರ ದೇಶದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ. 20 ೨೦ ಆದರೆ ಯೆಹೂದವು ಸದಾ ಜನಭರಿತವಾಗಿರುವುದು, ಯೆರೂಸಲೇಮ್ ತಲತಲಾಂತರಕ್ಕೂ ನಿವಾಸಸ್ಥಾನವಾಗಿರುವುದು. 21 ೨೧ ನಾನು ಶಿಕ್ಷಿಸದೆ ಇದ್ದ ಅವರ ರಕ್ತಾಪರಾಧವನ್ನು ಶಿಕ್ಷಿಸದೇ ಬಿಡುವುದಿಲ್ಲ. ಯೆಹೋವನು ಚೀಯೋನಿನಲ್ಲಿ ವಾಸವಾಗಿರುತ್ತಾನೆ.

< ಯೋವೇಲನು 3 >