< ಯೋಬನು 2 >

1 ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು. 2 ಯೆಹೋವನು, “ಎಲ್ಲಿಂದ ಬಂದೆ?” ಎಂದು ಸೈತಾನನನ್ನು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದನು. 3 ಆಗ ಯೆಹೋವನು ಸೈತಾನನಿಗೆ, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ” ಎಂದನು. 4 ಯೆಹೋವನ ಆ ಮಾತಿಗೆ ಸೈತಾನನು, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. 5 ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು. 6 ಯೆಹೋವನು ಸೈತಾನನಿಗೆ, “ನೋಡು, ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು” ಎಂದು ಅಪ್ಪಣೆ ಕೊಟ್ಟನು. 7 ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟು ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು. 8 ಯೋಬನು ಒಂದು ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯಲ್ಲಿ ಕುಳಿತುಕೊಂಡಿದ್ದನು. 9 ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು. 10 ೧೦ ಆಗ ಯೋಬನು ಆಕೆಗೆ, “ಮೂರ್ಖಳು ಮಾತನಾಡಿದಂತೆ ನೀನು ಮಾತನಾಡುತ್ತಿ. ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುವಾಗ ಕೆಟ್ಟದ್ದನ್ನು ಹೊಂದಬಾರದೋ?” ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತು ಅವನ ತುಟಿಗಳಿಂದ ಹೊರಡಲಿಲ್ಲ. 11 ೧೧ ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, “ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ” ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು. 12 ೧೨ ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು. 13 ೧೩ ಬಳಿಕ ಅವನಿಗೆ ವಿಪರೀತ ಬಾಧೆ ಎಂದು ತಿಳಿದು ಏಳು ದಿನಗಳವರೆಗೆ ಹಗಲಿರುಳೂ ನೆಲದ ಮೇಲೆ ಅವನೊಂದಿಗೆ ಕುಳಿತುಕೊಂಡರು. ಅವನ ಸಂಗಡ ಒಬ್ಬರೂ ಮಾತನಾಡದೇ ಇದ್ದರು.

< ಯೋಬನು 2 >