< ಯೆರೆಮೀಯನು 33 >

1 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಅವನಿಗೆ ಯೆಹೋವನು ಈ ಎರಡನೆಯ ವಾಕ್ಯವನ್ನು ಅನುಗ್ರಹಿಸಿದನು. 2 “ಕಾರ್ಯವನ್ನು ಸಾಧಿಸಿಕೊಳ್ಳುವ, ಉದ್ದೇಶಿಸಿ ನೆರವೇರಿಸುವ ಯೆಹೋವನಾಮಾಂಕಿತನು ಇಂತೆನ್ನುತ್ತಾನೆ, 3 ‘ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ, ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು. 4 ದಿಬ್ಬಗಳಿಗೂ ಮತ್ತು ಕತ್ತಿಗಳಿಗೂ ಅಡ್ಡವಾಗಿ ಗೋಡೆಯನ್ನು ಕಟ್ಟಲು ಕೆಡವಿರುವ ಈ ಊರಿನವರ ಮನೆಗಳ ವಿಷಯವಾಗಿಯೂ, ಯೆಹೂದದ ಅರಸರ ಉಪ್ಪರಿಗೆಗಳ ವಿಷಯವಾಗಿಯೂ ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, 5 ಈ ಊರಿನವರು ಕಸ್ದೀಯರನ್ನು ಪ್ರತಿಭಟಿಸುವುದಕ್ಕೆ ಹೊರಟರೆ ಏನು? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರು; ಇವರ ಅಧರ್ಮವನ್ನು ಕಂಡು ಈ ಪಟ್ಟಣಕ್ಕೆ ವಿಮುಖನಾಗಿ ಕೋಪ ರೋಷಭರಿತನಾದ ನಾನೇ ಇವರನ್ನು ಹತಿಸುವೆನು. 6 ಇಗೋ, ನಾನು ಈ ಪಟ್ಟಣವನ್ನು ಜೀರ್ಣೋದ್ಧಾರಮಾಡಿ, ಅದಕ್ಕೆ ಸಮಾಧಾನವನ್ನು ಕೊಟ್ಟು, ನಿವಾಸಿಗಳನ್ನು ಗುಣಪಡಿಸುವೆನು. ಸ್ಥೈರ್ಯ ಸಮಾಧಾನಗಳನ್ನು ಸಮೃದ್ಧಿಯಾಗಿ ಅವರ ಅನುಭವಕ್ಕೆ ತರುವೆನು. 7 ಯೆಹೂದದ ಮತ್ತು ಇಸ್ರಾಯೇಲಿನ ದುರವಸ್ಥೆಯನ್ನು ತಪ್ಪಿಸಿ ಮೊದಲಿನಂತೆಯೇ ಅವುಗಳನ್ನು ಉದ್ಧರಿಸುವೆನು. 8 ಅವರು ನನ್ನ ವಿರುದ್ಧವಾಗಿ ಮಾಡಿರುವ ಅಧರ್ಮವನ್ನೆಲ್ಲಾ ತೊಲಗಿಸಿ ಅವರನ್ನು ಶುದ್ಧೀಕರಿಸುವೆನು; ಅವರು ನನಗೆ ಪಾಪದ್ರೋಹಗಳನ್ನು ಮಾಡಿ ನಡೆಸಿರುವ ಅಪರಾಧಗಳನ್ನೆಲ್ಲಾ ಕ್ಷಮಿಸುವೆನು. 9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಮೇಲುಗಳ ಸುದ್ದಿಯನ್ನು ಕೇಳಿ ನಾನು ಈ ಪಟ್ಟಣಕ್ಕೆ ಉಂಟುಮಾಡುವ ಸುಖ ಸಮಾಧಾನಗಳನ್ನು ನೋಡಿ ಹೆದರಿ ನಡುಗುವ ಸಕಲ ಭೂರಾಜ್ಯಗಳ ಮುಂದೆ ಈ ಪಟ್ಟಣವು ನನ್ನ ಕೀರ್ತಿಯೂ, ಮಹಿಮೆಯೂ ಮತ್ತು ಆನಂದದ ಬಿರುದು ಆಗುವುದು.’” 10 ೧೦ ಯೆಹೋವನು ಇಂತೆನ್ನುತ್ತಾನೆ, “ಜನ ಮತ್ತು ಪಶುಗಳಿಲ್ಲದೆ ಹಾಳಾಗಿದೆ ಎಂದು ನೀವು ಹೇಳುವ ಈ ಸ್ಥಳದಲ್ಲಿ, ಅಂದರೆ ಜನ, ಪಶುರಹಿತವಾಗಿ ನಿವಾಸಿಗಳಿಲ್ಲದೆ ಹಾಳುಬಿದ್ದಿರುವ ಯೆಹೂದದ ಊರುಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ, 11 ೧೧ ಹರ್ಷಧ್ವನಿ, ಉಲ್ಲಾಸ ಕೋಲಾಹಲ, ವಧೂವರರ ಸ್ವರ ಇವುಗಳು ಕೇಳಿಬರುವವು.” 12 ೧೨ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಜನ, ಪಶುಗಳಿಲ್ಲದೆ ಹಾಳಾಗಿರುವ ಈ ಪ್ರಾಂತ್ಯವೂ, ಇಲ್ಲಿನ ಎಲ್ಲಾ ಊರುಗಳೂ ಕುರುಬರು ತಮ್ಮ ಹಿಂಡುಗಳನ್ನು ತಂಗಿಸುವುದಕ್ಕೆ ಪುನಃ ಆಸರೆಯಾಗುವವು. 13 ೧೩ ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಹಿಂಡುಗಳು ಎಣಿಸುವವನ ಕೈಗೆ ಲೆಕ್ಕವಾಗುವಂತೆ ಮತ್ತೆ ಹಾದುಹೋಗುವವು. ಇದು ಯೆಹೋವನ ನುಡಿ” ಎಂಬುದೇ. 14 ೧೪ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನು ಇಸ್ರಾಯೇಲ್ ಮತ್ತು ಯೆಹೂದ ವಂಶಗಳ ವಿಷಯವಾಗಿ ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರುವವು. 15 ೧೫ ಆ ದಿನಗಳಲ್ಲಿ, ಆ ಕಾಲದಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು; ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಗಳನ್ನು ನಿರ್ವಹಿಸುವನು. 16 ೧೬ ಆಗ ಯೆಹೂದ್ಯರು ಸುರಕ್ಷಿತವಾಗಿರುವರು, ಯೆರೂಸಲೇಮಿನವರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ‘ನಮ್ಮ ಸದ್ಧರ್ಮ’ ಎಂಬ ಹೆಸರು ಈ ಪಟ್ಟಣಕ್ಕೆ ಸಲ್ಲುವುದು.” 17 ೧೭ ಯೆಹೋವನು ಇಂತೆನ್ನುತ್ತಾನೆ, “ದಾವೀದನ ವಂಶವು ನಿಂತು ಹೋಗದೆ ಆ ಸಂತಾನದವರು ಇಸ್ರಾಯೇಲರ ಸಿಂಹಾಸನದಲ್ಲಿ ತಪ್ಪದೆ ಆಸೀನರಾಗುತ್ತಾ ಬರುವರು. 18 ೧೮ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ಸರ್ವಾಂಗಹೋಮ, ನೈವೇದ್ಯ, ಯಜ್ಞ ಇವುಗಳನ್ನು ಮಾಡಲು ಲೇವಿಯರಾದ ಯಾಜಕರು ಇದ್ದೇ ಇರುವರು.” 19 ೧೯ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು, 20 ೨೦ “ಯೆಹೋವನು ಇಂತೆನ್ನುತ್ತಾನೆ, ನೀವು ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ ಹಗಲನ್ನು, ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಬಹುದಾದರೆ, 21 ೨೧ ಆಗ ನನ್ನ ದಾಸನಾದ ದಾವೀದನಿಗೂ, ನನ್ನ ಸೇವಕರಾಗಿರುವ ಲೇವಿಯರಾದ ಯಾಜಕರಿಗೂ ನಾನು ಮಾಡಿದ ನಿಬಂಧನೆಯು ನಿಂತು ಹೋಗಿ ದಾವೀದನ ಸಿಂಹಾಸನಾಸೀನನಾಗಿ ಆಳತಕ್ಕ ಅವನ ಸಂತಾನದವನೊಬ್ಬನೂ ಉಳಿಯದೆ ಹೋದಾನು. 22 ೨೨ ನಾನು ನನ್ನ ದಾಸನಾದ ದಾವೀದನ ಸಂತಾನವನ್ನು ಅಸಂಖ್ಯಾತವಾದ ನಕ್ಷತ್ರಗಣದಷ್ಟು ಹೆಚ್ಚಿಸುವೆನು; ನನ್ನ ಸೇವೆಮಾಡುವ ಲೇವಿಯರ ಸಂಖ್ಯೆಯನ್ನು ಅಳೆಯಲಾಗದ ಸಮುದ್ರತೀರದ ಉಸುಬಿನಷ್ಟು ವೃದ್ಧಿಪಡಿಸುವೆನು.” 23 ೨೩ ಇದಲ್ಲದೆ ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು, 24 ೨೪ “ಯೆಹೋವನು ತಾನು ಆರಿಸಿಕೊಂಡ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದಾನೆ ಎಂದು ಈ ಜನರು ಆಡಿಕೊಳ್ಳುವ ಮಾತು ನಿನ್ನ ಲಕ್ಷ್ಯಕ್ಕೆ ಬರಲಿಲ್ಲವೇ? ಇವರು ಜನಾಂಗವೇ ಅಲ್ಲ ಎನ್ನುವಷ್ಟು ನನ್ನ ಜನರನ್ನು ಅಸಡ್ಡೆಮಾಡುತ್ತಾರಲ್ಲಾ. 25 ೨೫ ಯೆಹೋವನು ಇಂತೆನ್ನುತ್ತಾನೆ, ಹಗಲಿರುಳೆಂಬ ನನ್ನ ನಿಬಂಧನೆಯು ಸ್ಥಿರವಾಗಿ ನಿಲ್ಲದಿದ್ದರೆ, ಭೂಮ್ಯಾಕಾಶಗಳ ಕಟ್ಟಳೆಗಳನ್ನು ನಾನು ವಿಧಿಸಿದವನಲ್ಲದಿದ್ದರೆ, 26 ೨೬ ಆಗ ನಾನು ಯಾಕೋಬನ ಸಂತಾನದವರನ್ನು ತ್ಯಜಿಸಿ ಅಬ್ರಹಾಮ, ಇಸಾಕ, ಯಾಕೋಬ, ಇವರ ಸಂತತಿಯನ್ನು ಆಳತಕ್ಕ ಒಡೆಯರನ್ನು ನನ್ನ ದಾಸನಾದ ದಾವೀದನ ವಂಶದಿಂದ ಆರಿಸದೆ ಆ ವಂಶದವರನ್ನು ನಿರಾಕರಿಸಿಬಿಟ್ಟೆನು. ನಾನು ಅವರನ್ನು ದುರವಸ್ಥೆಯಿಂದ ತಪ್ಪಿಸಿ ಕರುಣಿಸೇ ಕರುಣಿಸುವೆನು.”

< ಯೆರೆಮೀಯನು 33 >