< ಯೆರೆಮೀಯನು 27 >

1 ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆಹೋವನಿಂದ ಯೆರೆಮೀಯನಿಗೆ ಈ ಅಪ್ಪಣೆಯಾಯಿತು. 2 “ಇದೇ ಯೆಹೋವನ ನುಡಿ, ನೀನು ಕಣ್ಣಿಗಳನ್ನೂ ಮತ್ತು ನೊಗಗಳನ್ನು ಮಾಡಿ ನಿನ್ನ ಹೆಗಲಿಗೆ ಹಾಕಿಕೊಂಡು, 3 ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಯೆರೂಸಲೇಮಿನಲ್ಲಿ ಬಂದಿರುವ ರಾಯಭಾರಿಗಳ ಮೂಲಕ ಅವುಗಳನ್ನು ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನ್ಯರ ರಾಜ, ತೂರಿನ ರಾಜ, ಚೀದೋನಿನ ರಾಜ, ಇವರಿಗೆ ಕಳುಹಿಸು. 4 ನೀನು ಆ ರಾಯಭಾರಿಗಳಿಗೆ, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ನಿಮ್ಮ ಒಡೆಯರಿಗೆ ನೀವು ಹೀಗೆ ಅರಿಕೆಮಾಡುವಂತೆ ಅಪ್ಪಣೆಕೊಟ್ಟಿದ್ದಾನೆ ಎಂಬುದಾಗಿ ಹೇಳಿ ಅವರು ತಮ್ಮ ತಮ್ಮ ಒಡೆಯರಿಗೆ ತಿಳಿಸಬೇಕಾದ ಈ ಮಾತುಗಳನ್ನು ಅವರಿಗೆ ಆಜ್ಞಾಪಿಸು.’ 5 ‘ನಾನೇ ಕೈ ನೀಡಿ ನನ್ನ ಮಹಾ ಶಕ್ತಿಯಿಂದ ಲೋಕವನ್ನೂ ಭೂಮಿಯ ಮೇಲಣ ಮಾನವರನ್ನೂ ಪಶುಗಳನ್ನೂ ಸೃಷ್ಟಿಸಿದ್ದೇನೆ; ಈ ನನ್ನ ಸೃಷ್ಟಿಯನ್ನು ನನಗೆ ಸರಿತೋಚಿದವನಿಗೇ ಕೊಡಬಲ್ಲೆನು. 6 ಈಗ ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನ ಕೈವಶಮಾಡಿದ್ದೇನೆ; ಅವನ ಸೇವೆಗಾಗಿ ಭೂಜಂತುಗಳನ್ನೂ ಕೊಟ್ಟಿದ್ದೇನೆ. 7 ಅವನ ದೇಶಕ್ಕೆ ಕಾಲವು ಸಮೀಪಿಸುವ ತನಕ ಸಕಲ ಜನಾಂಗಗಳು ಅವನಿಗೂ, ಅವನ ಮಗನಿಗೂ ಮತ್ತು ಮೊಮ್ಮಗನಿಗೂ ಅಡಿಯಾಳಾಗಿ ಬಿದ್ದಿರುವವು; ಆ ಮೇಲೆ ಅನೇಕ ಜನಾಂಗಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು. 8 ಯಾವ ಜನಾಂಗ, ಯಾವ ರಾಜ್ಯ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲಿಕ್ಕೂ, ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಡಲಿಕ್ಕೂ ಒಪ್ಪದೆ ಇರುವನೋ ಆ ಜನಾಂಗವನ್ನು ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸುತ್ತಾ ಬಂದು, ಕಡೆಯಲ್ಲಿ ಅವನ ಕೈಯಿಂದಲೇ ನಿರ್ಮೂಲ ಮಾಡಿಸುವೆನು’ ಇದು ಯೆಹೋವನ ನುಡಿ. 9 ‘ನೀವು ಬಾಬೆಲಿನ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿನವರು, ಕಣಿಯವರು, ಮಾಟದವರು, ಇವರಿಗೆ ಕಿವಿಗೊಡಲೇಬಾರದು. 10 ೧೦ ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ; ನೀವು ನನ್ನಿಂದ ಅಟ್ಟಲ್ಪಟ್ಟು ದೇಶಭ್ರಷ್ಟರಾಗಿ ಅಳಿದುಹೋಗುವುದಕ್ಕೆ ಅವರ ದುರ್ಬೋಧನೆಯು ಆಸ್ಪದವಾಗುವುದು. 11 ೧೧ ಯಾವ ಜನಾಂಗವು ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನ ಅಡಿಯಾಳಾಗುವುದೋ, ಆ ಜನಾಂಗದವರನ್ನು ನಾನು ಅವರ ದೇಶದಲ್ಲಿ ನೆಲೆಗೊಳಿಸುವೆನು; ಅವರು ಅಲ್ಲಿ ಭೂಮಿಯನ್ನು ವ್ಯವಸಾಯಮಾಡಿ ವಾಸಿಸುವರು. ಯೆಹೋವನೇ ಇದನ್ನು ನುಡಿದಿದ್ದಾನೆ.” 12 ೧೨ ಇದಲ್ಲದೆ ನಾನು ಆ ಎಲ್ಲಾ ಮಾತುಗಳನ್ನು ಅನುಸರಿಸಿ ಯೆಹೂದದ ಅರಸನಾದ ಚಿದ್ಕೀಯನಿಗೂ ಹೀಗೆ ನುಡಿದೆನು, “ಬಾಬೆಲಿನ ಅರಸನ ನೊಗಕ್ಕೆ ಹೆಗಲುಕೊಟ್ಟು ಅವನಿಗೂ ಅವನ ಜನರಿಗೂ ಅಡಿಯಾಳಾಗಿರಿ, ಆಗ ಬದುಕುವಿರಿ. 13 ೧೩ ನೀನೂ ನಿನ್ನ ಜನರೂ ಖಡ್ಗ ಕ್ಷಾಮ ಮತ್ತು ವ್ಯಾಧಿಗಳಿಂದ ಏಕೆ ಸಾಯಬೇಕು? ಬಾಬೆಲಿನ ಅರಸನ ಅಡಿಯಾಳಾಗಲು ಒಪ್ಪದ ಜನಾಂಗಕ್ಕೆ ಈ ಗತಿಯಾಗುವುದೆಂದು ಯೆಹೋವನು ನುಡಿದಿದ್ದಾನಷ್ಟೆ. 14 ೧೪ ‘ನೀವು ಬಾಬೆಲಿನ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. 15 ೧೫ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ಕಳುಹಿಸಲಿಲ್ಲ; ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತಾರೆ. ನೀವೂ, ನಿಮಗೆ ಪ್ರವಾದಿಸುವ ಪ್ರವಾದಿಗಳೂ ನನ್ನಿಂದ ಅಟ್ಟಲ್ಪಟ್ಟು ಅಳಿದುಹೋಗುವುದಕ್ಕೆ ಅವರ ದುರ್ಬೋಧನೆಯು ಆಸ್ಪದವಾಗುವುದು.’” 16 ೧೬ ಇದಲ್ಲದೆ ನಾನು ಯಾಜಕರಿಗೂ ಈ ಸಕಲಜನರಿಗೂ ಹೀಗೆ ನುಡಿದೆನು, “ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಯೆಹೋವನ ಆಲಯದ ಉಪಕರಣಗಳು ಬೇಗನೆ ಬಾಬೆಲಿನಿಂದ ಹಿಂದಕ್ಕೆ ತರಲ್ಪಡುವವು’ ಎಂಬುದಾಗಿ ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ; ನಿಮಗೆ ಸುಳ್ಳನ್ನು ಸಾರುತ್ತಾರೆ. 17 ೧೭ ಅವರ ಕಡೆಗೆ ಕಿವಿಗೊಡಲೇ ಬಾರದು; ಬಾಬೆಲಿನ ಅರಸನ ಅಡಿಯಾಳಾಗಿರಿ, ಬದುಕುವಿರಿ. 18 ೧೮ ಈ ಪಟ್ಟಣವು ಏಕೆ ಹಾಳಾಗಬೇಕು? ಅವರು ಪ್ರವಾದಿಗಳಾಗಿದ್ದು ಯೆಹೋವನ ವಾಕ್ಯಕ್ಕೆ ನೆಲೆಯಾಗಿದ್ದರೆ, ಈಗ ಸೇನಾಧೀಶ್ವರನಾದ ಯೆಹೋವನಿಗೆ ವಿಜ್ಞಾಪನೆ ಮಾಡಿ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ ಯೆರೂಸಲೇಮಿನಲ್ಲಿಯೂ ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಬೇಡಿಕೊಳ್ಳಲಿ. 19 ೧೯ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಸಮಸ್ತ ಪ್ರಧಾನರನ್ನೂ ಯೆರೂಸಲೇಮಿನ ಸಮಸ್ತ ಪ್ರಧಾನರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ ಕೆಲವು ಉಪಕರಣಗಳನ್ನು ತೆಗೆದುಕೊಳ್ಳಲಿಲ್ಲವಲ್ಲಾ. 20 ೨೦ ಆ ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಪೀಠಗಳು, ಈ ಪಟ್ಟಣದಲ್ಲಿ ನಿಂತಿರುವ ಉಪಕರಣಗಳು, ಇವುಗಳ ವಿಷಯವಾಗಿ, ಅಂದರೆ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ, 21 ೨೧ ಯೆರೂಸಲೇಮಿನಲ್ಲಿಯೂ ಉಳಿದಿರುವ ಉಪಕರಣಗಳ ವಿಷಯವಾಗಿ ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, 22 ೨೨ ‘ಅವು ಬಾಬಿಲೋನಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಉದ್ಧರಿಸುವ ದಿನದ ತನಕ ಅಲ್ಲೇ ಇರುವವು; ಆಗ ನಾನು ಅವುಗಳನ್ನು ಪುನಃ ತಂದು ಈ ಸ್ಥಳಕ್ಕೆ ಸೇರಿಸುವೆನು. ಇದು ಯೆಹೋವನ ನುಡಿ.’”

< ಯೆರೆಮೀಯನು 27 >