< ಯೆಶಾಯನು 65 >

1 “ವಿಜ್ಞಾಪಿಸಿಕೊಳ್ಳದವರಿಗೂ ಪ್ರಸನ್ನನಾಗಿದ್ದೆನು, ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, ನನ್ನ ನಾಮವನ್ನೆತ್ತಿ ಪ್ರಾರ್ಥಿಸದ ಜನಾಂಗಕ್ಕೂ, ‘ಇಗೋ, ನಾನಿದ್ದೇನೆ! ನಾನಿದ್ದೇನೆ’ ಎನ್ನುತ್ತಿದ್ದೆನು. 2 ನನ್ನನ್ನು ತೊರೆದು, ಮನಸ್ಸು ಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನು. 3 ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ. 4 ಗೋರಿಗಳಲ್ಲಿ ಕುಳಿತುಕೊಳ್ಳುತ್ತಾ, ಗುಪ್ತಸ್ಥಳಗಳಲ್ಲಿ ರಾತ್ರಿ ಕಳೆಯುತ್ತಾ, ಹಂದಿಯ ಮಾಂಸವನ್ನು ತಿನ್ನುತ್ತಾ, ಅಸಹ್ಯ ಪದಾರ್ಥಗಳ ಸಾರನ್ನು ತಮ್ಮ ಪಾತ್ರೆಗಳಲ್ಲಿ ಬಡಿಸಿಕೊಳ್ಳುತ್ತಾ ಅಲ್ಲಿ ನಿಂತಿರುತ್ತಾರೆ. 5 ಅವರು, ‘ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ’ ಎನ್ನುತ್ತಾ, ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ, ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ. 6 ಇಗೋ, ಇದೆಲ್ಲಾ ಶಾಸನವಾಗಿ ನನ್ನ ಕಣ್ಣೆದುರಿಗಿದೆ, ನಾನು ಮುಯ್ಯಿ ತೀರಿಸುವ ತನಕ ಸುಮ್ಮನಿರಲಾರೆನು; ಅದರ ಪ್ರತಿಫಲವನ್ನು ಇವರ ಮಡಿಲಿಗೆ ಹಾಕುವೆನು; 7 ಇವರೂ ಇವರ ಪೂರ್ವಿಕರೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ, ನನ್ನನ್ನು ಹೀನೈಸಿ ನಡೆಸಿದ ಅಪರಾಧ ಕಾರ್ಯದ ಫಲವನ್ನು ಅದರ ಅಳತೆಗೆ ಸರಿಯಾಗಿ ಇವರ ಮಡಿಲಿಗೆ ಸುರಿಯುವೆನು” ಎಂದು ಯೆಹೋವನು ಹೇಳುತ್ತಾನೆ. 8 ಯೆಹೋವನು ಹೀಗನ್ನುತ್ತಾನೆ, “ರಸ ದೊರೆಯಬಹುದಾದ ದ್ರಾಕ್ಷಿಯ ಗೊಂಚಲನ್ನು ಒಬ್ಬನು ನೋಡಿ, ‘ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ’ ಎನ್ನುವಂತೆ, ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು, ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು, 9 ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು. 10 ೧೦ ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು. 11 ೧೧ ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಏರ್ಪಡಿಸಿ, ಗತಿದಾಯಕ ದೇವತೆಗೆ ಮದ್ಯವನ್ನು ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು. 12 ೧೨ ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.” 13 ೧೩ ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. 14 ೧೪ ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಹೃದಯದ ಯಾತನೆಯಿಂದ ಗೋಳಾಡುವಿರಿ. 15 ೧೫ ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು. 16 ೧೬ ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತು ಹೋಗಿರುವುದರಿಂದ ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯವಂತನಾದ ದೇವರ ಮೇಲೆ ಆಣೆಯಿಡುವನು. 17 ೧೭ “ಇಗೋ, ನೂತನ ಆಕಾಶಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. 18 ೧೮ ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ, ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು. 19 ೧೯ ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರಲ್ಲಿ ಹರ್ಷಗೊಳ್ಳುವೆನು. ರೋದನ ಶಬ್ದವೂ, ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು. 20 ೨೦ ಕೆಲವು ದಿನ ಮಾತ್ರ ಬದುಕತಕ್ಕ ಕೂಸಾಗಲಿ, ವೃದ್ಧನಾಗಲಿ ಅಲ್ಲಿ ಇರುವುದಿಲ್ಲ; ಯುವಕನು ನೂರು ವರ್ಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರ್ಷದೊಳಗೆ ಶಾಪ ತಗಲದು. 21 ೨೧ ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ದ್ರಾಕ್ಷಿಯ ತೋಟಗಳ ಫಲವನ್ನು ತಾವೇ ಅನುಭವಿಸುವರು. 22 ೨೨ ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಸಂಪೂರ್ಣವಾಗಿ ಅನುಭವಿಸುವರು. 23 ೨೩ ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು. 24 ೨೪ ಆಗ ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು. 25 ೨೫ ತೋಳವು ಕುರಿಯ ಸಂಗಡ ಮೇಯುವುದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು, ಹಾವಿಗೆ ಧೂಳೇ ಆಹಾರವಾಗುವುದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ” ಎಂದು ಯೆಹೋವನು ಅನ್ನುತ್ತಾನೆ.

< ಯೆಶಾಯನು 65 >