< ಯೆಶಾಯನು 55 >

1 “ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ. 2 ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. 3 ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು. 4 ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು. 5 ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು. 6 ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. 7 ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು. 8 ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. 10 ೧೦ ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, 11 ೧೧ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ. 12 ೧೨ ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು. 13 ೧೩ ಮುಳ್ಳಿಗೆ ಬದಲಾಗಿ ತುರಾಯಿಯೂ, ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನ ನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.”

< ಯೆಶಾಯನು 55 >