< ಯೆಶಾಯನು 15 >

1 ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು. 2 ಬಯಿತ್ ಮತ್ತು ದೀಬೋನ್ ಊರಿನವರು ಆಳುವುದಕ್ಕಾಗಿ, ತಮ್ಮ ಎತ್ತರವಾದ ಪೂಜಾ ಸ್ಥಳಗಳಿಗೆ ಹೋಗುತ್ತಾರೆ. ನೆಬೋವಿನಲ್ಲಿಯೂ, ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ. ಎಲ್ಲರ ತಲೆಯು ಬೋಳಾಗಿರುವುದು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಲ್ಪಡುವುದು. 3 ಬೀದಿಗಳಲ್ಲಿ ತಿರುಗುವವರು ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ ಮತ್ತು ತಮ್ಮ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ಎಲ್ಲರು ಅರಚುತ್ತಾ ಕಣ್ಣೀರನ್ನು ಸುರಿಸಿ ಸುರಿಸಿ ಗೋಳಾಡುತ್ತಾ ಇಳಿದು ಹೋಗಿದ್ದಾರೆ. 4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಇವುಗಳ ರೋದನವು ಯಹಜಿನ ಪಟ್ಟಣದವರೆಗೂ ಕೇಳಿಸುತ್ತದೆ. ಇದರಿಂದ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುತ್ತಾರೆ; ಅವರ ಹೃದಯಗಳು ಭಯದಿಂದ ತತ್ತರಿಸುತ್ತದೆ. 5 ನನ್ನ ಹೃದಯವು ಮೋವಾಬಿನ ನಿಮಿತ್ತವಾಗಿ ಮೊರೆಯಿಡುತ್ತದೆ, ಅಲ್ಲಿಂದ ಪಲಾಯನವಾದವರು ಚೋಯರಿಗೂ, ಎಗ್ಲತ್ ಶೆಲಿಶೀಯಕ್ಕೂ ಓಡಿಹೋಗುತ್ತಾರೆ, ಅಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಾರೆ, ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಧ್ವನಿಗೈಯುತ್ತಾರೆ. 6 ನಿಮ್ರೀಮ್ ಹೊಳೆಯು ಹಾಳಾಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು, ಯಾವ ಹಸಿರೂ ಇಲ್ಲ. 7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ. 8 ಪ್ರಲಾಪವು ಮೋವಾಬಿನ ಎಲ್ಲೆಗಳ ತನಕ ಹಬ್ಬಿದೆ, ಅದರ ಅರಚಾಟವು ಎಗ್ಲಯಿಮಿನವರೆಗೂ, ಬೆಯೇರ್ ಏಲೀಮಿನ ಪರ್ಯಂತರವೂ ವ್ಯಾಪಿಸಿದೆ. 9 ದೀಮೋನಿನ ನೀರೆಲ್ಲಾ ರಕ್ತವಾಯಿತು. ಆದರೆ ದೀಮೋನಿನ ಮೇಲೆ ಹೆಚ್ಚು ಬಾಧೆಯನ್ನು, ಅಂದರೆ ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.

< ಯೆಶಾಯನು 15 >