< ಹೋಶೇಯನು 9 >

1 ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ. 2 ಕಣವೂ, ದ್ರಾಕ್ಷಿಯ ತೊಟ್ಟಿಯೂ ನಿನ್ನ ಜನರಿಗೆ ಜೀವನ ಆಧಾರವಾಗುವುದಿಲ್ಲ; ಹೊಸ ದ್ರಾಕ್ಷಾರಸದ ನಿರೀಕ್ಷೆಯು ಅವರಿಗೆ ವ್ಯರ್ಥವಾಗಿ ಹೋಗುವುದು. 3 ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, ಅಶ್ಶೂರದಲ್ಲಿ ಅವರು ಹೊಲಸಾದ ಆಹಾರವನ್ನು ತಿನ್ನುವರು. 4 ಯೆಹೋವನಿಗೆ ದ್ರಾಕ್ಷಾರಸವನ್ನು ನೈವೇದ್ಯವಾಗಿ ಸುರಿಯರು, ಅವರ ಯಜ್ಞಗಳು ಆತನಿಗೆ ಮೆಚ್ಚಿಕೆಯಾಗುವುದಿಲ್ಲ. ಅವರ ಆಹಾರವು ಸತ್ತವರ ಮನೆಯ ಆಹಾರದಂತಿರುವುದು; ಅದನ್ನು ತಿನ್ನುವವರೆಲ್ಲರೂ ಅಶುದ್ಧರಾಗುವರು, ಅದು ಅವರ ಹೊಟ್ಟೆತುಂಬುವುದಕ್ಕೆ ಮಾತ್ರ ಅನುಕೂಲವಾಗುವುದು, ಅದು ಯೆಹೋವನ ಆಲಯಕ್ಕೆ ಬರಲು ಯೋಗ್ಯವಲ್ಲ. 5 ನೀವು ಹಬ್ಬದ ದಿನದಲ್ಲಿ, ಯೆಹೋವನ ಮಹೋತ್ಸವ ದಿನದಲ್ಲಿ ಏನು ಮಾಡುವಿರಿ? 6 ಆಹಾ, ಅವರು ವಿನಾಶದ ದೇಶವನ್ನು ಬಿಟ್ಟುಹೋಗುವರು; ಐಗುಪ್ತವು ಅವರಿಗೆ ಸ್ಮಶಾನವಾಗುವುದು, ಮೋಫ್ ಪಟ್ಟಣವು ಅವರನ್ನು ಹೂಣಿಡುವುದು; ಅವರ ಇಷ್ಟದ ಬೆಳ್ಳಿಯ ಒಡವೆಗಳು ಮುಳ್ಳು ಪೊದೆಗಳ ಪಾಲಾಗುವವು; ಮುಳ್ಳುಗಿಡಗಳು ಅವರ ಗುಡಾರಗಳಲ್ಲಿ ಹುಟ್ಟಿಕೊಳ್ಳುವವು. 7 ದಂಡನೆಯ ದಿನಗಳು ಹತ್ತಿರವಾಗಿದೆ, ಮುಯ್ಯಿತೀರಿಸುವ ದಿನಗಳು ಸಮೀಪಿಸಿವೆ. ಅದು ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು; ಇಸ್ರಾಯೇಲೇ, ನಿನ್ನ ಅಧರ್ಮವು ಬಹಳವಾಗಿರುವುದರಿಂದಲೂ, ವಿರೋಧವು ಹೆಚ್ಚಾಗಿರುವುದರಿಂದಲೂ, “ಪ್ರವಾದಿಯು ಮೂರ್ಖನು ಮತ್ತು ದೇವರಾತ್ಮ ಪ್ರೇರಿತನು ಹುಚ್ಚನು” ಅಂದುಕೊಳ್ಳುತ್ತೀ. 8 ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ. 9 ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ. ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆ ಮಾಡುವನು. 10 ೧೦ ಕಾಡಿನಲ್ಲಿ ದ್ರಾಕ್ಷಿಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪೂರ್ವಿಕರನ್ನು ಕಂಡೆನು. ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾಗಿ ದೀಕ್ಷೆಗೊಂಡು, ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು. 11 ೧೧ ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವುದು; ಯಾರೂ ಹೆರರು, ಗರ್ಭಿಣಿಯಾಗುವುದಿಲ್ಲ, ಗರ್ಭಧರಿಸರು. 12 ೧೨ ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ, ಯಾರೂ ಉಳಿಯದಂತೆ ಮಾಡಿ ಅವರಿಗೆ ಪುತ್ರ ಶೋಕವನ್ನು ಉಂಟುಮಾಡುತ್ತಲೇ ಬರುವೆನು; ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ! 13 ೧೩ ತೂರು ಹೇಗೆ ಕಾಣಿಸುತ್ತದೋ ಹಾಗೆಯೇ ಎಫ್ರಾಯೀಮು ಹುಲ್ಗಾವಲಿನಲ್ಲಿ ನೆಟ್ಟಿರುವುದಾಗಿ ಕಾಣಿಸುತ್ತದೆ; ಆದರೆ ಎಫ್ರಾಯೀಮು ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು. 14 ೧೪ ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತೀಯೋ? ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು. 15 ೧೫ ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ. 16 ೧೬ ಎಫ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ. ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು. 17 ೧೭ ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನ ಮಾತಿಗೆ ಕಿವಿಗೊಡಲಿಲ್ಲ; ಅವರಿಗೆ ಜನಾಂಗಗಳಲ್ಲಿ ಅಲೆದಾಡುವ ಗತಿಯಾಗುವುದು.

< ಹೋಶೇಯನು 9 >