< ಇಬ್ರಿಯರಿಗೆ ಬರೆದ ಪತ್ರಿಕೆ 5 >

1 ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ ನೇಮಿಸಲಾಗಿದ್ದು. ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು. 2 ತಾನೂ ಸಹ ಬಲಹೀನನಾಗಿರುವುದರಿಂದ ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು. 3 ಆದ್ದರಿಂದ, ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು. 4 ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ. 5 ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ “ನೀನು ನನ್ನ ಮಗನು, ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು. 6 ಆತನು ಇನ್ನೊಂದು ಕಡೆಯಲ್ಲಿ, “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ. (aiōn g165) 7 ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. 8 ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. 9 ಇದಲ್ಲದೆ ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ನಿತ್ಯ ರಕ್ಷಣೆಗೆ ಕಾರಣನಾದನು. (aiōnios g166) 10 ೧೦ ಅಲ್ಲದೆ ಆತನು ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು. 11 ೧೧ ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ. 12 ೧೨ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ. 13 ೧೩ ಹಾಲು ಕುಡಿಯುವವನು ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ. 14 ೧೪ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ, ಅಂದರೆ ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.

< ಇಬ್ರಿಯರಿಗೆ ಬರೆದ ಪತ್ರಿಕೆ 5 >