< ಆದಿಕಾಂಡ 7 >

1 ಆಗ ಯೆಹೋವನು ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿರುವ ಮನುಷ್ಯ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿಯಿಂದ ನಡೆಯುವುದನ್ನು ನೋಡಿದ್ದೇನೆ. 2 ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು. 3 ಪಕ್ಷಿಗಳಲ್ಲಿಯೂ ಏಳೇಳು ಗಂಡು ಹೆಣ್ಣುಗಳನ್ನು ತೆಗೆದುಕೊಳ್ಳಬೇಕು. ಹೀಗೆ ಆಯಾ ಜಾತಿಯನ್ನು ಭೂಮಿಯ ಮೇಲೆ ಉಳಿಸಿ ಕಾಪಾಡಬೇಕು. 4 ಏಳು ದಿನಗಳ ನಂತರ ನಾನು ಭೂಮಿಯ ಮೇಲೆ ನಲ್ವತ್ತು ದಿನ ಹಗಲಿರುಳು ಮಳೆಯನ್ನು ಸುರಿಸಿ, ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲಾ ಭೂಮಿಯ ಮೇಲಿನಿಂದ ನಾಶಮಾಡುತ್ತೇನೆ” ಎಂದು ಹೇಳಿದನು. 5 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು. 6 ಭೂಮಿಯ ಮೇಲೆ ಜಲಪ್ರಳಯವುಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು. 7 ಆಗ ನೋಹನು ಪ್ರಳಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಿದನು. 8 ದೇವರು ನೋಹನಿಗೆ ಅಪ್ಪಣೆಕೊಟ್ಟಂತೆ ಶುದ್ಧ, ಅಶುದ್ಧ, ಪಶು ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ 9 ಗಂಡು ಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ದೇವರ ಅಪ್ಪಣೆಯಂತೆ ನೋಹನ ನಾವೆಯಲ್ಲಿ ಸೇರಿದವು. 10 ೧೦ ಆ ಏಳು ದಿನಗಳಾದ ನಂತರ ಜಲಪ್ರಳಯವು ಭೂಮಿ ಮೇಲೆ ಬಂತು. 11 ೧೧ ನೋಹನ ಜೀವಮಾನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿರುವ ಸಾಗರದ ಒರತೆಗಳು ತೆರೆದುಕೊಂಡವು; ಆಕಾಶದ ತೂಬುಗಳೂ ತೆರೆದವು. 12 ೧೨ ನಲ್ವತ್ತು ದಿನ ಹಗಲಿರುಳು ಭೂಮಿಯ ಮೇಲೆ ಬಿರುಮಳೆ ಸುರಿಯಿತು. 13 ೧೩ ಆ ದಿನದಲ್ಲಿ ನೋಹನೂ ಶೇಮ್, ಹಾಮ್, ಯೆಫೆತರೆಂಬ ಅವನ ಮಕ್ಕಳು, ಅವನ ಹೆಂಡತಿಯೂ ಮೂರು ಮಂದಿ ಸೊಸೆಯರೂ ನಾವೆಯಲ್ಲಿ ಸೇರಿದರು. 14 ೧೪ ಎಲ್ಲಾ ಪ್ರಾಣಿಗಳಲ್ಲಿ ಅಂದರೆ ಸಕಲ ಜಾತಿಯ ಮೃಗ, ಪಶು, ಕ್ರಿಮಿಕೀಟಗಳಲ್ಲಿಯೂ ಪಕ್ಷಿ ಮೊದಲಾದ ರೆಕ್ಕೆಯಿರುವ ಎಲ್ಲಾ ಜೀವಿಗಳಲ್ಲಿಯೂ 15 ೧೫ ಎರಡೆರಡು ತಮ್ಮ ತಮ್ಮ ಜಾತಿಗನುಸಾರವಾಗಿ ನೋಹನ ಬಳಿಗೆ ಬಂದು ನಾವೆಯಲ್ಲಿ ಸೇರಿದವು. 16 ೧೬ ದೇವರು ನೋಹನಿಗೆ ಅಪ್ಪಣೆ ಕೊಟ್ಟಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವನು ನೋಹನನ್ನು ಒಳಗೆ ಇಟ್ಟು ಬಾಗಿಲನ್ನು ಮುಚ್ಚಿದನು. 17 ೧೭ ಜಲಪ್ರಳಯವು ನಲ್ವತ್ತು ದಿನ ಭೂಮಿಯ ಮೇಲೆ ಬಂದು ನೀರು ಹೆಚ್ಚುತ್ತಾ ನಾವೆಯನ್ನು ಮೇಲಕ್ಕೆ ಎತ್ತಲು ಅದು ನೀರಿನ ಮೇಲೆ ತೇಲಾಡಿತು. 18 ೧೮ ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು. 19 ೧೯ ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾಗಿದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು. 20 ೨೦ ನೀರು ಆ ಬೆಟ್ಟಗಳಿಂತಲೂ ಹದಿನೈದು ಮೊಳ ಮೇಲಕ್ಕೆ ಹೆಚ್ಚಲು ಅವುಗಳು ಸಂಪೂರ್ಣ ಮುಚ್ಚಿಹೋದುದರಿಂದ, 21 ೨೧ ಪಶು, ಪಕ್ಷಿ, ಮೃಗ, ಕ್ರಿಮಿಕೀಟಗಳು ಮನುಷ್ಯರ ಸಹಿತವಾಗಿ ಭೂಮಿಯ ಮೇಲೆ ಚಲಿಸುವ ಸಕಲ ಭೂಜಂತುಗಳೆಲ್ಲವೂ ನಾಶವಾದವು. 22 ೨೨ ಮೂಗಿನಿಂದ ಉಸಿರಾಡುವ ಭೂಜಂತುಗಳೆಲ್ಲವೂ ಸತ್ತವು. 23 ೨೩ ಮನುಷ್ಯ ಮೊದಲುಗೊಂಡು ಪಶು, ಪಕ್ಷಿ, ಕ್ರಿಮಿಕೀಟಗಳ ವರೆಗೂ ಭೂಮಿಯ ಮೇಲಿದ್ದದ್ದೆಲ್ಲಾ ನಾಶವಾಯಿತು; ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳೂ ಮಾತ್ರ ಉಳಿದುಕೊಂಡವು. 24 ೨೪ ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲವಾಗಿ ನಿಂತಿತು.

< ಆದಿಕಾಂಡ 7 >

The Great Flood
The Great Flood