< ಆದಿಕಾಂಡ 46 >

1 ಇಸ್ರಾಯೇಲನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು, ಪ್ರಯಾಣ ಮಾಡಿ ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಯಜ್ಞಗಳನ್ನು ಅರ್ಪಿಸಿದನು. 2 ಅಲ್ಲಿ ದೇವರು ರಾತ್ರಿಯ ದರ್ಶನದಲ್ಲಿ ಇಸ್ರಾಯೇಲನಿಗೆ, “ಯಾಕೋಬನೇ, ಯಾಕೋಬನೇ” ಎಂದು ಕರೆಯಲು, ಅವನು, “ಇಗೋ ಇದ್ದೇನೆ” ಎಂದನು. 3 ಆತನು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು ನಾನೇ; ನೀನು ಗಟ್ಟಾ ಇಳಿದು ಹೆದರದೆ ಐಗುಪ್ತ ದೇಶಕ್ಕೆ ಹೋಗು; ಅಲ್ಲಿ ನಿನ್ನಿಂದ ಮಹಾ ಜನಾಂಗವುಂಟಾಗುವಂತೆ ಮಾಡುವೆನು. 4 ನಾನೇ ನಿನ್ನೊಂದಿಗೆ ಐಗುಪ್ತಕ್ಕೆ ಬರುವೆನು; ಅಲ್ಲಿಂದ ನಿಶ್ಚಯವಾಗಿ ನಿನ್ನನ್ನು ಪುನಃ ಕರೆದುಕೊಂಡು ಬರುವೆನು; (ನಿನ್ನ ಅವಸಾನಕಾಲದಲ್ಲಿ) ನಿನ್ನ ಮರಣದ ಸಮಯದಲ್ಲಿ ಯೋಸೇಫನು ನಿನ್ನೊಂದಿಗೆ ಇದ್ದು ಸಂತೈಸುವನು” ಎಂದು ಹೇಳಿದನು. 5 ಬಳಿಕ ಯಾಕೋಬನು ಬೇರ್ಷೆಬದಿಂದ ಹೊರಟನು. ಫರೋಹನು ಅವನನ್ನು ಕರೆದುಕೊಂಡು ಬರುವುದಕ್ಕೆ ಕಳುಹಿಸಿದ್ದ ರಥಗಳಲ್ಲಿ ಇಸ್ರಾಯೇಲನ ಮಕ್ಕಳು, ತಮ್ಮ ತಂದೆಯಾದ ಯಾಕೋಬನನ್ನೂ, ಹೆಂಡತಿ ಮಕ್ಕಳನ್ನೂ ಕುಳ್ಳಿರಿಸಿಕೊಂಡು ಹೊರಟರು. 6 ಯಾಕೋಬನೂ, ಅವನ ಮನೆಯವರೆಲ್ಲರೂ ತಮ್ಮ ದನಕುರಿಗಳನ್ನೂ ತಾವು ಕಾನಾನ್‌ ದೇಶದಲ್ಲಿ ಸಂಪಾದಿಸಿಕೊಂಡಿದ್ದ ಸಂಪತ್ತುಗಳನ್ನೂ ತೆಗೆದುಕೊಂಡು ಐಗುಪ್ತ ದೇಶವನ್ನು ತಲುಪಿದರು. 7 ಹೀಗೆ ಯಾಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮಕ್ಕಳನ್ನೂ, ತನ್ನ ಮನೆಯವರೆಲ್ಲರನ್ನೂ ತನ್ನ ಸಂಗಡಲೇ ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದನು. 8 ಐಗುಪ್ತ ದೇಶಕ್ಕೆ ಬಂದು ಸೇರಿದ ಇಸ್ರಾಯೇಲನ ಮಕ್ಕಳ ಹೆಸರುಗಳು: ಯಾಕೋಬನು ಮತ್ತು ಅವನ ಚೊಚ್ಚಲ ಮಗನಾದ ರೂಬೇನನು. 9 ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್, ಕರ್ಮೀ. 10 ೧೦ ಸಿಮೆಯೋನನ ಮಕ್ಕಳು: ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ. 11 ೧೧ ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ. 12 ೧೨ ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್, ಜೆರಹ. ಇವರಲ್ಲಿ ಏರ್, ಓನಾನ್ ಎಂಬವರು ಕಾನಾನ್ ದೇಶದಲ್ಲೇ ಸತ್ತು ಹೋಗಿದ್ದರು. ಪೆರೆಚನ ಮಕ್ಕಳು: ಹೆಚ್ರೋನ್, ಹಾಮೂಲ್. 13 ೧೩ ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್, ಶಿಮ್ರೋನ್. 14 ೧೪ ಜೆಬುಲೂನನ ಮಕ್ಕಳು: ಸೆರೆದ್, ಏಲೋನ್, ಯಹ್ಲೇಲ್ 15 ೧೫ ಇವರೆಲ್ಲರು ಲೇಯಳ ಸಂತತಿಯವರು. ಆಕೆಯು ಯಾಕೋಬನಿಗೆ ಇವರನ್ನೂ, ದೀನಳೆಂಬ ಹೆಣ್ಣು ಮಗಳನ್ನೂ ಪದ್ದನ್ ಅರಾಮಿನಲ್ಲಿ ಪಡೆದಳು. ಆಕೆಯಿಂದ ಹುಟ್ಟಿದ ಗಂಡು ಹೆಣ್ಣು ಮಕ್ಕಳು ಮೂವತ್ತು ಮೂರು ಮಂದಿ. 16 ೧೬ ಗಾದನ ಮಕ್ಕಳು: ಚಿಪ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ, ಅರೇಲೀ; 17 ೧೭ ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಗಾ, ಇವರ ತಂಗಿಯಾದ ಸೆರಹ; ಬೆರೀಗನ ಮಕ್ಕಳಾದ ಹೆಬೆರ್, ಮಲ್ಕೀಯೇಲ್. 18 ೧೮ ಇವರೆಲ್ಲರು ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಸಂತತಿಯವರು. ಈಕೆಯಿಂದ ಯಾಕೋಬನಿಗಾದ ಮಕ್ಕಳೂ ಮೊಮ್ಮಕ್ಕಳೂ ಹದಿನಾರು ಮಂದಿ. 19 ೧೯ ಯಾಕೋಬನ ಹೆಂಡತಿಯಾದ ರಾಹೇಲಳ ಮಕ್ಕಳು ಯೋಸೇಫ್, ಬೆನ್ಯಾಮೀನ್. 20 ೨೦ ಐಗುಪ್ತ ದೇಶದಲ್ಲಿ ಯೋಸೇಫನಿಗೆ ಓನ್ ಪಟ್ಟಣದ ಪುರೋಹಿತನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದವರು ಮನಸ್ಸೆ ಮತ್ತು ಎಫ್ರಾಯೀಮ್. 21 ೨೧ ಬೆನ್ಯಾಮೀನನ ಮಕ್ಕಳು: ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್, ಆರ್ದ್. 22 ೨೨ ಈ ಹದಿನಾಲ್ಕು ಮಂದಿಯು ರಾಹೇಲಳ ಮೂಲಕ ಯಾಕೋಬನಿಂದಾದ ಸಂತತಿಯವರು. 23 ೨೩ ದಾನನ ಮಗನು: ಹುಶೀಮ್. 24 ೨೪ ನಫ್ತಾಲಿಯ ಮಕ್ಕಳು: ಯಹೇಲ್, ಗೂನೀ, ಯೇಚೆರ್, ಶಿಲ್ಲೇಮ್. 25 ೨೫ ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟ ಬಿಲ್ಹಳ ಸಂತತಿಯವರು. ಈಕೆಯಿಂದ ಯಾಕೋಬನಿಗಾದ ಮಕ್ಕಳೂ ಮೊಮ್ಮಕ್ಕಳೂ ಏಳು ಮಂದಿ. 26 ೨೬ ಯಾಕೋಬನ ಸೊಸೆಯರಲ್ಲದೆ ಯಾಕೋಬನಿಂದಲೇ ಹುಟ್ಟಿ ಅವನೊಂದಿಗೆ ಐಗುಪ್ತ ದೇಶಕ್ಕೆ ಹೋದವರು ಒಟ್ಟು ಅರವತ್ತಾರು ಮಂದಿ. 27 ೨೭ ಅವರಲ್ಲದೆ ಐಗುಪ್ತ ದೇಶದಲ್ಲಿ ಯೋಸೇಫನಿಗೆ ಹುಟ್ಟಿದವರು ಇಬ್ಬರು. ಐಗುಪ್ತ ದೇಶಕ್ಕೆ ಹೋದ ಯಾಕೋಬನ ಕುಟುಂಬದವರೆಲ್ಲರು ಒಟ್ಟು ಎಪ್ಪತ್ತು ಮಂದಿ. 28 ೨೮ ಯಾಕೋಬನು ಗೋಷೆನ್ ಸೀಮೆಯ ದಾರಿಯನ್ನು ವಿಚಾರಿಸುವುದಕ್ಕೆ ಯೆಹೂದನನ್ನು ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಸೀಮೆಗೆ ಬಂದಾಗ, 29 ೨೯ ಯೋಸೇಫನು ತನ್ನ ರಥವನ್ನು ಸಿದ್ಧಪಡಿಸಿಕೊಂಡು ತನ್ನ ತಂದೆಯಾದ ಇಸ್ರಾಯೇಲನನ್ನು ಎದುರುಗೊಳ್ಳುವುದಕ್ಕೋಸ್ಕರ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ, ತಂದೆಯನ್ನು ಬಹಳ ಹೊತ್ತಿನ ವರೆಗೆ ಅಪ್ಪಿಕೊಂಡು ಅತ್ತನು. 30 ೩೦ ಇಸ್ರಾಯೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ನೋಡಿ, ನೀನು ಇನ್ನೂ ಜೀವದಿಂದಿರುವುದನ್ನು ಕಂಡು ಸಂತೃಪ್ತನಾಗಿ ಸಾಯುವೆನು” ಎಂದು ಹೇಳಿದನು. 31 ೩೧ ಯೋಸೇಫನು ತನ್ನ ಅಣ್ಣತಮ್ಮಂದಿರನ್ನೂ, ತಂದೆಯ ಮನೆಯವರೆಲ್ಲರನ್ನು ಕುರಿತು “ನಾನು ಹೋಗಿ ಫರೋಹನ ಸನ್ನಿಧಾನದಲ್ಲಿ ನೀವು ಬಂದ ವರ್ತಮಾನವನ್ನು ತಿಳಿಸಿ, ಕಾನಾನ್‌ ದೇಶದಲ್ಲಿದ್ದ ನನ್ನ ಅಣ್ಣತಮ್ಮಂದಿರೂ, ತನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ; 32 ೩೨ ಅವರು ಕುರಿಕಾಯುವವರು, ಪಶುಪಾಲನೆ ಮಾಡುವುದು ಅವರ ಕಸುಬು; ಅವರು ತಮ್ಮ ಕುರಿದನಗಳನ್ನೂ ತಮಗಿರುವ ಸರ್ವಸ್ವವನ್ನೂ ತಂದಿದ್ದಾರೆ” ಎಂದು ಹೇಳುತ್ತೇನೆ. 33 ೩೩ ಫರೋಹನು ನಿಮ್ಮನ್ನು ಕರೆಯಿಸಿ, “ನಿಮ್ಮ ಕಸುಬು ಏನು?” ಎಂದು ಕೇಳಿದರೆ, 34 ೩೪ “ನೀವು ಚಿಕ್ಕಂದಿನಿಂದ ಇದುವರೆಗೂ ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಪದ್ಧತಿಯ ಮೇರೆಗೆ ಪಶುಪಾಲಕರು ಎಂದು ಹೇಳಿರಿ. ಪಶುಪಾಲಕರು ಐಗುಪ್ತರಿಗೆ ಅಸಹ್ಯವಾಗಿರುವುದರಿಂದ, ಗೋಷೆನ್ ಸೀಮೆಯನ್ನು ನಿಮ್ಮ ನಿವಾಸಕ್ಕಾಗಿ ನೇಮಿಸುವನು” ಎಂದನು.

< ಆದಿಕಾಂಡ 46 >