< ಆದಿಕಾಂಡ 41 >

1 ಎರಡು ವರ್ಷಗಳು ಕಳೆದ ಮೇಲೆ ಫರೋಹನಿಗೆ ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು. 2 ಅಷ್ಟರಲ್ಲಿ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಆ ನೈಲ್ ನದಿಯೊಳಗಿಂದ ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು. 3 ಅವುಗಳ ಹಿಂದೆ ಅವಲಕ್ಷಣವಾದ ಹಾಗೂ ಬಡಕಲಾದ ಏಳು ಆಕಳುಗಳು ನೈಲ್ ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಆಕಳುಗಳ ಹತ್ತಿರ ನದಿಯ ತೀರದಲ್ಲಿ ನಿಂತವು. 4 ಅವಲಕ್ಷಣವಾದ ಈ ಬಡ ಏಳು ಆಕಳುಗಳು ಲಕ್ಷಣವಾದ ಆ ಕೊಬ್ಬಿದ ಆಕಳುಗಳನ್ನು ತಿಂದು ಬಿಟ್ಟವು. ಆಗ ಫರೋಹನಿಗೆ ಎಚ್ಚರವಾಯಿತು. 5 ಅವನು ಮತ್ತೆ ನಿದ್ರೆಮಾಡಿದಾಗ ಮತ್ತೊಂದು ಕನಸು ಬಿತ್ತು. ಅದೇನೆಂದರೆ, ಒಳ್ಳೆಯ ಪುಷ್ಟಿಯುಳ್ಳ ಏಳು ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು. 6 ಅವುಗಳ ಹಿಂದೆ ಮೂಡಣ ಗಾಳಿಯಿಂದ ಬತ್ತಿ ಒಣಗಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು. 7 ಆ ಬತ್ತಿ ಹೋಗಿದ್ದ ಈ ತೆನೆಗಳು ಆ ಏಳು ಪುಷ್ಟಿಯುಳ್ಳ ತೆನೆಗಳನ್ನು ನುಂಗಿಬಿಟ್ಟವು. ಆಗ ಫರೋಹನು ಎಚ್ಚೆತ್ತು, ಅದನ್ನು ಕನಸೆಂದು ತಿಳಿದುಕೊಂಡನು. 8 ಬೆಳಿಗ್ಗೆ ಫರೋಹನು ಮನದಲ್ಲಿ ಕಳವಳಗೊಂಡು, ಐಗುಪ್ತದೇಶದಲ್ಲಿದ್ದ ಎಲ್ಲಾ ಜೋಯಿಸರನ್ನೂ, ವಿದ್ವಾಂಸರನ್ನೂ ಬರುವಂತೆ ಹೇಳಿಕಳುಹಿಸಿದನು. ಅವರಿಗೆ ತನ್ನ ಕನಸನ್ನು ತಿಳಿಸಲಾಗಿ, ಅದರ ಅರ್ಥವನ್ನು ಅವನಿಗೆ ಹೇಳ ಬಲ್ಲವರು ಅವರಲ್ಲಿ ಒಬ್ಬನೂ ಸಿಕ್ಕಲಿಲ್ಲ. 9 ಹೀಗಿರುವಾಗ ಪಾನದಾಯಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಅರಸನೇ, ಈ ಹೊತ್ತು ನನ್ನ ತಪ್ಪುಗಳನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ. 10 ೧೦ ಫರೋಹನು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು ನನ್ನನ್ನೂ, ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನನ್ನೂ ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿ ಇಟ್ಟಾಗ, 11 ೧೧ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು. 12 ೧೨ ಅಲ್ಲಿ ನಮ್ಮ ಸಂಗಡ ಇಬ್ರಿಯನಾದ ಒಬ್ಬ ಪ್ರಾಯಸ್ಥನಿದ್ದನು. ಅವನು ಮೈಗಾವಲಿನವರ ಅಧಿಪತಿಯ ಸೇವಕನು. ನಾವು ಅವನಿಗೆ ನಮ್ಮ ಕನಸುಗಳನ್ನು ತಿಳಿಸಿದಾಗ ಅವನು ಅವುಗಳ ಅರ್ಥವನ್ನು ನಮಗೆ ತಿಳಿಸಿದನು. ನಮ್ಮ ನಮ್ಮ ಕನಸಿನ ಪ್ರಕಾರ ಅರ್ಥವನ್ನು ಹೇಳಿದನು. 13 ೧೩ ಮಾತ್ರವಲ್ಲದೆ ಅವನು ನಮಗೆ ಹೇಳಿದ ಅರ್ಥಕ್ಕೆ ಸರಿಯಾಗಿ ಕಾರ್ಯವು ನಡೆಯಿತು. ಅವನು ಹೇಳಿದಂತೆಯೇ ನನ್ನ ಉದ್ಯೋಗವು ಪುನಃ ನನಗೆ ದೊರಕಿತು. ಅಡಿಗೆ ಭಟ್ಟರ ಮುಖ್ಯಸ್ಥನೋ ಗಲ್ಲಿಗೆ ಹಾಕಲ್ಪಟ್ಟನು” ಎಂದನು. 14 ೧೪ ಫರೋಹನು ಇದನ್ನು ಕೇಳಿದಾಗ ಯೋಸೇಫನನ್ನು ಕರೆದುಕೊಂಡು ಬರಲು ಹೇಳಿಕಳುಹಿಸಿದನು. ಯೋಸೇಫನನು ಬೇಗನೆ ಸೆರೆಮನೆಯಿಂದ ಬಿಡುಗಡೆ ಮಾಡಿದರು. ಆತನು ಕ್ಷೌರಮಾಡಿಸಿಕೊಂಡು ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಗೆ ಬಂದನು. 15 ೧೫ ಆಗ ಫರೋಹನು ಯೋಸೇಫನಿಗೆ, “ನಾನು ಒಂದು ಕನಸನ್ನು ಕಂಡಿದ್ದೇನೆ. ಅದರ ಅರ್ಥವನ್ನು ಹೇಳ ಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳ ಬಲ್ಲವನೆಂಬ ವರ್ತಮಾನವನ್ನು ಕೇಳಿದ್ದೇನೆ” ಎಂದು ಹೇಳಿದನು. 16 ೧೬ ಅದಕ್ಕೆ ಯೋಸೇಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ. ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನೂ ಕೊಡುವನು” ಎಂದು ಹೇಳಿದನು. 17 ೧೭ ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನೊಳಗೆ ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು.” 18 ೧೮ ನೈಲ್ ನದಿಯೊಳಗಿಂದ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು. 19 ೧೯ ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬಡಕಲಾದ ಆಕಳುಗಳು ಏರಿ ಬಂದವು. ಇಂಥ ಆಕಳುಗಳನ್ನು ನಾನು ಐಗುಪ್ತದೇಶದಲ್ಲಿ ಎಲ್ಲಿಯೂ ನೋಡಿರಲಿಲ್ಲ. 20 ೨೦ ಅದಲ್ಲದೆ ಅವಲಕ್ಷಣವಾದ ಆ ಬಡ ಆಕಳುಗಳು ಮೊದಲು ಕಾಣಿಸಿದ ಆ ಏಳು ಕೊಬ್ಬಿದ ಆಕಳುಗಳನ್ನು ತಿಂದು ಬಿಟ್ಟವು. 21 ೨೧ ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಿಬರಲಿಲ್ಲ. ಅವು ಮೊದಲಿದ್ದಂತೆ ಬಡವಾಗಿಯೇ ಇದ್ದವು. ಆಗ ನನಗೆ ಎಚ್ಚರವಾಯಿತು. 22 ೨೨ “ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಏಳು ಒಳ್ಳೆ ಪುಷ್ಟಿಯುಳ್ಳ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿ ಬಂದವು. 23 ೨೩ ಅವುಗಳ ಹಿಂದೆ ಮೂಡಣ ಗಾಳಿಯಿಂದ ಬತ್ತಿ ಒಣಗಿ ಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು. 24 ೨೪ ಬತ್ತಿ ಹೋಗಿದ್ದ ತೆನೆಗಳು ಆ ಏಳು ಒಳ್ಳೆ ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆನು. ಆದರೆ ಅವುಗಳ ಅರ್ಥವನ್ನು ವಿವರಿಸಿ ಹೇಳುವುದಕ್ಕೆ ಯಾರಿಂದಲೂ ಆಗಲಿಲ್ಲ” ಎಂದನು. 25 ೨೫ ಯೋಸೇಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳು ಒಂದೇಯಾಗಿದೆ. ದೇವರು ತಾನು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾನೆ. 26 ೨೬ ಆ ಏಳು ಒಳ್ಳೆ ಆಕಳುಗಳು ಏಳು ವರ್ಷಗಳು ಆ ಏಳು ಒಳ್ಳೆ ತೆನೆಗಳು ಏಳು ವರ್ಷಗಳು. ಎರಡು ಕನಸುಗಳ ಅರ್ಥ ಒಂದೇ. 27 ೨೭ ಒಳ್ಳೆ ಆಕಳುಗಳ ಹಿಂದೆ ಬಂದ ಅವಲಕ್ಷಣವಾದ ಬಡ ಆಕಳುಗಳೂ ಮೂಡಣ ಗಾಳಿಯಿಂದ ಬತ್ತಿ ಹೋಗಿದ್ದ ಆ ಏಳು ತೆನೆಗಳೂ ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ. 28 ೨೮ ದೇವರು ತಾನು ಮಾಡಬೇಕೆಂದಿರುವುದನ್ನು ಫರೋಹನಿಗೆ ತಿಳಿಸಿದ್ದಾನೆ ಎಂಬುದಾಗಿ ತಿಳಿಸಿದನು. 29 ೨೯ ಐಗುಪ್ತ ದೇಶದಲ್ಲೆಲ್ಲಾ ಬಹು ವಿಶೇಷವಾದ ಏಳು ಸುಭಿಕ್ಷ ವರ್ಷಗಳೂ ಬರುವವು. 30 ೩೦ ಅವುಗಳ ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವವು. ಆಗ ಐಗುಪ್ತದವರು ಮೊದಲಿದ್ದ ಸುಭಿಕ್ಷವನ್ನು ಮರೆತುಬಿಡುವರು. ಆ ಬರದಿಂದ ದೇಶವು ಹಾಳಾಗಿ ಹೋಗುವುದು. 31 ೩೧ ಮುಂದೆ ಬರುವ ಕ್ಷಾಮವು ಅತ್ಯಂತ ಘೋರವಾಗಿರುವುದರಿಂದ ಮೊದಲಿದ್ದ ಸಮೃದ್ಧಿಯ ಗುರುತೇ ಕಾಣಿಸದೆ ಹೋಗುವುದು. 32 ೩೨ ಫರೋಹನಿಗೆ ಕನಸು ಎರಡು ರೀತಿಯಾಗಿ ಬಿದ್ದಿದ್ದರಿಂದ ದೇವರು ಈ ಕಾರ್ಯವನ್ನು ನಿಶ್ಚಯಿಸಿ ಇದನ್ನು ಬೇಗ ಮಾಡುವನು ಎಂಬುದಾಗಿ ತಿಳಿದುಕೊಳ್ಳಬೇಕು. 33 ೩೩ “ಆದುದರಿಂದ ಫರೋಹನು ವಿವೇಕಿಯೂ, ಬುದ್ಧಿವಂತನೂ ಆಗಿರುವ ಪುರುಷನನ್ನು ಆರಿಸಿಕೊಂಡು ಅವನನ್ನು ಐಗುಪ್ತ ದೇಶಕ್ಕೆ ಅಧಿಕಾರಿಯಾಗಿ ನೇಮಿಸಬೇಕು, ಎಂದು ಹೇಳಿದನು. 34 ೩೪ ಫರೋಹನು ಐಗುಪ್ತ ದೇಶದ ಎಲ್ಲಾ ಭಾಗಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿ ಅವರ ಕೈಯಿಂದ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯೊಳಗೆ ಐದರಲ್ಲಿ ಒಂದು ಪಾಲನ್ನು ಕಂದಾಯವಾಗಿ ಎತ್ತಿಸಬೇಕು. 35 ೩೫ ಅವರು ಮುಂದೆ ಬರುವ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು, ದವಸಧಾನ್ಯಗಳನ್ನೂ ಶೇಖರಿಸಿ ಫರೋಹನ ವಶದೊಳಗೆ ಪಟ್ಟಣಗಳಲ್ಲಿಟ್ಟು ಕಾಯಲಿ. 36 ೩೬ ಆ ಆಹಾರ ಪದಾರ್ಥಗಳನ್ನು ಶೇಖರಿಸಿಕೊಳ್ಳುವುದರಿಂದ ಐಗುಪ್ತ ದೇಶದಲ್ಲಿ ಉಂಟಾಗುವ ಏಳು ವರ್ಷಗಳ ಬರಗಾಲದಲ್ಲಿ ಜನರು ಸಾಯುವುದಿಲ್ಲ” ಎಂದು ಹೇಳಿದನು. 37 ೩೭ ಆ ಮಾತು ಫರೋಹನಿಗೂ ಅವನ ಸೇವಕರಿಗೂ ಒಳ್ಳೇದಾಗಿ ತೋರಿತು. 38 ೩೮ ಫರೋಹನು ತನ್ನ ಸೇವಕರಿಗೆ, “ಇವನಲ್ಲಿ ದೇವರ ಆತ್ಮ ಉಂಟಲ್ಲಾ. ಇಂಥ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೋ?” ಎಂದನು. 39 ೩೯ ಫರೋಹನು ಯೋಸೇಫನಿಗೆ, “ದೇವರು ಇದನ್ನೆಲ್ಲಾ ನಿನಗೆ ತಿಳಿಸಿರುವುದರಿಂದ ನಿನಗೆ ಸಮಾನನಾದ ಬುದ್ಧಿ, ವಿವೇಕವುಳ್ಳ ಪುರುಷನು ಯಾರೂ ಇಲ್ಲ. 40 ೪೦ ನೀನೇ ಅರಮನೆಯಲ್ಲಿ ಸರ್ವಾಧಿಕಾರಿಯಾಗಿರಬೇಕು. ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರೂ ನಡೆದುಕೊಳ್ಳಬೇಕು. ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು” ಎಂದು ಹೇಳಿದನು. 41 ೪೧ ಫರೋಹನು ಯೋಸೇಫನಿಗೆ, “ನೋಡು ಐಗುಪ್ತ ದೇಶದ ಮೇಲೆಲ್ಲಾ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸಿದ್ದೇನೆ” ಎಂದು ಹೇಳಿ, 42 ೪೨ ಫರೋಹನು ತನ್ನ ಕೈಯಿಂದ ಉಂಗುರವನ್ನು ತೆಗೆದು ಯೋಸೇಫನ ಬೆರಳಿಗೆ ತೊಡಿಸಿ ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರವನ್ನು ಹಾಕಿದನು. 43 ೪೩ ತನಗಿದ್ದ ಎರಡನೇ ರಥದಲ್ಲಿ ಅವನನ್ನು ಕುಳ್ಳಿರಿಸಿ, “ಅವನ ಮುಂದೆ ಅಡ್ಡ ಬೀಳಿರಿ” ಎಂದು ಪ್ರಕಟಣೆ ಹೊರಡಿಸಿ ಅವನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಇಟ್ಟನು. 44 ೪೪ ಅಲ್ಲದೆ ಫರೋಹನು ಯೋಸೇಫನಿಗೆ ಹೇಳಿದ್ದೇನೆಂದರೆ, “ನಾನು ಫರೋಹನು. ನಿನ್ನ ಅಪ್ಪಣೆಯಿಲ್ಲದೆ ಐಗುಪ್ತ ದೇಶದಲ್ಲೆಲ್ಲಾ ಒಬ್ಬನೂ ಕೈಯನ್ನಾಗಲಿ, ಕಾಲನ್ನಾಗಲಿ ಕದಲಿಸಬಾರದು” ಎಂದು ಹೇಳಿದನು. 45 ೪೫ ಇದಲ್ಲದೆ ಫರೋಹನು ಯೋಸೇಫನಿಗೆ “ಸಾಫ್ನತ್ಪನ್ನೇಹ” ಎಂದು ಹೆಸರಿಟ್ಟನು. ತರುವಾಯ ಓನನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ಯೋಸೇಫನು ಐಗುಪ್ತದೇಶದ ಮೇಲೆ ಅಧಿಕಾರಿಯಾಗಿ ದೇಶದಲ್ಲೆಲ್ಲಾ ಸಂಚರಿಸಿದನು. 46 ೪೬ ಯೋಸೇಫನು ಐಗುಪ್ತ ದೇಶದ ಅರಸನಾದ ಫರೋಹನ ಸನ್ನಿಧಿಯಲ್ಲಿ ನಿಂತಾಗ ಮೂವತ್ತು ವರ್ಷದವನಾಗಿದ್ದನು. ಅವನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶದಲ್ಲೆಲ್ಲಾ ಸಂಚಾರಮಾಡಿದನು. 47 ೪೭ ಸುಭಿಕ್ಷವಾದ ಏಳು ವರ್ಷಗಳಲ್ಲಿ ಭೂಮಿಯು ಹೇರಳವಾಗಿ ಫಲಕೊಟ್ಟಿತು. 48 ೪೮ ಐಗುಪ್ತದೇಶದಲ್ಲಿ ಸುಭಿಕ್ಷವಾದ ಆ ಏಳು ವರ್ಷಗಳ ಬೆಳೆಯನ್ನು ಯೋಸೇಫನು ಕೂಡಿಸಿ ಪಟ್ಟಣಗಳಲ್ಲಿ ಶೇಖರಿಸಿ ಇಡುವ ವ್ಯವಸ್ಥೆಮಾಡಿದನು. ಒಂದೊಂದು ಪಟ್ಟಣದ ಸುತ್ತಲೂ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲಿಯೇ ಶೇಖರಿಸಿದ್ದನು. 49 ೪೯ ಯೋಸೇಫನು ದವಸಧಾನ್ಯವನ್ನು ಸಮುದ್ರ ತೀರದ ಮರಳಿನಂತೆ ರಾಶಿರಾಶಿಯಾಗಿ ಶೇಖರಿಸಿ ಲೆಕ್ಕ ಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕ ಮಾಡುವುದಕ್ಕೆ ಆಗದೇ ಹೋಯಿತು. 50 ೫೦ ಬರಗಾಲ ಬರುವುದಕ್ಕಿಂತ ಮೊದಲು ಯೋಸೇಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಇವರು ಓನ್ ಪಟ್ಟಣದ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದರು. 51 ೫೧ ಚೊಚ್ಚಲು ಮಗನು ಹುಟ್ಟಿದಾಗ ಯೋಸೇಫನು, “ನಾನು ನನ್ನ ಎಲ್ಲಾ ಕಷ್ಟವನ್ನು, ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದನು” ಎಂದು ಹೇಳಿ ಅವನಿಗೆ “ಮನಸ್ಸೆ” ಎಂದು ಹೆಸರಿಟ್ಟನು. 52 ೫೨ ಎರಡನೆಯ ಮಗನು ಹುಟ್ಟಿದಾಗ, “ನನಗೆ ಸಂಕಟ ಬಂದ ದೇಶದಲ್ಲೇ ದೇವರು ಅಭಿವೃದ್ಧಿಯನ್ನು ದಯಪಾಲಿಸಿದ್ದಾನೆ” ಎಂದು ಹೇಳಿ ಆ ಮಗನಿಗೆ “ಎಫ್ರಾಯೀಮ್” ಎಂದು ಹೆಸರಿಟ್ಟನು. 53 ೫೩ ಐಗುಪ್ತ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ 54 ೫೪ ಯೋಸೇಫನು ಹೇಳಿದ ಪ್ರಕಾರ ಕ್ಷಾಮದ ಏಳು ವರ್ಷಗಳು ಪ್ರಾರಂಭವಾಯಿತು. ಬರವು ಸುತ್ತಲಿರುವ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು. ಐಗುಪ್ತ ದೇಶದಲ್ಲಿ ಮಾತ್ರ ಆಹಾರವಿತ್ತು. 55 ೫೫ ಐಗುಪ್ತ ದೇಶದಲ್ಲಿ ಬರ ಬಂದಾಗ ಪ್ರಜೆಗಳು ಆಹಾರ ಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಅವನು ಅವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ಹೇಳಿದಂತೆ ಮಾಡಿರಿ” ಎಂದು ಹೇಳಿದನು. 56 ೫೬ ಬರವು ಭೂಮಿಯ ಮೇಲೆಲ್ಲಾ ಹರಡಿಕೊಂಡಿದಾಗ ಯೋಸೇಫನು ಕಣಜಗಳನ್ನೆಲ್ಲಾ ತೆಗೆದು ಐಗುಪ್ತರಿಗೆ ಧಾನ್ಯವನ್ನು ಮಾರಿದನು. ಐಗುಪ್ತ ದೇಶದಲ್ಲಿ ಬರವು ಬಹುಘೋರವಾಗಿತ್ತು. 57 ೫೭ ಇದಲ್ಲದೆ ಭೂಮಿಯಲ್ಲೆಲ್ಲಾ ಬರವು ಬಹುಘೋರವಾಗಿದುದರಿಂದ ಎಲ್ಲಾ ದೇಶದವರೂ ಧಾನ್ಯವನ್ನು ಕೊಂಡುಕೊಳ್ಳುವುದಕ್ಕಾಗಿ ಐಗುಪ್ತಕ್ಕೆ ಯೋಸೇಫನ ಬಳಿಗೆ ಬಂದರು.

< ಆದಿಕಾಂಡ 41 >