< ಗಲಾತ್ಯದವರಿಗೆ ಬರೆದ ಪತ್ರಿಕೆ 2 >

1 ಹದಿನಾಲ್ಕು ವರ್ಷಗಳ ನಂತರ ನಾನು ಬಾರ್ನಬನ ಜೊತೆಯಲ್ಲಿ ತೀತನನ್ನು ಸಹ ಕರೆದುಕೊಂಡು, ಮತ್ತೊಮ್ಮೆ ಯೆರೂಸಲೇಮಿಗೆ ಹೋದೆನು. 2 ದೈವಪ್ರೇರಣೆಗೆ ಅನುಸಾರವಾಗಿ ಹೋಗಿ, ಅನ್ಯಜನರಲ್ಲಿ ನಾನು ಸಾರುವ ಸುವಾರ್ತೆಯು ಏನೆಂಬುದನ್ನು ಅಲ್ಲಿದ್ದ ಗಣ್ಯರಿಗೆ ಪ್ರತ್ಯೇಕವಾಗಿ ತಿಳಿಸಿದೆನು. ಏಕೆಂದರೆ ನಾನು ಸುವಾರ್ತೆಗಾಗಿ ಪಟ್ಟ ಶ್ರಮವಾಗಲಿ, ಈಗ ಪಡುತ್ತಿರುವ ಶ್ರಮವಾಗಲಿ ನಿಷ್ಫಲವಾಗಬಾರದೆಂದು ತಿಳಿಸಿದೆನು. 3 ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಒತ್ತಾಯಮಾಡಲಿಲ್ಲ. 4 ಆದರೆ ರಹಸ್ಯವಾಗಿ ಒಳಗೆ ಬಂದಿದ್ದ ಸುಳ್ಳು ಸಹೋದರರು ನಮ್ಮನ್ನು ಧರ್ಮಶಾಸ್ತ್ರದ ದಾಸತ್ವದಲ್ಲಿ ಸಿಕ್ಕಿಸಬೇಕೆಂದು, ಕ್ರಿಸ್ತ ಯೇಸುವಿನಲ್ಲಿರುವ ನಮ್ಮ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸಲು ಬಂದಿದ್ದರು. 5 ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರ ಅಧೀನಕ್ಕೆ ಒಂದು ಗಳಿಗೆಯೂ ಒಳಪಡಲಿಲ್ಲ. 6 ಆದರೆ ಗಣ್ಯವ್ಯಕ್ತಿಗಳಾಗಿದ್ದವರಿಂದ ನನಗೇನೂ ದೊರೆಯಲಿಲ್ಲ. ಅವರು ಹಿಂದಿನ ಕಾಲದಲ್ಲಿ ಎಂಥವರಾಗಿದ್ದರೋ ನನಗೆ ಲಕ್ಷ್ಯವಿಲ್ಲ. ದೇವರಿಗೆ ಮನುಷ್ಯರನ್ನು ಮೆಚ್ಚಿಸಬೇಕಾಗಿಲ್ಲ. ಗಣ್ಯವ್ಯಕ್ತಿಗಳೆಂದು ಎನಿಸಿಕೊಂಡವರು ನನಗೇನನ್ನೂ ತಿಳಿಸಿಕೊಡಲಿಲ್ಲ. 7 ಆದರೆ ಸುನ್ನತಿಯಾದವರಿಗೆ ಸುವಾರ್ತೆಯನ್ನು ಸಾರುವ ಕೆಲಸವು ಹೇಗೆ ಪೇತ್ರನಿಗೆ ಕೊಡಲ್ಪಟ್ಟಿತೋ, ಹಾಗೆಯೇ ಅನ್ಯಜನರಿಗೆ ಅದನ್ನು ಸಾರುವ ಕಾರ್ಯವನ್ನು ನನಗೆ ಕೊಡಲ್ಪಟ್ಟಿತು. 8 ಸುನ್ನತಿಯಾದವರಲ್ಲಿ ಅಪೊಸ್ತಲತನವನ್ನು ನಡೆಸುವುದಕ್ಕೋಸ್ಕರ ಪೇತ್ರನಿಗೆ ವಹಿಸಿಕೊಟ್ಟಂಥ ದೇವರು, ಸುನ್ನತಿಯಿಲ್ಲದವರಲ್ಲಿ ಅದನ್ನು ನಡೆಸುವುದಕ್ಕಾಗಿ ನನಗೆ ವಹಿಸಿದ್ದನು. 9 ಸಭೆಯ ಸ್ತಂಭಗಳೆಂದು ಕರೆಸಿಕೊಂಡಿರುವ ಯಾಕೋಬ, ಕೇಫ, ಯೋಹಾನರು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳಿದುಕೊಂಡು, ಅನ್ಯೋನ್ಯತೆಯನ್ನು ತೋರಿಸುವುದಕ್ಕಾಗಿ ನನಗೂ ಬಾರ್ನಬನಿಗೂ ಸಹಕಾರ ನೀಡಿ ಬಲಗೈ ಕೊಟ್ಟು, ನೀವು ಅನ್ಯಜನಗಳ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು. 10 ೧೦ ಆದರೆ ನೀವು ನಮ್ಮಲ್ಲಿರುವ ಬಡವರನ್ನು ಮರೆಯಬಾರದೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು, ಹಾಗೆ ಮಾಡುವುದರಲ್ಲಿ ನಾನೂ ಆಸಕ್ತನಾಗಿದ್ದೆನು. 11 ೧೧ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಅವನಲ್ಲಿ ತಪ್ಪು ಕಾಣಿಸಿಕೊಂಡದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ೧೨ ಏಕೆಂದರೆ ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕೆ ಮೊದಲು ಅವನು ಅನ್ಯಜನರೊಂದಿಗೆ ಊಟ ಮಾಡುತ್ತಿದ್ದನು. ಅವರು ಬಂದ ಮೇಲೆ ಸುನ್ನತಿಯವರಾದ ಅವರಿಗೆ ಅವನು ಭಯಪಟ್ಟು, ಅನ್ಯಜನರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಂಡನು. 13 ೧೩ ಇದಲ್ಲದೆ ಉಳಿದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟತನದಿಂದ ವರ್ತಿಸಿದರು. ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು. 14 ೧೪ ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ಸರಿಯಾಗಿ ನಡೆಯುತ್ತಿಲ್ಲವೆಂಬುದನ್ನು ನಾನು ಕಂಡಾಗ ಎಲ್ಲರ ಮುಂದೆ ಕೇಫನಿಗೆ ಹೇಳಿದ್ದೇನಂದರೆ, “ನೀನು ಯೆಹೂದ್ಯನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ಬದುಕಿ, ಅನ್ಯಜನರಿಗೆ, ನೀವು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ಒತ್ತಾಯಪಡಿಸಿ ಹೇಳುವುದಾದರೂ ಹೇಗೆ?” 15 ೧೫ ನಾವಂತೂ ಜನ್ಮತ ಯೆಹೂದ್ಯರು “ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ.” 16 ೧೬ ಯಾವನಾದರೂ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದರಿಂದಲೇ ಹೊರತು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸುವುದರಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲವೆಂಬುದು ನಮಗೆ ತಿಳಿದಿರುವುದರಿಂದ ನಾವು ಸಹ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು. ಏಕೆಂದರೆ ಯಾರೂ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. 17 ೧೭ ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದುವುದಕ್ಕೆ ಪ್ರಯತ್ನಿಸುತ್ತಿರುವಾಗ, ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸಹಾಯಕನಾಗಿರುವನೋ? ಎಂದಿಗೂ ಇಲ್ಲ. 18 ೧೮ ನಾನು ಕೆಡವಿದ್ದನ್ನೇ ತಿರುಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ತೋರಿಸಿಕೊಳ್ಳುತ್ತೇನಲ್ಲಾ. 19 ೧೯ ನಾನಂತೂ ದೇವರಿಗಾಗಿ ಜೀವಿಸುವುದಕ್ಕೋಸ್ಕರ ಧರ್ಮಶಾಸ್ತ್ರದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ. 20 ೨೦ ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು. 21 ೨೧ ನಾನು ದೇವರ ಕೃಪೆಯನ್ನು ತಿರಸ್ಕರಿಸುವುದಿಲ್ಲ. ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಬಹುದಾದರೆ ಕ್ರಿಸ್ತನು ಮರಣಕ್ಕೀಡಾದುದು ನಿರರ್ಥಕವೇ ಸರಿ.

< ಗಲಾತ್ಯದವರಿಗೆ ಬರೆದ ಪತ್ರಿಕೆ 2 >