< ಎಜ್ರನು 5 >

1 ಪ್ರವಾದಿಗಳಾದ ಹಗ್ಗಾಯನೂ ಮತ್ತು ಇದ್ದೋವಿನ ಮಗನಾದ ಜೆಕರ್ಯನೂ ಇಸ್ರಾಯೇಲ್ ದೇವರಿಂದ ಪ್ರೇರಿತರಾಗಿ ಆತನ ಹೆಸರಿನಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ಯೆಹೂದ್ಯರಿಗೆ ದೇವಾಲಯ ಕಟ್ಟಿಸುವ ಬಗ್ಗೆ ಪ್ರವಾದಿಸಿದರು. 2 ಆಗ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರು ಯೆರೂಸಲೇಮಿನ ದೇವಾಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದರು. ದೇವಪ್ರವಾದಿಗಳು ಅವರೊಡನಿದ್ದು ಅವರಿಗೆ ಸಹಾಯಮಾಡುತ್ತಿದ್ದರು. 3 ಆ ಸಮಯದಲ್ಲಿ ಹೊಳೆಯ ಈಚೆಯ ಪ್ರದೇಶಗಳ ದೇಶಾಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ತಮ್ಮ ಜೊತೆಗಾರರೊಂದಿಗೆ ಅವರ ಬಳಿಗೆ ಬಂದು. 4 ಅವರು, “ಈ ಅಸ್ತಿವಾರವನ್ನು ಸರಿಪಡಿಸಿ, ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು?” ಎಂದು ಕೇಳಿದರು ಮತ್ತು ಈ ಕಟ್ಟಡವನ್ನು ಕಟ್ಟಿಸುತ್ತಿರುವವರ ಹೆಸರುಗಳು ಯಾವುವೆಂದು ವಿಚಾರಿಸಿದರು. 5 ಆದರೆ ಯೆಹೂದ್ಯರು ಮತ್ತು ಹಿರಿಯರೊಂದಿಗೆ ದೇವರ ಕೃಪಾಕಟಾಕ್ಷ ಇದ್ದುದರಿಂದ ವಿಚಾರಿಸುವುದಕ್ಕೆ ಬಂದವರು ಅವರಿಗೆ ಅಡ್ಡಿಮಾಡದೆ, ತಾವು ಇದರ ವಿಷಯವಾಗಿ ದಾರ್ಯಾವೆಷನಿಗೆ ವರ್ತಮಾನ ಮುಟ್ಟಿಸಿ, ಉತ್ತರವನ್ನು ಬರೆದು ಕಳುಹಿಸುವೆವೆಂದು ಹೇಳಿ ಹೊರಟು ಹೋದರು. 6 ಹೊಳೆಯ ಈಚೆಯ ಪ್ರದೇಶಗಳ ದೇಶಾಧಿಪತಿಯಾದ ತತ್ತೆನೈಯೂ, ಶೆತರ್ಬೋಜೆನೈಯೂ ಮತ್ತು ಹೊಳೆಯ ಈಚೆಯಲ್ಲಿ ಅವನ ಜೊತೆಗಾರರಾದ ಅಪರ್ಸತ್ಕಾಯರೂ ಅರಸನಾದ ದಾರ್ಯಾವೆಷನಿಗೆ ಕಳುಹಿಸಿದ ಪತ್ರದ ಪ್ರತಿಯು. 7 ಅವರು ಅರಸನಿಗೆ ಕಳುಹಿಸಿದ ಪತ್ರದ ಸಾರಾಂಶವೇನೆಂದರೆ, “ದಾರ್ಯಾವೆಷ್ ರಾಜರಿಗೆ ಹೃತ್ಪೂರ್ವಕ ನಮಸ್ಕಾರಗಳು, ತಮ್ಮ ಕ್ಷೇಮ ಅಪೇಕ್ಷಿಸುತ್ತೇವೆ. 8 ನಾವು ಯೆಹೂದ ಸೀಮೆಗೆ ಹೋಗಿ ಮಹೋನ್ನತನಾದ ದೇವರ ಆಲಯವನ್ನು ನೋಡಿ ಬಂದೆವು ಎಂದು ತಮಗೆ ತಿಳಿಸಲು ಇಚ್ಛಿಸುತ್ತೇನೆ. ಆಲಯವನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಾ, ಗೋಡೆಗಳ ಮೇಲೆ ತೊಲೆಗಳನ್ನಿಡುತ್ತಾ ಇದ್ದಾರೆ. ಈ ಕೆಲಸವು ಜಾಗರೂಕತೆಯಿಂದ, ವಿಶೇಷ ಶ್ರಮದಿಂದ ವೇಗವಾಗಿ ನಡೆಯುತ್ತಿದೆ. 9 “ಅಲ್ಲಿನ ಹಿರಿಯರ ಹತ್ತಿರ, ‘ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು’ ಎಂದು ವಿಚಾರಮಾಡಿದೆವು. 10 ೧೦ ಅವರಲ್ಲಿ ಪ್ರಧಾನರಾದವರು ಇಂಥಿಂಥವರೆಂದು ತಮಗೆ ಬರೆದು ತಿಳಿಸುವುದಕ್ಕೋಸ್ಕರ ಅವರ ಹೆಸರುಗಳನ್ನು ಕೇಳಿದೆವು. 11 ೧೧ ಅವರು ನಮಗೆ, ‘ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರು. ಅನೇಕಾನೇಕ ವರ್ಷಗಳ ಹಿಂದೆ ಕಟ್ಟಿದ್ದ ಆಲಯವನ್ನು ಪುನಃ ಕಟ್ಟುತ್ತಿದ್ದೇವೆ. ಇಸ್ರಾಯೇಲರ ಒಬ್ಬ ಮಹಾರಾಜನು ಅದನ್ನು ಕಟ್ಟಿಸಿದ್ದನು. 12 ೧೨ ಆದರೆ ನಮ್ಮ ಪೂರ್ವಿಕರು ಪರಲೋಕದೇವರನ್ನು ರೇಗಿಸಿದ್ದರಿಂದ ಆತನು ಅವರನ್ನು ಬಾಬಿಲೋನಿನ ಕಸ್ದೀಯ ರಾಜನಾದ ನೆಬೂಕದ್ನೆಚ್ಚರನ ಕೈಗೆ ಒಪ್ಪಿಸಿಕೊಟ್ಟನು. ಅವನು ಈ ಆಲಯವನ್ನು ಹಾಳುಮಾಡಿ ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದನು. 13 ೧೩ ಆದರೆ ಬಾಬಿಲೋನಿನ ಅರಸನಾದ ಕೋರೆಷನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಈ ದೇವಾಲಯವನ್ನು ಪುನಃ ಕಟ್ಟುವುದಕ್ಕೆ ಅಪ್ಪಣೆಕೊಟ್ಟನು. 14 ೧೪ ಅದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ತೆಗೆದುಕೊಂಡುಹೋಗಿ, ಬಾಬಿಲೋನಿನ ದೇವಾಲಯದಲ್ಲಿಟ್ಟಿದ್ದ ಬೆಳ್ಳಿಬಂಗಾರದ ದೇವಸ್ಥಾನ ಪಾತ್ರೆಗಳನ್ನು ಅಲ್ಲಿಂದ ತೆಗಿಸಿ ತಾನು ದೇಶಾಧಿಪತಿಯನ್ನಾಗಿ ನೇಮಿಸಿದ ಶೆಷ್ಬಚ್ಚರನಿಗೆ ಒಪ್ಪಿಸಿದನು. 15 ೧೫ ಅವನು, “ಈ ಸಾಮಾನುಗಳನ್ನು ಯೆರೂಸಲೇಮಿನ ದೇವಾಲಯದಲ್ಲಿ ಇಡುವುದಕ್ಕೋಸ್ಕರ ತೆಗೆದುಕೊಂಡುಹೋಗಿ ಆ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟಿಸು” ಎಂದು ಆಜ್ಞಾಪಿಸಿದನು. 16 ೧೬ ಆಗ ಆ ಶೆಷ್ಬಚ್ಚರನು ಬಂದು ಯೆರೂಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿಸಿದನು. ಅಂದಿನಿಂದ ಇಂದಿನ ವರೆಗೂ ಕಟ್ಟುವ ಕೆಲಸವು ನಡೆಯುತ್ತಿರುತ್ತದೆ. ಇನ್ನೂ ಮುಗಿದಿರುವುದಿಲ್ಲ’ ಎಂಬುದಾಗಿ ಉತ್ತರಕೊಟ್ಟರು. 17 ೧೭ “ಅರಸರಿಗೆ ಸರಿತೋರುವುದಾದರೆ ಯೆರೂಸಲೇಮಿನ ಈ ದೇವಾಲಯವನ್ನು ಪುನಃ ಕಟ್ಟುವುದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬುದರ ವಿಷಯವಾಗಿ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿ ನೋಡಲಿ ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ” ಎಂದು ಉತ್ತರಕೊಟ್ಟನು.

< ಎಜ್ರನು 5 >