< ಎಜ್ರನು 1 >

1 ಪರ್ಷಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪರ್ಷಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದನು. 2 ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ, “ಪರ್ಷಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ. ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. 3 ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ. 4 ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ” ಎಂದು ಪ್ರಕಟಿಸಿದನು. 5 ಆಗ ಯೆಹೂದ ಮತ್ತು ಬೆನ್ಯಾಮೀನ್ ಗೋತ್ರ ಪ್ರಧಾನರಲ್ಲಿಯೂ, ಯಾಜಕರಲ್ಲಿಯೂ ಮತ್ತು ಲೇವಿಯರಲ್ಲಿಯೂ ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯವನ್ನು ಕಟ್ಟುವುದಕ್ಕಾಗಿ ಹೊರಟುಹೋದರು. 6 ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು. 7 ಅಲ್ಲಿಂದ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು. 8 ಅವನು ಅವುಗಳನ್ನು ಖಜಾನೆಯ ಅಧಿಕಾರಿಯಾದ ಮಿತ್ರದಾತನಿಗೆ ಒಪ್ಪಿಸಿದನು. ಇವನು ಅವುಗಳನ್ನು ಯೆಹೂದದ ಪ್ರಭುವಾಗಿರುವ ಶೆಷ್ಬಚ್ಚರನಿಗೆ ಲೆಕ್ಕಮಾಡಿ ಕೊಟ್ಟನು. 9 ಆ ಸಾಮಾನುಗಳ ಲೆಕ್ಕ: ಬಂಗಾರದ ಬೋಗುಣಿಗಳು ಮೂವತ್ತು; ಬೆಳ್ಳಿಯ ಬೋಗುಣಿಗಳು ಒಂದು ಸಾವಿರ; ಕತ್ತಿಗಳು ಇಪ್ಪತ್ತೊಂಭತ್ತು; 10 ೧೦ ಚಿನ್ನದ ಬಟ್ಟಲುಗಳು ಮೂವತ್ತು; ಎರಡನೆಯ ದರ್ಜೆಯ ಬೆಳ್ಳಿಯ ಬಟ್ಟಲುಗಳು ನಾನೂರಹತ್ತು ಮತ್ತು ಇತರ ಪಾತ್ರೆಗಳು ಒಂದು ಸಾವಿರ. 11 ೧೧ ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.

< ಎಜ್ರನು 1 >