< ಯೆಹೆಜ್ಕೇಲನು 42 >

1 ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆದು ತಂದನು. 2 ನೂರು ಮೊಳ ಉದ್ದಕ್ಕೆ ಎದುರಾಗಿರುವ ಉತ್ತರದ ಬಾಗಿಲಿನ ಅಗಲವು ಐವತ್ತು ಮೊಳವಾಗಿತ್ತು. 3 ಒಳಗಿನ ಅಂಗಳಕ್ಕೆ ಸೇರಿದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ, ಹೊರಗಿನ ಅಂಗಳದ ಕಲ್ಲುಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಿದ್ದವು ಅವುಗಳಲ್ಲಿ ಪಡಸಾಲೆಗಳಿದ್ದವು. 4 ಕೋಣೆಗಳ ಒಳಗೆ ಹೋಗಲು, ನೂರು ಮೊಳ ಉದ್ದದ ಮತ್ತು ಹತ್ತು ಮೊಳ ಅಗಲದ ಹಾದಿ ಇತ್ತು. ಕೋಣೆಗಳ ಬಾಗಿಲುಗಳು ಉತ್ತರದಿಕ್ಕಿನ ಕಡೆಗಿದ್ದವು. 5 ಮೇಲಿನ ಕೋಣೆಗಳು, ಮಧ್ಯದ ಮತ್ತು ಕೆಳಗಿನ ಕೋಣೆಗಳಿಗಿಂತ ಚಿಕ್ಕದಾಗಿದ್ದವು. ಏಕೆಂದರೆ ಕಟ್ಟಡದ ಮಧ್ಯದ ಮತ್ತು ಕೆಳಗಿನ ಭಾಗಕ್ಕಿಂತಲೂ ಪಡಸಾಲೆಗಳು ಎತ್ತರದಲ್ಲಿದ್ದವು. 6 ಕೋಣೆಗಳು ಮೂರು ಅಂತಸ್ತಾಗಿದ್ದವು. ಹೊರಗಿನ ಅಂಗಳದ ಕೋಣೆಗಳಿಗೆ ಇದ್ದಂತೆ ಈ ಕೋಣೆಗಳಿಗೆ ಪಡಸಾಲೆಗಳಿರಲಿಲ್ಲ. ಆದುದರಿಂದ ನೆಲದಿಂದ ಎತ್ತರದಲ್ಲಿದ್ದ ಮೇಲಿನ ಕೋಣೆಗಳು ಕೆಳಗಿನ ಮತ್ತು ಮಧ್ಯದ ಕೋಣೆಗಳಿಗಿಂತ ಚಿಕ್ಕದಾಗಿದ್ದವು. 7 ಹೊರಗಿನ ಅಂಗಳದ ಕಡೆಗಿರುವ ಕೋಣೆಗಳ ಸಾಲಿಗೆ ಸಮವಾಗಿ ಹೊರಗೋಡೆಯೊಂದಿತ್ತು. ಅದು ಐವತ್ತು ಮೊಳ ಉದ್ದವಾಗಿ, ಎರಡನೆಯ ಸಾಲಿಗೆ ಎದುರಾಗಿತ್ತು. 8 ಹೊರಗಿನ ಅಂಗಳದ ಕಡೆಗಿರುವ ಕೋಣೆಗಳ ಸಾಲಿನ ಉದ್ದ ಐವತ್ತು ಮೊಳವು, ದೇವಸ್ಥಾನದ ಎದುರಿಗಿರುವ ಕೋಣೆಗಳ ಸಾಲಿನ ಉದ್ದ ನೂರು ಮೊಳವಾಗಿತ್ತು. 9 ಕೆಳಗಿನ ಕೋಣೆಗಳಿಗೆ ಹೋಗಲು, ಅಂಗಳದ ಪೂರ್ವದಿಕ್ಕಿಗೆ ಒಂದು ಮಾರ್ಗವಿತ್ತು. 10 ೧೦ ಇದಲ್ಲದೆ, ಪೂರ್ವಕಡೆಗೆ ಅಂಗಳದ ಪ್ರತ್ಯೇಕ ಸ್ಥಳಕ್ಕೂ ಮತ್ತು ಪೌಳಿಗೋಡೆಯ ಮಧ್ಯದಲ್ಲಿ ಕೋಣೆಗಳಿದ್ದವು. 11 ೧೧ ಇವುಗಳ ಮುಂದೆ ಮಾರ್ಗವಿತ್ತು. ಅವು ಉತ್ತರದ ಕೋಣೆಗಳಂತೆ ಕಾಣಿಸುತ್ತಿದ್ದವು. ಇವುಗಳ ಉದ್ದವೂ ಮತ್ತು ಅಗಲವೂ ಒಂದೇ ಆಗಿತ್ತು. ಇವುಗಳ ರಚನಾಕ್ರಮ, ನಿರ್ಗಮನದ ಸ್ಥಾನಗಳೆಲ್ಲವೂ ದಕ್ಷಿಣದ ಕೋಣೆಗಳ ಹಾಗೆಯೇ ಇದ್ದವು. 12 ೧೨ ದಕ್ಷಿಣ ಕಡೆಗಿದ್ದ ಕೋಣೆಗಳ ಬಾಗಿಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ, ಪೂರ್ವದ ಕಡೆಯ ಗೋಡೆಗೆ ಸರಿಯಾದ ದಾರಿಯ ಕೊನೆಯಲ್ಲಿ ಒಂದು ಬಾಗಿಲಿತ್ತು. 13 ೧೩ ಆಗ ಅವನು ನನಗೆ, “ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರ ಮತ್ತು ದಕ್ಷಿಣ ಕೋಣೆಗಳು ಪರಿಶುದ್ಧವಾಗಿವೆ. ಅಲ್ಲಿ ಯೆಹೋವನ ಸನ್ನಿಧಿ ಸೇವಕರಾದ ಯಾಜಕರು ಮಹಾಪರಿಶುದ್ಧ ಪದಾರ್ಥಗಳನ್ನು ತಿನ್ನುವರು ಮತ್ತು ಧಾನ್ಯನೈವೇದ್ಯ, ದೋಷಪರಿಹಾರಕ ಯಜ್ಞದ್ರವ್ಯ, ಪ್ರಾಯಶ್ಚಿತ್ತ ಯಜ್ಞದ್ರವ್ಯ ಎಂಬ ಮಹಾಪರಿಶುದ್ಧ ಪದಾರ್ಥಗಳನ್ನು ಅದರಲ್ಲಿ ಇಡುವರು. ಆ ಸ್ಥಳವು ಪರಿಶುದ್ಧವಾದದ್ದು. 14 ೧೪ ಯಾಜಕರು ಪರಿಶುದ್ಧ ಸ್ಥಳವನ್ನು ಪ್ರವೇಶಿಸಿದ ಮೇಲೆ, ಅದನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟುಕೊಳ್ಳಬೇಕು, ಅವು ಪರಿಶುದ್ಧವೇ. ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಸಾಮಾನ್ಯ ಜನರ ಅಂಗಳಕ್ಕೆ ಬರಬೇಕು” ಎಂದನು. 15 ೧೫ ಆ ಪುರುಷನು ಒಳಗಿನ ಆಲಯವನ್ನು ಅಳತೆ ಮಾಡಿದ ನಂತರ ನನ್ನನ್ನು ಪೂರ್ವದ ಹೆಬ್ಬಾಗಿಲಿನ ಮಾರ್ಗವಾಗಿ ಹೊರಗೆ ಕರೆದುಕೊಂಡು ಬಂದು, ಆಲಯದ ಸುತ್ತಲೂ ಅಳತೆ ಮಾಡಿದನು. 16 ೧೬ ಪೂರ್ವದಿಕ್ಕಿನ ಉದ್ದಕ್ಕೂ ಅಳತೆ ಕೋಲಿನಿಂದ ಐನೂರು ಕೋಲು ಅಳೆದನು. 17 ೧೭ ಉತ್ತರದಿಕ್ಕಿನ ಉದ್ದಕ್ಕೂ ಅಳತೆ ಕೋಲಿನಿಂದ ಐನೂರು ಕೋಲು ಅಳೆದನು. 18 ೧೮ ದಕ್ಷಿಣದಿಕ್ಕಿನ ಉದ್ದಕ್ಕೂ ಅಳತೆ ಕೋಲಿನಿಂದ ಐನೂರು ಕೋಲು ಅಳೆದನು. 19 ೧೯ ಪಶ್ಚಿಮಕ್ಕೆ, ಗೋಡೆಯ ಕಡೆಗೆ ತಿರುಗಿಕೊಂಡು ಅಳತೆ ಕೋಲಿನಿಂದ ಐನೂರು ಕೋಲು ಅಳೆದನು. 20 ೨೦ ಆಲಯವನ್ನು ನಾಲ್ಕು ಕಡೆಗಳಲ್ಲಿಯೂ ಅಳೆದನು. ಪವಿತ್ರವಾದ ಮತ್ತು ಅಪವಿತ್ರವಾದ ಪ್ರದೇಶಗಳನ್ನು ವಿಂಗಡಿಸುವುದಕ್ಕೆ ಐನೂರು ಕೋಲು ಉದ್ದವಾದ ಮತ್ತು ಐನೂರು ಕೋಲು ಅಗಲವಾದ ಗೋಡೆ ಇತ್ತು.

< ಯೆಹೆಜ್ಕೇಲನು 42 >