< ಯೆಹೆಜ್ಕೇಲನು 29 >
1 ೧ ಹತ್ತನೆಯ ವರ್ಷದ, ಹತ್ತನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 ೨ “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನ ವಿಷಯದಲ್ಲಿಯೂ, ಐಗುಪ್ತ್ಯರೆಲ್ಲರ ವಿಷಯದಲ್ಲಿಯೂ ಹೀಗೆ ಪ್ರವಾದಿಸು.
3 ೩ “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದ ಅರಸನಾದ ಫರೋಹನೇ, ನಿನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು, ‘ಈ ನದಿ ನನ್ನದೇ, ನನಗಾಗಿಯೇ ಅದನ್ನು ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಳ್ಳುವ ದೊಡ್ಡ ಮೊಸಳೆಯೇ, ಇಗೋ, ನಾನು ನಿನ್ನ ವಿರುದ್ಧವಾಗಿದ್ದೇನೆ.
4 ೪ “ನಾನು ನಿನ್ನ ದವಡೆಗಳಿಗೆ ಗಾಳ ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ, ಆ ಮೀನುಗಳ ಸಹಿತ ನಿನ್ನನ್ನು ನೈಲ್ ನದಿಯ ಮಧ್ಯದೊಳಗಿಂದ ಹೊರಗೆ ಎಳೆದು ಹಾಕುವೆನು.
5 ೫ ನಿನ್ನನ್ನೂ, ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಅರಣ್ಯದ ಪಾಲು ಮಾಡುವೆನು; ನೀನು ಬಯಲುಗಳ ಮೇಲೆ ಬಿದ್ದಿರುವಿ; ನಿನ್ನನ್ನು ಯಾರೂ ಹೂಣಿಡುವುದೂ ಇಲ್ಲ, ಸೇರಿಸುವುದೂ ಇಲ್ಲ; ನಾನು ನಿನ್ನನ್ನು ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.
6 ೬ ಆಗ ಐಗುಪ್ತದ ಸಕಲ ನಿವಾಸಿಗಳು ನಾನೇ ಯೆಹೋವನು ಎಂದು ತಿಳಿಯವರು. ಅವರು ಇಸ್ರಾಯೇಲ್ ವಂಶದವರಿಗೆ ದಂಟಿನ ಊರುಗೋಲಾಗಿದ್ದರು.
7 ೭ ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು, ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ಅವರು ನಿನ್ನ ಮೇಲೆ ಆತುಕೊಳ್ಳುವಾಗ, ನೀನು ಅವರನ್ನು ಒಡೆದು, ಅವರ ಕಾಲುಗಳಿಗೆ ಮತ್ತು ನಡುವಿಗೆ ನಡುಕವನ್ನು ಉಂಟುಮಾಡಿದೆ.
8 ೮ “ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ಬರಮಾಡಿ, ಜನರನ್ನೂ, ಪಶುಗಳನ್ನೂ ನಿನ್ನೊಳಗಿಂದ ನಿರ್ಮೂಲ ಮಾಡುವೆನು.
9 ೯ ಈ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಅಂದುಕೊಂಡ ಕಾರಣ ಐಗುಪ್ತ ದೇಶವು ಹಾಳಾಗುವುದು. ಆಗ ನಾನೇ ಯೆಹೋವನು’ ಎಂದು ಅವರಿಗೆ ಗೊತ್ತಾಗುವುದು.
10 ೧೦ ‘ಇಗೋ, ನಾನು ನಿನಗೂ, ನಿನ್ನ ನದಿಗೂ ವಿರುದ್ಧವಾಗಿ ಐಗುಪ್ತ ದೇಶವನ್ನು ಮಿಗ್ದೋಲಿನಿಂದ ಸೆವೇನಿಯ ತನಕ, ಹೌದು, ಕೂಷಿನ ಮೇರೆಯವರೆಗೂ ತೀರಾ ಹಾಳು ಮಾಡುವೆನು.
11 ೧೧ “‘ಯಾವ ಮನುಷ್ಯನ ಪಾದವೂ ಅದರಲ್ಲಿ ಹಾದುಹೋಗುವುದಿಲ್ಲ; ಯಾವ ಪಶುವಿನ ಪಾದವೂ ಅದರಲ್ಲಿ ದಾಟಿಹೋಗುವುದಿಲ್ಲ; ನಲ್ವತ್ತು ವರ್ಷ ನಿರ್ಜನವಾಗಿರುವುದು.
12 ೧೨ ಹಾಳು ಬಿದ್ದಿರುವ ದೇಶಗಳ ಮಧ್ಯದಲ್ಲಿ ಐಗುಪ್ತ ದೇಶವನ್ನೂ ಹಾಳುಮಾಡುವೆನು; ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳನ್ನೂ ಪಾಳುಬೀಳಿಸುವೆನು; ನಲ್ವತ್ತು ವರ್ಷ ಹಾಗೆಯೇ ಇರುವುದು; ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ, ದೇಶದೇಶಗಳಲ್ಲಿ ಚದುರಿಸುವೆನು.’”
13 ೧೩ “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಲ್ವತ್ತು ವರ್ಷಗಳ ಮೇಲೆ ನಾನು ಐಗುಪ್ತ್ಯರನ್ನು ಅವರು ಚದುರಿ ಹೋಗಿದ್ದ ಜನಾಂಗಗಳೊಳಗಿಂದ ಅವರನ್ನು ಒಟ್ಟುಗೂಡಿಸುವೆನು.
14 ೧೪ ಐಗುಪ್ತದ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮ ಭೂಮಿಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ಕನಿಷ್ಠ ರಾಜ್ಯದವರಾಗಿರುವರು.
15 ೧೫ ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠವೆನಿಸಿಕೊಳ್ಳುವುದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಅದು ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣ ಸ್ಥಿತಿಗೆ ತರುವೆನು.
16 ೧೬ ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲರಲ್ಲಿ ಐಗುಪ್ತದಿಂದ ಇನ್ನು ಹುಟ್ಟುವುದಿಲ್ಲ. ನಾನೇ ಯೆಹೋವನು’” ಎಂದು ಅವರಿಗೆ ತಿಳಿಯುವುದು.
17 ೧೭ ಇಪ್ಪತ್ತೇಳನೆಯ ವರ್ಷದ, ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
18 ೧೮ “ನರಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಅತಿ ಕ್ರೂರವಾಗಿ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲು ಸುಲಿದು ಹೋಗಿದೆ. ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ, ಅವನ ಸೈನಿಕರಿಗಾಗಲಿ ತೂರಿನಿಂದ ಪ್ರತಿಫಲವೇನೂ ಸಿಕ್ಕಲಿಲ್ಲ.”
19 ೧೯ ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತ ದೇಶವನ್ನು ಕೊಡುತ್ತೇನೆ; ಅವನು ಅದರ ಜನಸಮೂಹವನ್ನೂ, ಅದರ ಕೊಳ್ಳೆಯನ್ನೂ, ಅದರ ಸುಲಿಗೆಯನ್ನೂ ಸೂರೆಮಾಡುವನು; ಇದೇ ಅವನ ಸೈನ್ಯಕ್ಕೆ ಸಿಕ್ಕುವ ಪ್ರತಿಫಲವಾಗುವುದು.
20 ೨೦ ಅವನು ಸೈನ್ಯ ಸಮೇತನಾಗಿ ನನಗೋಸ್ಕರ ಸೇವೆ ಮಾಡಿದ್ದರಿಂದ ಅವನು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನಾನು ಐಗುಪ್ತ ದೇಶವನ್ನು ಅವನಿಗೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.
21 ೨೧ “ಆ ದಿನದಲ್ಲಿ ನಾನು ಇಸ್ರಾಯೇಲ್ ವಂಶಕ್ಕೆ ಕೊಂಬನ್ನು ಮೊಳೆಯಿಸಿ, ಆ ವಂಶದವರ ಮಧ್ಯದಲ್ಲಿ ನಿನ್ನ ಬಾಯಿಯನ್ನು ತೆರೆಯುವಂತೆ ಮಾಡುವೆನು; ನಾನೇ ಯೆಹೋವನು ಎಂದು ಅವರಿಗೆ ನಿಶ್ಚಯವಾಗುವುದು.”