< ಯೆಹೆಜ್ಕೇಲನು 15 >

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ದ್ರಾಕ್ಷಿಯ ಗಿಡವು ಉಳಿದ ಗಿಡಗಳಿಗಿಂತ ಎಷ್ಟು ಹೆಚ್ಚು? ವನವೃಕ್ಷಗಳಲ್ಲಿ ದ್ರಾಕ್ಷಾಲತೆಯ ವಿಶೇಷವೇನು? 3 ಜನರು ದ್ರಾಕ್ಷಿಯ ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವ ವಸ್ತುವನ್ನಾದರೂ ನೇತು ಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ? 4 ಇಲ್ಲ, ಸೌದೆಯಾಗಿ ಬೆಂಕಿಯಲ್ಲಿ ಹಾಕುವರು; ಬೆಂಕಿಯು ಅದರ ಎರಡು ಕೊನೆಗಳನ್ನು ಸುಟ್ಟುಬಿಡುವುದು, ಮಧ್ಯಭಾಗವು ಇದ್ದಲಾಗಿ ಯಾವ ಕೆಲಸಕ್ಕೂ ಬರುವುದಿಲ್ಲ. 5 ಅದು ಸಂಪೂರ್ಣವಾಗಿ ಇದ್ದಾಗ ಯಾವ ಕೆಲಸಕ್ಕೂ ಬರಲಿಲ್ಲ; ಬೆಂಕಿಯಲ್ಲಿ ಸುಟ್ಟು ಇದ್ದಲಾದ ಮೇಲೆ ಯಾವ ಕೆಲಸಕ್ಕೆ ಬಂದೀತು?” 6 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವನ ವೃಕ್ಷಗಳಲ್ಲಿ ದ್ರಾಕ್ಷಿಯ ಗಿಡವನ್ನು ನಾನು ಹೇಗೆ ಬೆಂಕಿಗೆ ಸೌದೆಯನ್ನಾಗಿ ಕೊಟ್ಟಿದ್ದೇನೋ, ಹಾಗೆಯೇ ನಾನು ಯೆರೂಸಲೇಮಿನವರನ್ನು ವಿನಾಶಕ್ಕೆ ಗುರಿಮಾಡಿದ್ದೇನೆ. 7 ಅವರ ಮೇಲೆ ಕೋಪ ದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ, ಬೆಂಕಿಯು ಅವರನ್ನು ನುಂಗಿಬಿಡುವುದು; ನಾನು ಅವರ ಮೇಲೆ ಕೋಪ ದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು. 8 ಅವರು ದ್ರೋಹ ಮಾಡಿದ್ದರಿಂದ ನಾನು ದೇಶವನ್ನು ಹಾಳುಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.

< ಯೆಹೆಜ್ಕೇಲನು 15 >