< ಪ್ರಸಂಗಿ 6 >

1 ಈ ಲೋಕದಲ್ಲಿ ಮನುಷ್ಯರಿಗೆ ವಿಪರೀತವಾಗಿ ಉಂಟಾಗಿರುವ ದುರಾವಸ್ಥೆಯನ್ನು ಕಂಡೆನು. 2 ಅದೇನೆಂದರೆ ದೇವರು ಒಬ್ಬನಿಗೆ ಯಾವ ಇಷ್ಟಾರ್ಥಕ್ಕೂ ಕೊರತೆಯಿಲ್ಲದಂತೆ ಧನವನ್ನು, ಸಂಪತ್ತನ್ನು ಹಾಗು ಘನತೆಯನ್ನು ಅನುಗ್ರಹಿಸುವನು. ಆದರೆ ಅದನ್ನು ಅನುಭವಿಸುವುದಕ್ಕೆ ದೇವರು ಅವನನ್ನು ಶಕ್ತಿಗೊಳಿಸುವುದಿಲ್ಲ. ಅದನ್ನು ಮತ್ತೊಬ್ಬನು ಅನುಭವಿಸುವನು. ಇದು ಸಹ ವ್ಯರ್ಥವೂ, ದುಃಖಕರವಾದ ಕೆಟ್ಟತನವೂ ಆಗಿದೆ. 3 ನೂರಾರು ಮಕ್ಕಳನ್ನು ಪಡೆದು ಮುಪ್ಪಿನ ಮುದುಕನಾಗುವ ತನಕ ಬಹಳ ವರ್ಷ ಬದುಕಿದವನಿಗೆ ಸಂತೃಪ್ತಿಯೂ, ಉತ್ತರಕ್ರಿಯೆಯೂ ಇಲ್ಲದಿದ್ದರೆ, ಇವನಿಗಿಂತಲೂ ಗರ್ಭಸ್ರಾವದ ಪಿಂಡವೇ ಉತ್ತಮ ಅಂದುಕೊಂಡೆನು. 4 ಅದು ವ್ಯರ್ಥವಾಗಿ ಬರುತ್ತದೆ. ಕತ್ತಲಲ್ಲಿ ಮರೆಯಾಗುತ್ತದೆ. ಅಂಧಕಾರವು ಅದರ ಹೆಸರನ್ನು ಕವಿದಿರುತ್ತದೆ. 5 ಅದು ಸೂರ್ಯನನ್ನು ಕಂಡಿಲ್ಲ. ಅದಕ್ಕೆ ತಿಳಿವಳಿಕೆಯೇ ಇಲ್ಲ. ಆದರೂ ಅವನಿಗಿಂತ ಅದರ ಶಾಂತಿಯೇ ಹೆಚ್ಚು. 6 ಎರಡು ಸಾವಿರ ವರ್ಷ ಅವನು ಬದುಕಿದರೂ ಅವನು ತನ್ನ ಐಶ್ವರ್ಯವನ್ನು ಅನುಭವಿಸಲಿಲ್ಲ. ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರೆ. 7 ಮನುಷ್ಯನು ಪಡುವ ಪ್ರಯಾಸವೆಲ್ಲಾ ತನ್ನ ಹೊಟ್ಟೆಗಾಗಿಯೇ, ಆದರೂ ಅವನಿಗೆ ತೃಪ್ತಿಯಿಲ್ಲ. 8 ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಲಾಭ ಏನಿದೆ? ಜನರ ಮುಂದೆ ಸರಿಯಾಗಿ ನಡೆದುಕೊಳ್ಳಲು ತಿಳಿಯದೇ ಇರುವ ಬಡವನಿಗೆ ಲಾಭವೇನು? 9 ಬಗೆಬಗೆಯಾಗಿ ಆಶಿಸುವುದಕ್ಕಿಂತ ಕಣ್ಣೆದುರಿಗಿರುವುದನ್ನು ಅನುಭವಿಸುವುದೇ ಒಳ್ಳೇಯದು. ಇದು ಕೂಡ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ. 10 ೧೦ ಮನುಷ್ಯನು ಎಂಥವನಾದರೂ ಪೂರ್ವದಲ್ಲಿ ಅವನಿಗೆ ವಿಧಿಸಲ್ಪಟ್ಟ ಹೆಸರಿನಿಂದ ಅವನು ಮಣ್ಣಿನವನೇ ಎಂದು ಗೊತ್ತಾಗಿದೆ. ತನಗಿಂತ ಬಲಿಷ್ಠನ ಸಂಗಡ ಹೋರಾಡಲಾರನು. 11 ೧೧ ಮಾತು ಹೆಚ್ಚಿದಷ್ಟು ಪರಿಣಾಮ ಕಡಿಮೆ, ಅವುಗಳಿಂದ ಮನುಷ್ಯನಿಗೆ ಏನು ಪ್ರಯೋಜನ? 12 ೧೨ ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ದಿನಗಳಲ್ಲೆಲ್ಲಾ ಅವನಿಗೆ ಯಾವುದು ಮೇಲೆಂದು ಯಾರಿಗೆ ಗೊತ್ತು? ತಾನು ಸತ್ತುಹೋದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು?

< ಪ್ರಸಂಗಿ 6 >