< ಧರ್ಮೋಪದೇಶಕಾಂಡ 16 >

1 ನೀವು ಚೈತ್ರ ಮಾಸದಲ್ಲಿ ಪಸ್ಕಹಬ್ಬವನ್ನು ನಿಮ್ಮ ದೇವರಾದ ಯೆಹೋವನಿಗೋಸ್ಕರ ಆಚರಿಸಬೇಕು. ಆ ಮಾಸದ ಒಂದು ರಾತ್ರಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಜರನ್ನು ಐಗುಪ್ತದೇಶದಿಂದ ಬಿಡಿಸಿದ ನೆನಪಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು. 2 ನೀವು ಆಡು ಕುರಿಗಳಲ್ಲಾಗಲಿ, ದನಗಳಲ್ಲಾಗಲಿ ಪಸ್ಕದ ಪಶುವನ್ನು ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ಆತನಿಗಾಗಿ ವಧಿಸಬೇಕು. 3 ಅದರೊಂದಿಗೆ ಹುಳಿಹಾಕಿದ ರೊಟ್ಟಿಯನ್ನು ತಿನ್ನಬಾರದು; ಯಾಕೆಂದರೆ ನೀವು (ರೊಟ್ಟಿಗೆ ಹುಳಿಹಾಕುವುದಕ್ಕೆ ಅವಕಾಶವಿಲ್ಲದೆ) ಅವಸರದಿಂದ ಐಗುಪ್ತದೇಶವನ್ನು ಬಿಟ್ಟು ಬಂದಿರಿ. ನಿಮಗೆ ಬಿಡುಗಡೆಯಾದ ಆ ದಿನವು ನಿಮ್ಮ ಜೀವಮಾನದಲ್ಲೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಗಳನ್ನು ಏಳು ದಿನಗಳ ವರೆಗೂ ತಿನ್ನಬೇಕು. 4 ಆ ಏಳು ದಿನಗಳು ನಿಮ್ಮ ದೇಶದಲ್ಲೆಲ್ಲಾ ಹುಳಿಬೆರೆತ ಯಾವ ಪದಾರ್ಥವೂ ನಿಮ್ಮ ಬಳಿಯಲ್ಲಿ ಇರಲೇಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನೂ ಮರುದಿನದ ವರೆಗೆ ಉಳಿಸಬಾರದು. 5 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವ ಊರಲ್ಲಿಯಾದರೂ ಪಸ್ಕದ ಪಶುವನ್ನು ವಧಿಸದೆ, 6 ಆತನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ, ನೀವು ಐಗುಪ್ತದೇಶದಿಂದ ಹೊರಟುಬಂದ ಸಮಯ, ಅಂದರೆ ಸಾಯಂಕಾಲದಲ್ಲಿ ಪಸ್ಕದ ಯಜ್ಞವನ್ನು ಸಮರ್ಪಿಸಬೇಕು. 7 ಆ ಸ್ಥಳದಲ್ಲಿಯೇ ನೀವು ಅದನ್ನು ಅಡಿಗೆಮಾಡಿ ತಿನ್ನಬೇಕು. ಮರುದಿನ ನಿಮ್ಮ ನಿಮ್ಮ ಮನೆಗಳಿಗೆ ನೀವು ಹೊರಟು ಹೋಗಬಹುದು. 8 ಆರು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು; ಏಳನೆಯ ದಿನದಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಸಭೆ ಸೇರಿಬರಬೇಕು; ಆ ದಿನದಲ್ಲಿ ಯಾವ ಕೆಲಸವ ಮಾಡಬಾರದು. 9 ಬೆಳೆ ಕೊಯ್ಯುವುದಕ್ಕೆ ಕುಡುಗೋಲು ಹಾಕುವ ಕಾಲ ಮೊದಲುಗೊಂಡು ಏಳು ವಾರಗಳನ್ನು ಎಣಿಸಿ, 10 ೧೦ ಆ ಏಳು ವಾರಗಳಾದ ನಂತರ ಪಂಚಾಶತ್ತಮ ದಿನದ ಹಬ್ಬವನ್ನು ಆಚರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ನೀವು ಆಗ ಆತನಿಗೋಸ್ಕರ ತರಬೇಕು. 11 ೧೧ ಮತ್ತು ಆತನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲಿ ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮಿಸಬೇಕು. 12 ೧೨ ಐಗುಪ್ತದೇಶದಲ್ಲಿ ದಾಸರಾಗಿದ್ದೆವೆಂಬುದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಅನುಸರಿಸಿ ನಡೆಯಬೇಕು. 13 ೧೩ ನೀವು ಕಣದ ಕೆಲಸವನ್ನೂ, ದ್ರಾಕ್ಷಿ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ ಏಳು ದಿನಗಳವರೆಗೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕು. 14 ೧೪ ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ಮತ್ತು ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ಸಂಭ್ರಮಿಸಬೇಕು. 15 ೧೫ ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಮತ್ತು ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು. 16 ೧೬ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ, ಪಂಚಾಶತ್ತಮ ದಿನದ ಹಬ್ಬದಲ್ಲಿಯೂ ಮತ್ತು ಪರ್ಣಶಾಲೆಗಳ ಹಬ್ಬದಲ್ಲಿಯೂ ಅಂತು ವರ್ಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ಆರಿಸಿಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಬಾರದು. 17 ೧೭ ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯಾನುಸಾರ ಕೊಡಬೇಕು. 18 ೧೮ ಪ್ರತಿಯೊಂದು ಕುಲವು ಇರುವ ಪ್ರದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಎಲ್ಲಾ ಊರುಗಳಲ್ಲಿಯೂ, ನ್ಯಾಯಾಧಿಪತಿಗಳನ್ನೂ ಮತ್ತು ಅಧಿಕಾರಿಗಳನ್ನೂ ನೀವು ನೇಮಿಸಬೇಕು. ಅವರು ಜನರಿಗೋಸ್ಕರ ನ್ಯಾಯವನ್ನು ವಿಚಾರಿಸಿ ಸರಿಯಾದ ತೀರ್ಪುಕೊಡಬೇಕು. 19 ೧೯ ನೀವು ನ್ಯಾಯವನ್ನು ಬಿಟ್ಟು ತೀರ್ಮಾನ ಮಾಡಬಾರದು, ಪಕ್ಷಪಾತಮಾಡಬಾರದು, ಲಂಚತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನೂ ಕುರುಡರಂತೆ ಮಾಡುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ. 20 ೨೦ ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು. ಹಾಗೆ ನಡೆದರೆ ನೀವು ಬದುಕಿಕೊಂಡು ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ. 21 ೨೧ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಟ್ಟಿಸಿಕೊಳ್ಳುವ ಯಜ್ಞವೇದಿಯ ಬಳಿಯಲ್ಲಿ, ಅಶೇರ ವಿಗ್ರಹಕ್ಕೆ ಸಂಬಂಧಪಟ್ಟ ಯಾವ ಮರದ ಸ್ತಂಭವನ್ನೂ ನೆಡಬಾರದು. 22 ೨೨ ಪವಿತ್ರ ಕಲ್ಲಿನ ಕಂಬವನ್ನೂ ನಿಲ್ಲಿಸಬಾರದು; ಇದು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾದದ್ದು.

< ಧರ್ಮೋಪದೇಶಕಾಂಡ 16 >