< ಧರ್ಮೋಪದೇಶಕಾಂಡ 14 >

1 ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿರುವುದರಿಂದ ಸತ್ತವರಿಗೋಸ್ಕರ ದೇಹವನ್ನು ಗಾಯಮಾಡಿಕೊಳ್ಳಬಾರದು ಮತ್ತು ತಲೆಯ ಮುಂದಿನಭಾಗವನ್ನು ಬೋಳಿಸಿಕೊಳ್ಳಲೂ ಬಾರದು. 2 ಯಾಕೆಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಪರಿಶುದ್ಧ ಜನರೇ. ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗುವುದಕ್ಕೆ ಆರಿಸಿಕೊಂಡಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು. 3 ನಿಷಿದ್ಧವಾಗಿರುವ ಯಾವುದನ್ನೂ ನೀವು ತಿನ್ನಬಾರದು. 4 ನೀವು ತಿನ್ನಬಹುದಾದ ಪಶುಜಾತಿಗಳು ಯಾವುವೆಂದರೆ ದನ, ಕುರಿ, ಆಡು, 5 ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ (ಕಾಡುಟಗರು) ಎಂಬಿವುಗಳೇ. 6 ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು. 7 ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ, ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆ: ಒಂಟೆ, ಮೊಲ, ಬೆಟ್ಟದಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ. 8 ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕುಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು. 9 ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ: ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆ ಇದ್ದು ದೇಹವೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು. 10 ೧೦ ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆಯೂ ಮತ್ತು ಪರೆಪರೆಯಾದ ದೇಹವು ಇರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅದು ನಿಮಗೆ ಅಶುದ್ಧ. 11 ೧೧ ಎಲ್ಲಾ ಶುದ್ಧ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಹುದು. 12 ೧೨ ನೀವು ತಿನ್ನಬಾರದವುಗಳು ಯಾವುವೆಂದರೆ ಗರುಡ, ಬೆಟ್ಟದ ಹದ್ದು, ಕ್ರೌಂಚ, 13 ೧೩ ಗಿಡಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು, 14 ೧೪ ಸಕಲವಿಧವಾದ ಕಾಗೆ, 15 ೧೫ ಉಷ್ಟ್ರಪಕ್ಷಿ, ಉಲೂಕ, ಕಡಲಹಕ್ಕಿ, ಸಕಲವಿಧವಾದ ಡೇಗೆ, 16 ೧೬ ಗೂಬೆ, ಹೆಗ್ಗೂಬೆ, ಕರೇಟು, 17 ೧೭ ಚೀಲಮೂಗಿ, ರಣಹದ್ದು, ನೀರುಕಾಗೆ, 18 ೧೮ ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಕಣ್ಣಕಪಡಿ. 19 ೧೯ ರೆಕ್ಕೆಯುಳ್ಳ ಕ್ರಿಮಿಕೀಟಗಳೆಲ್ಲವೂ ನಿಮಗೆ ಅಶುದ್ಧ. ಅವುಗಳನ್ನು ನೀವು ತಿನ್ನಬಾರದು. 20 ೨೦ ರೆಕ್ಕೆಯುಳ್ಳವುಗಳಲ್ಲಿ ಶುದ್ಧ ಜಾತಿಯವುಗಳನ್ನು ಮಾತ್ರ ನೀವು ತಿನ್ನಬಹುದು. 21 ೨೧ ಸತ್ತುಬಿದ್ದದ್ದನ್ನು ನೀವು ತಿನ್ನಬಾರದು; ನಿಮ್ಮ ಊರಲ್ಲಿರುವ ಪರದೇಶೀಯರಿಗೆ ಅದನ್ನು ತಿನ್ನುವುದಕ್ಕೆ ಕೊಡಬಹುದು, ಅನ್ಯರಿಗೆ ಮಾರಬಹುದು. ನೀವಾದರೋ ನಿಮ್ಮ ದೇವರಾದ ಯೆಹೋವನಿಗೆ ಪ್ರತಿಷ್ಠಿತರಾದವರು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು. 22 ೨೨ ಪ್ರತಿವರ್ಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮ ಭಾಗವನ್ನು ಪ್ರತ್ಯೇಕಿಸಬೇಕು. 23 ೨೩ ಧಾನ್ಯ, ದ್ರಾಕ್ಷಿ, ಎಣ್ಣೆ ಇವುಗಳಲ್ಲಿ ದಶಮಭಾಗವನ್ನೂ ದನಕುರಿಗಳ ಚೊಚ್ಚಲು ಮರಿಗಳನ್ನೂ ಮತ್ತು ನಿಮ್ಮ ಹಿಂಡುಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ತನ್ನ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ತಿನ್ನಬೇಕು. ಹೀಗೆ ನಿಮ್ಮ ದೇವರಾದ ಯೆಹೋವನಲ್ಲೇ ಯಾವಾಗಲೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವವರಾಗಿರಬೇಕು. 24 ೨೪ ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳವು ನಿಮಗೆ ದೂರವಾಗಿದ್ದು, ಆ ಕಾಣಿಕೆಗಳನ್ನು ಅಷ್ಟು ದೂರ ಹೊತ್ತುಕೊಂಡು ಹೋಗುವುದು ಅಸಾಧ್ಯವಾದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಅಭಿವೃದ್ಧಿಯನ್ನು ಉಂಟುಮಾಡಿದ ಕಾಲದಲ್ಲಿ, 25 ೨೫ ಅವುಗಳನ್ನು ಮಾರಿಬಿಟ್ಟು, ಆ ಹಣದ ಗಂಟನ್ನು ಆತನು ಆರಿಸಿಕೊಂಡ ಸ್ಥಳಕ್ಕೆ ತೆಗೆದುಕೊಂಡು ಹೋಗಿರಿ. 26 ೨೬ ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ ಮೊದಲಾದವುಗಳನ್ನು ಆ ಹಣದಿಂದ ಕೊಂಡುಕೊಂಡು, ನೀವೂ ಮತ್ತು ನಿಮ್ಮ ಮನೆಯವರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಊಟಮಾಡಿ ಸಂತೋಷವಾಗಿರಬೇಕು. 27 ೨೭ ಲೇವಿಯರಿಗೆ ನಿಮ್ಮೊಡನೆ ಯಾವ ಸ್ವಾಸ್ತ್ಯವೂ ಇಲ್ಲವಾದ್ದರಿಂದ ನೀವು ಅವರನ್ನು ಕೈಬಿಡಬಾರದು. 28 ೨೮ ಪ್ರತಿ ಮೂರನೆಯ ವರ್ಷದ ಬೆಳೆಯ ದಶಮಭಾಗವನ್ನು ತಂದು ನೀವು ಇರುವ ಊರಿನಲ್ಲಿಯೇ ಕೂಡಿಸಬೇಕು. 29 ೨೯ ಆಗ ಊರಿನಲ್ಲಿರುವ ಅನ್ಯದೇಶದವರೂ, ಅನಾಥರು, ವಿಧವೆಯರೂ ಮತ್ತು ನಿಮ್ಮೊಡನೆ ಸ್ವತ್ತನ್ನು ಹೊಂದದೆಹೋದ ಲೇವಿಯರೂ ಊಟಮಾಡಿ ಸಂತೋಷವಾಗಿರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಮಾಡುವನು.

< ಧರ್ಮೋಪದೇಶಕಾಂಡ 14 >