< ಆಮೋಸನು 2 >

1 ಯೆಹೋವನು ಇಂತೆನ್ನುತ್ತಾನೆ, “ಮೋವಾಬಿನವರು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಅದು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಬೂದಿಮಾಡಿತು.
ಯೆಹೋವ ದೇವರು ಹೀಗೆ ಹೇಳುತ್ತಾನೆ: “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, ಸುಟ್ಟು ಸುಣ್ಣ ಮಾಡಿದ್ದಾನೆ.
2 ನಾನು ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡುವುದು. ಭಟರು ಘೋಷಿಸಿ ಕೊಂಬೂದುವ ಯುದ್ಧದ ಕೋಲಾಹಲದಲ್ಲಿ, ಮೋವಾಬು ಸಾಯುವುದು;
ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ ಗಲಿಬಿಲಿಯಲ್ಲಿ ಸಾಯುವುದು.
3 ನಾನು ಅದರೊಳಗಿಂದ ಅಧಿಪತಿಯನ್ನು ಕಡಿದುಹಾಕಿ, ಸಕಲ ರಾಜ್ಯಾಧಿಕಾರಿಗಳನ್ನೂ ಸಂಹರಿಸುವೆನು.” ಇದು ಯೆಹೋವನ ನುಡಿ.
ನಾನು ಅದರ ಮಧ್ಯದಿಂದ ನ್ಯಾಯಾಧಿಪತಿಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
4 ಯೆಹೋವನು ಇಂತೆನ್ನುತ್ತಾನೆ, “ಯೆಹೂದವು ಮೂರು ದ್ರೋಹಗಳನ್ನು, ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಯೆಹೂದ್ಯರು ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿದರು. ಆತನ ವಿಧಿಗಳನ್ನು ಕೈಕೊಳ್ಳಲಿಲ್ಲ. ಅವರ ಪೂರ್ವಿಕರು ಹಿಂಬಾಲಿಸಿದ ಸುಳ್ಳುದೇವತೆಗಳು, ಇವರನ್ನು ದಾರಿ ತಪ್ಪುವಂತೆ ಮಾಡಿದವು.
ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ.
5 ಆದಕಾರಣ ನಾನು ಯೆಹೂದದ ಮೇಲೆ ಬೆಂಕಿಯನ್ನು ಉರಿಸುವೆನು. ಅದು ಯೆರೂಸಲೇಮಿನ ಅರಮನೆಗಳನ್ನು ನುಂಗಿಬಿಡುವುದು.”
ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.”
6 ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರು ಮೂರು ದ್ರೋಹಗಳನ್ನು, ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಇಸ್ರಾಯೇಲರು ನ್ಯಾಯವಂತನನ್ನು ಬೆಳ್ಳಿಗೆ, ಒಂದು ಜೊತೆ ಕೆರದ ಸಾಲಕ್ಕಾಗಿ ದಿಕ್ಕಿಲ್ಲದವನನ್ನು ಮಾರಿದರು.
ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ನಿರಪರಾಧಿಗಳನ್ನು ಬೆಳ್ಳಿಗೆ ಮತ್ತು ಬಡವರನ್ನು ಒಂದು ಜೋಡಿ ಕೆರಗಳಿಗೆ ಮಾರಿದರು.
7 ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ, ದೀನರ ದಾರಿಗೆ ಅಡ್ಡ ಹಾಕುತ್ತಾರೆ. ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.
ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ.
8 ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವು ಇಟ್ಟ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ; ದಂಡಹಾಕಿಸಿಕೊಂಡವರು ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.
ಅವರು ಅಡವು ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ. ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿಯುತ್ತಾರೆ.
9 ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು, ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ, ಅಲ್ಲೋನ್ ಮರದ ಹಾಗೆ ಬಲಿಷ್ಠವಾಗಿಯೂ ಇದ್ದರು. ಆದರೂ ಮರದ ಮೇಲಿನ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು.
“ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, ಅಮೋರಿಯರನ್ನು ನಾನು ನಾಶ ಪಡಿಸಿದೆನು. ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, ಅವರನ್ನು ನಿರ್ಮೂಲ ಮಾಡುವೆನು.
10 ೧೦ ಇಸ್ರಾಯೇಲ್ಯರೇ, ನೀವು ಅಮ್ಮೋನಿಯರ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು, ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಪಾರುಮಾಡಿ, ನಲ್ವತ್ತು ವರ್ಷ ಅರಣ್ಯದಲ್ಲಿ ನಿಮ್ಮನ್ನು ನಡೆಸಿದೆನು.
ನಾನೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆತಂದೆನು. ಅಮೋರಿಯರ ದೇಶವನ್ನು ನಿಮಗೆ ಸೊತ್ತಾಗಿ ಕೊಡಲು, ನಿಮ್ಮನ್ನು ನಾಲ್ವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದೆನು.
11 ೧೧ ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ಮತ್ತು ನಿಮ್ಮ ಯುವಕರಲ್ಲಿ ಪ್ರತಿಷ್ಠಿತರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸತ್ಯವಲ್ಲವೋ?” ಎಂದು ಯೆಹೋವನು ಅನ್ನುತ್ತಾನೆ.
“ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
12 ೧೨ “ಆದರೆ ನೀವೋ ಪ್ರತಿಷ್ಠಿತರಿಗೆ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟಿರಿ ಮತ್ತು ಪ್ರವಾದಿಗಳಿಗೆ ಪ್ರವಾದಿಸಬೇಡಿರೆಂದು ಆಜ್ಞಾಪಿಸಿದ್ದಿರಿ.
“ಆದರೆ ನೀವು ನಾಜೀರರಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟಿರಿ. ಪ್ರವಾದಿಗಳಿಗೆ ಪ್ರವಾದಿಸಬೇಡಿರಿ ಎಂದು ಆಜ್ಞಾಪಿಸಿದಿರಿ.
13 ೧೩ ಇಗೋ, ನೀವು ನಿಂತಿರುವಲ್ಲಿಯೇ ನಿಮ್ಮನ್ನು ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
“ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ, ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
14 ೧೪ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳಲಾರನು. ಬಲಿಷ್ಠನು ತನ್ನ ಬಲವನ್ನು, ತನ್ನ ಪ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
ಆದ್ದರಿಂದ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
15 ೧೫ ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲಲಾರನು, ಪಾದತ್ವರಿತನು ತಪ್ಪಿಸಿಕೊಳ್ಳಲಾರನು, ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಾರನು.
ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲನು. ಪಾದತ್ವರಿತನು ತಪ್ಪಿಸಿಕೊಳ್ಳನು. ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
16 ೧೬ ಆ ದಿನದಲ್ಲಿ ಶೂರರಲ್ಲಿ ಧೀರನಾದವನು ಬೆತ್ತಲೆಯಾಗಿ ಓಡಿಹೋಗುವನು” ಇದು ಯೆಹೋವನ ನುಡಿ.
ಶೂರರಲ್ಲಿ ಧೈರ್ಯ ಹೃದಯವುಳ್ಳವನು, ಆ ದಿನದಲ್ಲಿ ಬೆತ್ತಲೆಯಾಗಿ ಓಡಿಹೋಗುವನು,” ಎಂದು ಯೆಹೋವ ದೇವರು ಹೇಳುತ್ತಾರೆ.

< ಆಮೋಸನು 2 >