< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 3 >

1 ಆದರೆ ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. 2 ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, 3 ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ, 4 ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. 6 ಅವರಲ್ಲಿ ಕೆಲವರು ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ. 7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರು. 8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ. 9 ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು. 10 ೧೦ ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, 11 ೧೧ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು. 12 ೧೨ ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. 13 ೧೩ ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. 14 ೧೪ ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. 15 ೧೫ ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. 16 ೧೬ ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. 17 ೧೭ ಆದ್ದರಿಂದ ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 3 >