< ಸಮುವೇಲನು - ದ್ವಿತೀಯ ಭಾಗ 6 >

1 ಅನಂತರ ದಾವೀದನು ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ಅವರ ಸಂಗಡ
ದಾವೀದನು ಇಸ್ರಾಯೇಲಿನಲ್ಲಿ ಆರಿಸಿದ ಮೂವತ್ತು ಸಾವಿರ ಸೈನಿಕರನ್ನು ಕೂಡಿಸಿಕೊಂಡು,
2 ದೇವರ ಮಂಜೂಷವನ್ನು ತರುವುದಕ್ಕಾಗಿ ಯೆಹೂದ ದೇಶದ ಬಾಳಾ ಎಂಬಲ್ಲಿಗೆ ಹೋದನು. ಆ ಮಂಜೂಷವು ದೇವನಾಮದಿಂದ ಅಂದರೆ ಕೆರೂಬಿಯರ ನಡುವೆ ಆಸೀನನಾಗಿರುವ ಸೇನಾಧೀಶ್ವರನಾದ ಯೆಹೋವನ ನಾಮದಿಂದ ಪ್ರಸಿದ್ಧವಾಗಿತ್ತು.
ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.
3 ಅವರು ದೇವರ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು, ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಮತ್ತು ಅಹಿಯೋವನೂ ಬಂಡಿಯನ್ನು ಮಾರ್ಗ ತೋರಿಸುತ್ತಾ ಮುನ್ನಡೆಸಿದರು.
ಆಗ ಅವರು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು, ಅದನ್ನು ಹೊಸ ಬಂಡಿಯ ಮೇಲೆ ಏರಿಸಿದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗೂ ಅಹಿಯೋವನು ಆ ಹೊಸ ಬಂಡಿಯನ್ನು ನಡೆಸಿದರು.
4 ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲ್ಪಟ್ಟ ದೇವರ ಮಂಜೂಷದ ಮುಂದೆ ಅಹಿಯೋವನೂ ಹೋಗುತ್ತಿದ್ದನು.
ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದಾಗ ಅಹಿಯೋವನು ದೇವರ ಮಂಜೂಷದ ಮುಂದೆ ನಡೆದನು.
5 ದಾವೀದನೂ ಎಲ್ಲಾ ಇಸ್ರಾಯೇಲರೂ ಶಂಕುಮರದಿಂದ (ಸೈಪ್ರಸ್ ಮರ) ಮಾಡಿದ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ಯೆಹೋವನ ಮುಂದೆ ನರ್ತನ ಮಾಡುತ್ತಾ ಹೋದರು.
ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ಸ್ವರಮಂಡಲ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ಯೆಹೋವ ದೇವರ ಮುಂದೆ ಹೋದರು.
6 ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
ಅವರು ನಾಕೋನನ ಕಣದ ಬಳಿಗೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ತನ್ನ ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
7 ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು, ಈ ತಪ್ಪಿಗೆ ಅವನನ್ನು ಸಂಹರಿಸಿದನು. ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
ಆಗ ಯೆಹೋವ ದೇವರು ಉಜ್ಜನ ಮೇಲೆ ಕೋಪಗೊಂಡು, ಅಂಥ ಅಗೌರವಕ್ಕಾಗಿ ದೇವರು ಅವನನ್ನು ಶಿಕ್ಷಿಸಿದರು; ಅವನು ಅಲ್ಲಿಯೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
8 ಯೆಹೋವನು ಉಜ್ಜನನ್ನು ಹತ್ಯಮಾಡಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ “ಪೆರೆಚ್ ಉಜ್ಜಾ” ಎಂದು ಹೆಸರಿಟ್ಟನು. ಅದಕ್ಕೆ ಇಂದಿನ ವರೆಗೂ ಅದೇ ಹೆಸರಿರುತ್ತದೆ.
ಯೆಹೋವ ದೇವರು ಉಜ್ಜನನ್ನು ಶಿಕ್ಷಿಸಿದ್ದರಿಂದ, ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು, ಇಂದಿನವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಕರೆಯಲಾಗುತ್ತದೆ.
9 ಆ ದಿನ ದಾವೀದನು ಯೆಹೋವನಿಗೆ ಭಯಪಟ್ಟು, “ಯೆಹೋವನ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದುಕೊಂಡು,
ದಾವೀದನು ಆ ದಿನ ಯೆಹೋವ ದೇವರಿಗೆ ಭಯಪಟ್ಟು, “ಯೆಹೋವ ದೇವರ ಮಂಜೂಷವನ್ನು ನಾನಿರುವಲ್ಲಿಗೆ ಹೇಗೆ ತೆಗೆದುಕೊಂಡು ಹೋಗುವದು?” ಎಂದನು.
10 ೧೦ ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
ದಾವೀದನು ಯೆಹೋವ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ, ಗಿತ್ತೀಯನಾದ ಓಬೇದ್ ಏದೋಮನ ಮನೆಗೆ ತೆಗೆದುಕೊಂಡು ಹೋದನು.
11 ೧೧ ಯೆಹೋವನ ಮಂಜೂಷವು ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ದಿನಗಳಲ್ಲಿ ಯೆಹೋವನು ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದನು.
ಯೆಹೋವ ದೇವರ ಮಂಜೂಷವು ಗಿತ್ತೀಯನಾದ ಓಬೇದ್ ಏದೋಮನ ಮನೆಯಲ್ಲಿ ಮೂರು ತಿಂಗಳು ಇದ್ದುದರಿಂದ, ಯೆಹೋವ ದೇವರು ಓಬೇದ್ ಎದೋಮನನ್ನೂ, ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದರು.
12 ೧೨ ಯೆಹೋವನು ಹೀಗೆ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ, ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸಾಹದಿಂದ ದಾವೀದನಗರಕ್ಕೆ ತಂದನು.
“ದೇವರ ಮಂಜೂಷದ ನಿಮಿತ್ತ ಯೆಹೋವ ದೇವರು ಓಬೇದ್ ಏದೋಮನ ಮನೆಯನ್ನೂ, ಅವನಿಗೆ ಉಂಟಾದದ್ದೆಲ್ಲವನ್ನೂ ಆಶೀರ್ವದಿಸಿದ್ದಾರೆ,” ಎಂದು ಅರಸನಾದ ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು ಹೋಗಿ, ಓಬೇದ್ ಏದೋಮನ ಮನೆಯೊಳಗಿಂದ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.
13 ೧೩ ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ, ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು.
ಯೆಹೋವ ದೇವರ ಮಂಜೂಷವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ, ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
14 ೧೪ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ, ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು.
ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡು, ತನ್ನ ಪೂರ್ಣಬಲದಿಂದ ಯೆಹೋವ ದೇವರ ಮುಂದೆ ಕುಣಿದಾಡಿದನು.
15 ೧೫ ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲರೂ ಅರ್ಭಟಿಸುತ್ತಾ, ತುತ್ತೂರಿ ಊದುತ್ತಾ, ಯೆಹೋವನ ಮಂಜೂಷವನ್ನು ತಂದರು.
ಈ ಪ್ರಕಾರ ದಾವೀದನೂ, ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮಂಜೂಷವನ್ನು ಆರ್ಭಟದಿಂದಲೂ, ತುತೂರಿಯ ಶಬ್ದದಿಂದಲೂ ಬರಮಾಡಿದರು.
16 ೧೬ ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಿಕಿಯಿಂದ ಇಣಿಕಿ ನೋಡಿ, ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ, ಕುಣಿಯುತ್ತಾ ಇರುವುದನ್ನು ಕಂಡು, ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು
ಯೆಹೋವ ದೇವರ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಅರಸನಾದ ದಾವೀದನು ಯೆಹೋವ ದೇವರ ಮುಂದೆ ಕುಣಿದಾಡುವುದನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.
17 ೧೭ ಜನರು ಯೆಹೋವನ ಮಂಜೂಷವನ್ನು ತಂದು ದಾವೀದನು ಹಾಕಿಸಿದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿಟ್ಟರು. ಆಗ ದಾವೀದನು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
ಅವರು ಯೆಹೋವ ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ದಾವೀದನು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದನು.
18 ೧೮ ಇದಾದ ಮೇಲೆ ಅವನು ಸೇನಾಧೀಶ್ವರನಾದ ಯೆಹೋವನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
19 ೧೯ ಸಭೆಯಾಗಿ ಸೇರಿ ಬಂದಿರುವ ಇಸ್ರಾಯೇಲರ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಮಾಂಸವನ್ನೂ ಮತ್ತು ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಕೊಡಿಸಿದರು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
ನೆರೆದುಬಂದ ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
20 ೨೦ ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದು, “ಈ ಹೊತ್ತು ಇಸ್ರಾಯೇಲರ ಅರಸನು ಎಂಥ ಗೌರವದಿಂದ ನಡೆದುಕೊಂಡನು. ಹುಚ್ಚರಲ್ಲೊಬ್ಬನಂತೆ ತನ್ನ ಜನರ ದಾಸಿಯರ ಮುಂದೆ ಬೆತ್ತಲೆಯಾಗಿದ್ದನಲ್ಲಾ” ಅಂದಳು.
ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ತಿರುಗಿದಾಗ, ಸೌಲನ ಮಗಳಾದ ಮೀಕಲಳು ದಾವೀದನಿಗೆ ಎದುರಾಗಿ ಬಂದು, “ನಿಷ್ಪ್ರಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿ ಹಾಕಿದ ಹಾಗೆಯೇ, ಈ ಹೊತ್ತು ತನ್ನ ಸೇವಕರ ದಾಸಿಯರ ಕಣ್ಣು ಮುಂದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಹೊಂದಿದನು?” ಎಂದಳು.
21 ೨೧ ಆಗ ದಾವೀದನು ಮೀಕಲಳಿಗೆ, “ಇದನ್ನು ಯೆಹೋವನ ಸನ್ನಿಧಿಯಲ್ಲಿ ಮಾಡಿದ್ದೇನಷ್ಟೇ, ನಿನ್ನ ತಂದೆಯನ್ನೂ ಅವರ ಮನೆಯವರೆಲ್ಲರನ್ನೂ ಬಿಟ್ಟು, ನನ್ನನ್ನೇ ಆರಿಸಿಕೊಂಡು, ತನ್ನ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಸಂತೋಷದಿಂದ ಕುಣಿದಾಡುವೆನು.
ಆದರೆ ದಾವೀದನು ಮೀಕಲಳಿಗೆ, “ನಾನು ಕುಣಿದದ್ದು ಯೆಹೋವ ದೇವರ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಆ ಯೆಹೋವ ದೇವರ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
22 ೨೨ ಇದಕ್ಕಿಂತ ಇನ್ನೂ ಹೆಚ್ಚಾಗಿ ತಿರಸ್ಕಾರ ಹೊಂದುವುದಕ್ಕೂ ನನ್ನನ್ನು ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ಸಿದ್ಧನಾಗಿದ್ದೇನೆ. ನೀನು ಹೇಳಿದ ದಾಸಿಯರಾದರೋ ಹೇಗೂ ನನ್ನನ್ನು ಸನ್ಮಾನಿಸುವರು” ಎಂದನು.
ನಾನು ಇನ್ನೂ ಇದಕ್ಕಿಂತ ಅಲ್ಪನಾಗಿರುವುದಕ್ಕೂ, ಹೀನೈಸಿಕೊಳ್ಳುವುದಕ್ಕೂ, ಸಿದ್ಧನಾಗಿದ್ದೇನೆ. ಆದರೆ ನೀನು ಹೇಳಿದ ದಾಸಿಯರಿಂದ ನಿಶ್ಚಯವಾಗಿ ಘನತೆಯನ್ನು ಹೊಂದುವೆನು,” ಎಂದನು.
23 ೨೩ ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವ ವರೆಗೂ ಮಕ್ಕಳೇ ಆಗಲಿಲ್ಲ.
ಆದ್ದರಿಂದ ಸೌಲನ ಮಗಳಾದ ಮೀಕಲಳು ತನ್ನ ಮರಣದ ದಿವಸದ ಮಟ್ಟಿಗೂ ಮಕ್ಕಳು ಆಗಲಿಲ್ಲ.

< ಸಮುವೇಲನು - ದ್ವಿತೀಯ ಭಾಗ 6 >