< ಅರಸುಗಳು - ದ್ವಿತೀಯ ಭಾಗ 1 >

1 ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಾಯೇಲರಿಗೆ ವಿರುದ್ಧವಾಗಿ ದಂಗೆ ಎದ್ದರು.
ಅಹಾಬನ ಮರಣದ ನಂತರ ಮೋವಾಬ್ಯರು ಇಸ್ರಾಯೇಲರ ವಿರುದ್ಧ ದಂಗೆ ಎದ್ದರು.
2 ಅಹಜ್ಯನು ಸಮಾರ್ಯದಲ್ಲಿ ತನ್ನ ಮೇಲುಪ್ಪರಿಗೆಯ ಕಿಟಿಕಿಯಿಂದ ಬಿದ್ದು ಅಸ್ವಸ್ಥನಾದಾಗ ತನ್ನ ಸೇವಕರನ್ನು ಕರೆದು ಅವರಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ವಾಸಿಯಾಗುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿರಿ” ಎಂದು ಹೇಳಿಕಳುಹಿಸಿದನು.
ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.
3 ಆಗ ಯೆಹೋವನ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರ್ಯದ ಅರಸನ ಸೇವಕರನ್ನು ಎದುರುಗೊಂಡು ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು ಇಸ್ರಾಯೇಲರಲ್ಲಿ ದೇವರಿಲ್ಲವೋ?
ಆದರೆ ಯೆಹೋವ ದೇವರ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ, ‘ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀವು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಹೋಗುತ್ತಿರುವುದೇಕೆ?
4 ಅಹಜ್ಯನು ತಾನು ಹತ್ತಿ ಮಲಗಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳು ಎಂದು ಆಜ್ಞಾಪಿಸಿದನು. ಎಲೀಯನು ಹಾಗೆಯೇ ಮಾಡಿದನು.
ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು.
5 ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ, “ನೀವು ಹಿಂದಿರುಗಿ ಬಂದ್ದದೇಕೆ?” ಎಂದು ಕೇಳಿದನು.
ಸೇವಕರು ಅರಸನ ಬಳಿಗೆ ಹಿಂದಿರುಗಿ ಬಂದಾಗ, ಅವನು ಅವರಿಗೆ, “ನೀವು ಹಿಂದಿರುಗಿ ಬಂದದ್ದೇಕೆ?” ಎಂದನು.
6 ಅದಕ್ಕೆ ಅವರು, “ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ, ‘ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ’ ಯೆಹೋವನ ಹೆಸರಿನಲ್ಲಿ ಅವನಿಗೆ, ‘ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಕಳುಹಿಸುವುದೇನು? ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಹೇಳಿರಿ ಎಂದು ಆಜ್ಞಾಪಿಸಿದನು” ಎಂದು ಉತ್ತರ ಕೊಟ್ಟರು.
ಅವರು ಅರಸನಿಗೆ, “ಒಬ್ಬ ಮನುಷ್ಯನು ನಮಗೆ ಎದುರಾಗಿ ಬಂದು, ‘ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿ ಹೋಗಿ, ಯೆಹೋವ ದೇವರು ಹೇಳುವುದು ಏನೆಂದರೆ: ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಜನರನ್ನು ಕಳುಹಿಸಿರುತ್ತೀ? ಇದರ ನಿಮಿತ್ತ, ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂಬುದಾಗಿ ಅವನಿಗೆ ಹೇಳಿರಿ, ಎಂದು ತಿಳಿಸಿದನು,” ಎಂದರು.
7 ಅರಸನು ತಿರುಗಿ ಅವರನ್ನು, “ನಿಮಗೆ ಎದುರಾಗಿ ಹೀಗೆ ಹೇಳಿದ ಮನುಷ್ಯನು ಹೇಗಿದ್ದನು?” ಎಂದು ಕೇಳಲು,
ಅರಸನು ಅವರಿಗೆ, “ನಿಮಗೆದುರಾಗಿ ಬಂದು ಈ ಮಾತುಗಳನ್ನು ನಿಮಗೆ ಹೇಳಿದ ಆ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
8 ಅವರು, “ಅವನು ಕಂಬಳಿ ಹೊದ್ದುಕೊಂಡಿದ್ದನು. ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು” ಎಂದು ಉತ್ತರ ಕೊಟ್ಟರು. ಅದಕ್ಕೆ ಅರಸನು, “ಆ ಮನುಷ್ಯನು ತಿಷ್ಬೀಯನಾದ ಎಲೀಯನೇ ಆಗಿರಬೇಕು” ಎಂದನು.
ಅದಕ್ಕವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದನು; ಅವನ ಸೊಂಟಕ್ಕೆ ಸುತ್ತಲೂ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಅವನು ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದು ಹೇಳಿದನು.
9 ಆಗ ಅರಸನು ಎಲೀಯನನ್ನು ಕರೆತರುವುದಕ್ಕಾಗಿ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಹೋಗಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡು ಅವನಿಗೆ, “ದೇವರ ಮನುಷ್ಯನೇ ಇಳಿದು ಬಾ ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು.
ಆಗ ಅರಸನು ಒಬ್ಬ ಪ್ರಧಾನನನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಎಲೀಯನ ಬಳಿಗೆ ಕಳುಹಿಸಿದನು. ಪ್ರಧಾನನು ಅವನ ಬಳಿಗೆ ಹೋದಾಗ, ಇಗೋ, ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆಗ ಅವನು ಎಲೀಯನಿಗೆ, “ದೇವರ ಮನುಷ್ಯನೇ, ‘ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
10 ೧೦ ಅದಕ್ಕೆ ಎಲೀಯನು ಪಂಚದಶಾಧಿಪತಿಗೆ, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
ಅದಕ್ಕೆ ಎಲೀಯನು ಪ್ರಧಾನನಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು.
11 ೧೧ ತರುವಾಯ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನೂ, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಹೋಗಿ ಎಲೀಯನಿಗೆ “ದೇವರ ಮನುಷ್ಯನೇ ಬೇಗನೆ ಇಳಿದು ಬಾ, ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು.
ತಿರುಗಿ ಅರಸನು ಎಲೀಯನ ಬಳಿಗೆ ಐವತ್ತು ಮಂದಿಯ ಪ್ರಧಾನನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ, “ದೇವರ ಮನುಷ್ಯನೇ, ‘ಬೇಗನೆ ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
12 ೧೨ ಆಗ ಎಲೀಯನು, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ, ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
ಎಲೀಯನು ಅವರಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು.
13 ೧೩ ಆಗ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಬಂದು ಎಲೀಯನ ಮುಂದೆ ಮೊಣಕಾಲೂರಿ ಬೇಡಿಕೊಂಡು ಅವನಿಗೆ, “ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ.
ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ.
14 ೧೪ ಆಕಾಶದಿಂದ ಬೆಂಕಿಬಿದ್ದು ಮೊದಲು ಬಂದ ಇಬ್ಬರು ಪಂಚದಶಾಧಿಪತಿಗಳನ್ನೂ, ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲಾ, ನನ್ನ ಪ್ರಾಣವಾದರೂ ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದೆಂದು ಎಣಿಸಲ್ಪಡಲಿ” ಎಂದು ಬೇಡಿಕೊಂಡನು.
ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ, ಅವರ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ,” ಎಂದು ಹೇಳಿ ಅವನನ್ನು ಬೇಡಿಕೊಂಡನು.
15 ೧೫ ಆಗ ಯೆಹೋವನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದ್ದರಿಂದ ಅವನು ಎದ್ದು, ಇವನ ಜೊತೆಯಲ್ಲಿ ಅರಸನ ಬಳಿಗೆ ಹೋದನು.
ಆಗ ಯೆಹೋವ ದೇವರ ದೂತನು ಎಲೀಯನಿಗೆ, “ಅವನ ಸಂಗಡ ಇಳಿದು ಹೋಗು, ಅವನಿಗೆ ಭಯಪಡಬೇಡ,” ಎಂದನು. ಆದ್ದರಿಂದ ಎಲೀಯನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋದನು.
16 ೧೬ ನಂತರ ಎಲೀಯನು ಅರಸನಿಗೆ, “ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇನು? ಅಂಥ ವಿಚಾರ ಮಾಡುವುದಕ್ಕೆ ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇಬೇಕು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.
ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
17 ೧೭ ಯೆಹೋವನು ಎಲೀಯನ ಮುಖಾಂತರವಾಗಿ ಮುಂತಿಳಿಸಿದಂತೆ ಅರಸನು ಸತ್ತನು. ಅವನಿಗೆ ಮಗನಿಲ್ಲದೆ ಇದ್ದುದರಿಂದ ಅವನಿಗೆ ಬದಲಾಗಿ ಅವನ ತಮ್ಮನಾದ ಯೋರಾಮನೆಂಬವನು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದನು
ಹಾಗೆಯೇ ಅವನು ಎಲೀಯನು ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರವೇ ಸತ್ತುಹೋದನು. ಅಹಜ್ಯನಿಗೆ ಮಗನಿಲ್ಲದ್ದರಿಂದ ಯೆಹೂದದ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಎರಡನೆಯ ವರ್ಷದಲ್ಲಿ ಯೋರಾಮನು ಅವನಿಗೆ ಬದಲಾಗಿ ಅರಸನಾದನು.
18 ೧೮ ಅಹಜ್ಯನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

< ಅರಸುಗಳು - ದ್ವಿತೀಯ ಭಾಗ 1 >