< ಸಮುವೇಲನು - ಪ್ರಥಮ ಭಾಗ 20 >

1 ದಾವೀದನು ರಾಮದ ನಯೋತಿನಿಂದ ತಪ್ಪಿಸಿಕೊಂಡು ಯೋನಾತಾನನ ಬಳಿಗೆ ಬಂದು ಅವನಿಗೆ, “ನಿನ್ನ ತಂದೆಯು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನಲ್ಲ, ನಾನೇನು ಮಾಡಿದೆನು? ನನ್ನ ಅಪರಾಧವೇನು? ನಾನು ಅವನಿಗೆ ಮಾಡಿದ ದ್ರೋಹವು ಯಾವುದು?” ಎನ್ನಲು, 2 ಯೋನಾತಾನನು ಅವನಿಗೆ, “ಇದು ಆಗಲೇಬಾರದು, ನಿನಗೆ ಮರಣವಾಗಕೂಡದು. ನನ್ನ ತಂದೆಯು ಅಲ್ಪಕಾರ್ಯವನ್ನಾಗಲಿ, ಮಹಾಕಾರ್ಯವನ್ನಾಗಲಿ ನನಗೆ ತಿಳಿಸದೇ ಮಾಡುವುದಿಲ್ಲ. ಈ ಕಾರ್ಯವನ್ನು ನನಗೆ ಹೇಗೆ ಮರೆಮಾಡಲು ಸಾಧ್ಯ?” ಎಂದು ಹೇಳಿದನು. 3 ಅದಕ್ಕೆ ದಾವೀದನು, “ನಿನ್ನ ಕಣ್ಣುಮುಂದೆ ನನಗೆ ದಯೆ ದೊರಕುತ್ತದೆಂಬುದನ್ನು ನಿನ್ನ ತಂದೆಯು ಬಲ್ಲನು. ಆದ್ದರಿಂದ ಇದನ್ನು ಯೋನಾತಾನನಿಗೆ ತಿಳಿಸಿದರೆ ಅವನಿಗೆ ದುಃಖವಾಗುವುದೆಂದು ಮರೆಮಾಡುತ್ತಾನೆ. ನಿನ್ನ ಜೀವದಾಣೆ, ಯೆಹೋವನ ಆಣೆ, ನನಗೂ ಮರಣಕ್ಕೂ ಒಂದು ಗೇಣು ಅಂತರವಿದೆ” ಎಂದು ಖಂಡಿತವಾಗಿ ಹೇಳಿದನು. 4 ಆಗ ಯೋನಾತಾನನು ದಾವೀದನಿಗೆ, “ನಾನು ನಿನಗೋಸ್ಕರ ಮಾಡಬೇಕಾದದ್ದನ್ನು ಹೇಳು ಮಾಡುತ್ತೇನೆ” ಅಂದನು. 5 ಅದಕ್ಕೆ ದಾವೀದನು, “ನಾಳೆ ಅಮಾವಾಸ್ಯೆ. ನಾನು ಅರಸನ ಪಂಕ್ತಿಯಲ್ಲಿ ಊಟಮಾಡಬೇಕಾಗಿರುವುದು. ನೀನು ಅಪ್ಪಣೆಕೊಟ್ಟರೆ ನಾನು ಈಗಲೇ ಹೋಗಿ ಮೂರನೆಯ ದಿನ ಸಾಯಂಕಾಲದವರೆಗೆ ಹೊಲದಲ್ಲಿ ಅಡಗಿಕೊಂಡಿರುವೆನು. 6 ನಿನ್ನ ತಂದೆಯು ನನ್ನನ್ನು ಕುರಿತು ವಿಚಾರ ಮಾಡಿದರೆ, ನೀನು, ‘ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಅವನ ಗೋತ್ರದವರು ಅಲ್ಲಿ ವಾರ್ಷಿಕ ಯಜ್ಞಮಾಡುತ್ತಾರೆ’ ಎಂದು ಹೇಳು. 7 ಅವನು ಆಗಲಿ ಅಂದರೆ ನಿನ್ನ ಸೇವಕನಾದ ನಾನು ಸುರಕ್ಷಿತನಾಗಿರುವೆನು. ಸಿಟ್ಟುಮಾಡಿದರೆ ಅವನಿಂದ ನನಗೆ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ, ಸೇವಕನ ಮೇಲೆ ದಯೆಯಿರಲಿ. 8 ನೀನು ಯೆಹೋವನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿಯಲ್ಲಾ, ನಾನು ಅಪರಾಧಿಯಾಗಿದ್ದರೆ ನನ್ನನ್ನು ನಿನ್ನ ತಂದೆಗೆ ಒಪ್ಪಿಸುವುದೇಕೆ? ನೀನೇ ನನ್ನನ್ನು ಕೊಂದುಹಾಕು” ಎಂದು ಹೇಳಿದನು. 9 ಯೋನಾತಾನನು ಅವನಿಗೆ, “ಇದು ಆಗಲೇ ಬಾರದು, ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ ಅದನ್ನು ನಿನಗೆ ತಿಳಿಸದಿರುತ್ತೇನೆಯೇ?” ಅಂದನು. 10 ೧೦ ದಾವೀದನು, “ನಿನ್ನ ತಂದೆಯು ಬಿರುನುಡಿಯಿಂದ ಉತ್ತರಕೊಟ್ಟರೆ ಅದನ್ನು ಯಾರ ಮುಖಾಂತರವಾಗಿ ತಿಳಿಸುವಿ?” ಎಂದು ಅವನನ್ನು ಕೇಳಲು 11 ೧೧ ಯೋನಾತಾನನು ಅವನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು. 12 ೧೨ ಅವರಿಬ್ಬರೂ ಹೊಲಕ್ಕೆ ಹೋದ ಮೇಲೆ ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವನೇ ಸಾಕ್ಷಿ, ನಾನು ನಾಳೆ ಇಲ್ಲವೆ ನಾಡಿದ್ದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತನಾಡಿ, ನಿನ್ನ ಮೇಲೆ ಅವನಿಗೆ ದಯೆ ಉಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಸುವೆನು. 13 ೧೩ ನನ್ನ ತಂದೆಯು ನಿನಗೆ ಕೇಡುಮಾಡುವ ಮನಸ್ಸುಳ್ಳವನಾಗಿದ್ದಾನೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ, ನೀನು ತಪ್ಪಿಸಿಕೊಂಡು ಸುರಕ್ಷಿತವಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ, ಆತನು ನನ್ನ ತಂದೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರಲಿ. 14 ೧೪ ನೀನು ಯೆಹೋವನನ್ನು ನೆನಸಿ ನನ್ನ ಜೀವಮಾನದಲ್ಲೆಲ್ಲಾ ನನಗೆ ಕೃಪೆತೋರಿಸು. 15 ೧೫ ನಾನು ಸತ್ತನಂತರ ನನ್ನ ಮನೆಯ ಮೇಲೆಯೂ ಶಾಶ್ವತವಾದ ನಿನ್ನ ದಯೆಯಿರಲಿ. ಯೆಹೋವನು ನಿನ್ನ ಎಲ್ಲಾ ಶತ್ರುಗಳನ್ನು ಭೂಮಿಯಿಂದ ತೆಗೆದು ಹಾಕಿದರೂ ಅದು ನನ್ನ ಮನೆಯಿಂದ ಅಗಲದಿರಲಿ. 16 ೧೬ ಅಗಲಿದರೆ ಯೆಹೋವನೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿ ಅವರ ಮನೆಯವರೊಡನೆ ಒಡಂಬಡಿಕೆ ಮಾಡಿಕೊಂಡು, 17 ೧೭ ತಾನು ದಾವೀದನನ್ನು ಸ್ವಂತ ಪ್ರಾಣದಂತೆ ಪ್ರೀತಿಸುತ್ತಿದ್ದುದರಿಂದ ಆ ಪ್ರೀತಿಸಾಕ್ಷಿಯಾಗಿ ಅವನಿಂದ ಪ್ರಮಾಣಮಾಡಿಸಿದನು. 18 ೧೮ ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆ, ನಿನ್ನ ಸ್ಥಳವು ಬರಿದಾಗಿರುವುದನ್ನು ಅರಸನು ಕಂಡು ನಿನ್ನ ವಿಷಯವಾಗಿ ವಿಚಾರಿಸುವನು. 19 ೧೯ ನೀನು ಮೂರನೆಯ ದಿನದಲ್ಲಿ ಮೊದಲು ಅಡಗಿಕೊಂಡಿದ್ದ ಸ್ಥಳಕ್ಕೆ ಬೇಗ ಬಂದು ಅಲ್ಲಿನ ಕಲ್ಲುಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡಿರು. 20 ೨೦ ನಾನು ಗುರಿಯಿಟ್ಟವನೋ ಎಂಬಂತೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆದು ಕೂಡಲೇ ಅವುಗಳನ್ನು 21 ೨೧ ತರುವುದಕ್ಕಾಗಿ ನನ್ನ ಆಳುಗಳನ್ನು ಕಳುಹಿಸುವೆನು. ನಾನು ಅವನಿಗೆ, ‘ಬಾಣಗಳು ಈಚೆ ಬಿದ್ದಿರುತ್ತವೆ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದರೆ ನೀನು ಬಾ ಯೆಹೋವನ ಆಣೆ ಯಾವ ಕೇಡು ಸಂಭವಿಸದೆ ಸುರಕ್ಷಿತನಾಗಿರುವಿ. 22 ೨೨ ಆದರೆ, ‘ಬಾಣಗಳು ಆಚೆ ಬಿದ್ದಿರುತ್ತವೆ’ ಎಂದು ಹೇಳಿದರೆ ಹೊರಟುಹೋಗು, ನೀನು ಹೋಗುವುದೇ ಯೆಹೋವನ ಚಿತ್ತವಾಗಿದೆ. 23 ೨೩ ನಮ್ಮಿಬ್ಬರ ಒಡಂಬಡಿಕೆಗೆ ಯೆಹೋವನೇ ನಿತ್ಯ ಸಾಕ್ಷಿಯಾಗಿರುವನು” ಅಂದನು. 24 ೨೪ ದಾವೀದನು ಹೊಲದಲ್ಲಿ ಅಡಗಿಕೊಂಡನು. 25 ೨೫ ಅರಸನು ಅಮಾವಾಸ್ಯೆ ದಿನ, ಪದ್ದತಿಯ ಪ್ರಕಾರ ಗೋಡೆಯ ಬಳಿಯಲ್ಲಿರುವ ತನ್ನ ಆಸನದ ಮೇಲೆ ಭೋಜನಕ್ಕೆ ಕುಳಿತುಕೊಂಡನು. ಅರಸನ ಎದುರಾಗಿ ಯೋನಾತಾನನೂ, ಅರಸನ ಪಕ್ಕದಲ್ಲಿ ಅಬ್ನೇರನೂ ಕುಳಿತುಕೊಂಡನು. ಸೌಲನು ದಾವೀದನ ಸ್ಥಳವು ಬರಿದಾಗಿರುವುದನ್ನು ಕಂಡರೂ, 26 ೨೬ ಆ ದಿನ ಅವನ ವಿಷಯ ಏನೂ ಹೇಳಲಿಲ್ಲ. ಅವನಿಗೆ ಏನಾದರೂ ಸಂಭವಿಸಿರಬೇಕು. ಅವನು ಹೊಲೆಯಾಗಿದ್ದಾನು, ತನ್ನನ್ನು ಇನ್ನು ಶುದ್ಧಪಡಿಸಿಕೊಳ್ಳದೆ ಇರಬಹುದು ಅಂದುಕೊಂಡನು. 27 ೨೭ ಮರುದಿನದಲ್ಲಿಯೂ, ಅಂದರೆ ತಿಂಗಳಿನ ಎರಡನೆಯ ದಿನದಲ್ಲಿಯೂ ದಾವೀದನ ಸ್ಥಾನ ಬರಿದಾಗಿದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ, ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ?” ಎಂದು ತನ್ನ ಮಗನಾದ ಯೋನಾತಾನನನ್ನು ಕೇಳಿದನು. 28 ೨೮ ಅದಕ್ಕೆ ಯೋನಾತಾನನು, “ದಾವೀದನು ‘ಬೇತ್ಲೆಹೇಮಿನಲ್ಲಿ ನಮ್ಮ ಗೋತ್ರದವರು ಯಜ್ಞಮಾಡುತ್ತಾರೆ 29 ೨೯ ನನ್ನ ಅಣ್ಣನು ಅದಕ್ಕಾಗಿ ನನ್ನನ್ನು ಕರೆದಿದ್ದಾನೆ. ದಯವಿಟ್ಟು ನನಗೆ ಅಪ್ಪಣೆಕೊಡು ನಾನು ಹೋಗಿ ನನ್ನ ಅಣ್ಣಂದಿರನ್ನು ನೋಡಿ ಬರುತ್ತೇನೆ’ ಎಂದು ನನ್ನನ್ನು ಬಹಳವಾಗಿ ಬೇಡಿಕೊಂಡು ಹೋದನು. ಆದ್ದರಿಂದ ಅವನು ಅರಸನ ಪಂಕ್ತಿಗೆ ಬರಲಿಲ್ಲ” ಎಂದು ಉತ್ತರಕೊಟ್ಟನು. 30 ೩೦ ಆಗ ಸೌಲನು ಬಹಳವಾಗಿ ಕೋಪಗೊಂಡು ಯೋನಾತಾನನಿಗೆ, “ಎಲೈ ದುಷ್ಟ ದಾಸಿಯ ಮಗನೇ, ನೀನು ಇಷಯನ ಮಗನೊಡನೆ ಸ್ನೇಹದಿಂದಿರುವುದು ನನಗೆ ಗೊತ್ತಿಲ್ಲವೋ? ಇದರಿಂದ ನಿನಗೂ, ನಿನ್ನನ್ನು ಹೆತ್ತವಳಿಗೂ ಮಾನಭಂಗವಾಗುವುದು. 31 ೩೧ ಆ ಇಷಯನ ಮಗನು ಭೂಲೋಕದಲ್ಲಿರುವವರೆಗೆ ನಿನಗಾದರೂ, ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ. ಆದುದರಿಂದ ಅವನನ್ನು ಕರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ. ಅವನು ಸಾಯಬೇಕು” ಅಂದನು. 32 ೩೨ ಅದಕ್ಕೆ ಯೋನಾತಾನನು, “ಅವನು ಯಾಕೆ ಸಾಯಬೇಕು? ಅವನು ಏನು ಮಾಡಿದನು?” ಎಂದು ತನ್ನ ತಂದೆಯನ್ನು ಕೇಳಿದನು. 33 ೩೩ ಕೂಡಲೆ ಸೌಲನು ಅವನನ್ನು ತಿವಿಯಬೇಕೆಂದು ಈಟಿಯನ್ನೆಸೆದನು. ತನ್ನ ತಂದೆಯು ದಾವೀದನನ್ನು ಕೊಲ್ಲುವುದಕ್ಕೆ ನಿಶ್ಚಯಿಸಿದ್ದಾನೆಂಬುದು ಯೋನಾತಾನಾನಿಗೆ ಗೊತ್ತಾಗಲು 34 ೩೪ ಅವನು ಬಲು ಸಿಟ್ಟುಗೊಂಡು ಪಂಕ್ತಿಯಿಂದೆದ್ದು ಹೋದನು. ತನ್ನ ತಂದೆಯು ದಾವೀದನನ್ನು ಅಪಮಾನಪಡಿಸಿದ್ದರಿಂದ ಯೋನಾತಾನನಿಗೆ ಬಹಳ ದುಃಖವುಂಟಾಗಿ ಅವನು ಆ ದಿನ ಊಟಮಾಡಲೇ ಇಲ್ಲ. 35 ೩೫ ಅವನು ಮರುದಿನ ಬೆಳಿಗ್ಗೆ ಒಬ್ಬ ಹುಡುಗನನ್ನು ಕರೆದುಕೊಂಡು ದಾವೀದನನ್ನು ನೋಡುವುದಕ್ಕಾಗಿ ಹೊಲಕ್ಕೆ ಹೋಗಿ, 36 ೩೬ ಹುಡುಗನಿಗೆ, “ಬೇಗ ಹೋಗಿ ನಾನು ಎಸೆದ ಬಾಣಗಳನ್ನು ಕೂಡಿಸಿಕೊಂಡು ಬಾ” ಎಂದು ಹೇಳಿದನು. ಆ ಹುಡುಗನು ಹೋಗುತ್ತಿರುವಾಗ ಯೋನಾತಾನನು ಬಾಣವನ್ನು ಅವನ ಆಚೆಗೆ ಎಸೆದನು. 37 ೩೭ ಹುಡುಗನು ಬಾಣ ಬಿದ್ದ ಸ್ಥಳಕ್ಕೆ ಬಂದಾಗ ಯೋನಾತಾನನು ಅವನಿಗೆ, “ಬಾಣವು ನಿನ್ನ ಆಚೆ ಬಿದ್ದಿತಲ್ಲಾ 38 ೩೮ ಬೇಗ ಹೋಗು ನಿಲ್ಲಬೇಡ” ಎಂದು ಕೂಗಿ ಹೇಳಿದನು. ಹುಡುಗನು ಬಾಣಗಳನ್ನು ಕೂಡಿಸಿಕೊಂಡು ಯಜಮಾನನ ಬಳಿಗೆ ಬಂದನು. 39 ೩೯ ಇದರ ರಹಸ್ಯವು ಯೋನಾತಾನ ದಾವೀದರಿಗೆ ತಿಳಿದಿತ್ತೇ ಹೊರತು ಆ ಹುಡುಗನಿಗೆ ಗೊತ್ತಿರಲಿಲ್ಲ. 40 ೪೦ ಯೋನಾತಾನನು ತನ್ನ ಆಯುಧಗಳನ್ನು ಹುಡುಗನ ಕೈಯಲ್ಲಿ ಕೊಟ್ಟು ಅವನಿಗೆ, “ಅವುಗಳನ್ನು ಊರಿಗೆ ತೆಗೆದುಕೊಂಡು ಹೋಗು” ಎಂದು ಹೇಳಿದನು. 41 ೪೧ ಹುಡುಗನು ಹೋಗುತ್ತಲೇ ದಾವೀದನು ಕಲ್ಲುಕುಪ್ಪೆಯ ಬಳಿಯಿಂದ ಎದ್ದುಬಂದು ಮೂರು ಸಾರಿ ಸಾಷ್ಟಾಂಗವಾಗಿ ಯೋನಾತಾನನನ್ನು ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು ಅತ್ತರು. ದಾವೀದನು ಬಹಳವಾಗಿ ಅತ್ತನು. 42 ೪೨ ಅನಂತರ ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವಲ್ಲಾ. ಆತನೇ ನನಗೂ ನಿನಗೂ, ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಸದಾ ಸಾಕ್ಷಿಯಾಗಿರಲಿ” ಎಂದು ಹೇಳಿದನು. ತರುವಾಯ ದಾವೀದನು ಹೊರಟುಹೋದನು. ಯೋನಾತಾನನು ಊರೊಳಕ್ಕೆ ಹೋದನು.

< ಸಮುವೇಲನು - ಪ್ರಥಮ ಭಾಗ 20 >