< ಸಮುವೇಲನು - ಪ್ರಥಮ ಭಾಗ 1 >

1 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ರಾಮಾತಯಿಮ್ ಚೋಫೀಮ್ ಊರಿನಲ್ಲಿ ಎಲ್ಕಾನನೆಂಬ ಒಬ್ಬ ಮನುಷ್ಯನಿದ್ದನು. ಇವನು ಯೆರೋಹಾಮನ ಮಗನೂ ಎಲೀಹುವಿನ ಮೊಮ್ಮಗನೂ ತೋಹುವಿನ ಮರಿಮಗನೂ ಆಗಿದ್ದನು. ತೋಹು ಎಂಬವನು ಎಫ್ರಾಯೀಮ್ಯನಾದ ಚೂಫನ ಮಗನು. 2 ಎಲ್ಕಾನನಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲನೆಯವಳು ಹನ್ನಳು, ಎರಡನೆಯವಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದ್ದರು; ಹನ್ನಳಿಗೆ ಮಕ್ಕಳಿರಲಿಲ್ಲ. 3 ಅವನು ಪ್ರತಿವರ್ಷವೂ ಸೇನಾಧೀಶ್ವರನಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸಿ ಆತನನ್ನು ಆರಾಧಿಸುವುದಕ್ಕೋಸ್ಕರ ತನ್ನ ಊರಿನಿಂದ ಶೀಲೋವಿಗೆ ಹೋಗುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ್ ಎಂಬವರು ಯೆಹೋವನ ಯಾಜಕರಾಗಿದ್ದರು. 4 ಎಲ್ಕಾನನು ಯಜ್ಞವನ್ನರ್ಪಿಸಿದಾಗೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲಾ ಗಂಡು ಹೆಣ್ಣುಮಕ್ಕಳಿಗೂ ಭಾಗಗಳನ್ನು ಕೊಡುತ್ತಿದ್ದನು. 5 ಅವನು ಹನ್ನಳನ್ನು ಬಹಳವಾಗಿ ಪ್ರೀತಿಸಿದರೂ, ಯೆಹೋವನು ಆಕೆಯ ಗರ್ಭವನ್ನು ಮುಚ್ಚಿದ್ದರಿಂದ ಅವನು ಆಕೆಗೆ ಎರಡು ಭಾಗವನ್ನು ಕೊಡುತ್ತಿದ್ದನು. 6 ಇದಲ್ಲದೆ ಆಕೆಯ ಸವತಿಯಾದ ಪೆನಿನ್ನಳು, “ಯೆಹೋವನು ನಿನ್ನನ್ನು ಬಂಜೆಯನ್ನಾಗಿ ಮಾಡಿದ್ದಾನೆ” ಎಂದು ಹೇಳಿ ಆಕೆಯನ್ನು ಕೆಣಕಿ ನೋಯಿಸುತ್ತಿದ್ದಳು. 7 ಅವರು ಪ್ರತಿವರ್ಷವೂ ಕುಟುಂಬವಾಗಿ ಯೆಹೋವನ ಮಂದಿರಕ್ಕೆ ಹೋದಾಗೆಲ್ಲಾ ಪೆನಿನ್ನಳು ಆಕೆಯನ್ನು ಕೆಣಕುತ್ತಿದ್ದುದರಿಂದ ಹನ್ನಳು ಊಟ ಮಾಡದೆ ಅಳುತ್ತಾ ಇದ್ದಳು. 8 ಆಗ ಆಕೆಯ ಗಂಡನಾದ ಎಲ್ಕಾನನು ಆಕೆಗೆ “ಹನ್ನಾ, ಏಕೆ ಅಳುತ್ತೀ? ಊಟ ಮಾಡದಿರುವುದಕ್ಕೆ ಕಾರಣವೇನು? ನೀನು ವ್ಯಸನಪಡುವುದೇಕೆ? ನಾನು ನಿನಗೆ ಹತ್ತು ಮಂದಿ ಗಂಡು ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಅಂದನು. 9 ಅವರು ಶೀಲೋವಿನಲ್ಲಿದ್ದ ಒಂದು ಸಂದರ್ಭದಲ್ಲಿ, ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ, ಹನ್ನಳು ಎದ್ದು ಯೆಹೋವನ ಮಂದಿರಕ್ಕೆ ಹೋದಳು. ಯಾಜಕನಾದ ಏಲಿಯು ಮಂದಿರದ್ವಾರದ ನಿಲುವುಗಳ ಬಳಿಯಲ್ಲಿದ್ದ ತನ್ನ ಪೀಠದ ಮೇಲೆ ಕುಳಿತ್ತಿದ್ದನು. 10 ೧೦ ಹನ್ನಳು ಬಹುದುಃಖದಿಂದ ಕಣ್ಣೀರು ಸುರಿಸುತ್ತಾ ಯೆಹೋವನಿಗೆ, 11 ೧೧ “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನಿನ್ನ ದಾಸಿಯನ್ನು ಮರೆಯದೆ ನನ್ನನ್ನು ನೆನಪಿಸಿಕೊಂಡು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ಅವನನ್ನು ನಿನಗೆ ಪ್ರತಿಷ್ಠಿಸುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಮುಟ್ಟಗೊಡುವುದಿಲ್ಲ” ಎಂದು ಪ್ರಾರ್ಥಿಸಿ ಹರಕೆಮಾಡಿದಳು. 12 ೧೨ ಆಕೆಯು ಬಹಳ ಹೊತ್ತಿನ ವರೆಗೆ ಯೆಹೋವನ ಮುಂದೆ ಪ್ರಾರ್ಥನೆಮಾಡುತ್ತಿರುವಾಗ ಏಲಿಯು ಆಕೆಯ ಬಾಯನ್ನೇ ನೋಡುತ್ತಿದ್ದನು. 13 ೧೩ ಆಕೆ ತನ್ನ ಹೃದಯದಲ್ಲಿ ಪ್ರಾರ್ಥಿಸುತ್ತಿದ್ದರಿಂದ ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು; ಶಬ್ದ ಕೇಳಿಸುತ್ತಿರಲಿಲ್ಲ. ಆದ್ದರಿಂದ ಆಕೆಯು ಮದ್ಯಪಾನಮಾಡಿದ್ದಾಳೆಂದು ತಿಳಿದು 14 ೧೪ ಏಲಿಯು, “ನಿನ್ನ ಕುಡಿತದ ಅಮಲು ಇನ್ನೂ ಇಳಿಯಲಿಲ್ಲವೇ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟು ಹೋಗಲಿ” ಅಂದನು. 15 ೧೫ ಅದಕ್ಕೆ ಹನ್ನಳು “ಸ್ವಾಮೀ, ಹಾಗಲ್ಲ; ನಾನು ಬಹು ದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮದ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. 16 ೧೬ ನಿನ್ನ ದಾಸಿಯಾದ ನನ್ನನ್ನು ಅಯೋಗ್ಯಳೆಂದು ನೆನಸಬೇಡ; ಈವರೆಗೆ ನನ್ನ ಹೆಚ್ಚಾದ ಚಿಂತೆಯನ್ನೂ, ವ್ಯಥೆಯನ್ನೂ ಅರಿಕೆಮಾಡಿಕೊಳ್ಳುತ್ತಿದ್ದೆನು” ಎಂದು ಹೇಳಿದಳು. 17 ೧೭ ಆಗ ಏಲಿಯು ಆಕೆಗೆ, “ಸಮಾಧಾನದಿಂದ ಹೋಗು; ಇಸ್ರಾಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಎಂದನು. 18 ೧೮ ಹನ್ನಳು ಏಲಿಗೆ, “ನಿನ್ನ ದಾಸಿಯ ಮೇಲೆ ಕಟಾಕ್ಷವಿರಲಿ” ಎಂದು ಹೇಳಿ ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮುಖದಲ್ಲಿ ದುಃಖವು ಕಾಣಲಿಲ್ಲ. 19 ೧೯ ಅವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ ರಾಮದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳೊಂದಿಗೆ ಸಂಗಮಿಸಲು, ಯೆಹೋವನು ಆಕೆಯ ಪ್ರಾರ್ಥನೆಯನ್ನು ಪರಿಗಣಿಸಿದ್ದರಿಂದ ಆಕೆಯು ಗರ್ಭಿಣಿಯಾದಳು. 20 ೨೦ ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. 21 ೨೧ ಎಲ್ಕಾನನು ಎಂದಿನಂತೆ ಕುಟುಂಬ ಸಹಿತವಾಗಿ ಯೆಹೋವನಿಗೆ ವಾರ್ಷಿಕಯಜ್ಞವನ್ನು ಅರ್ಪಿಸಿ ಹರಕೆಸಲ್ಲಿಸಬೇಕೆಂದು ಶೀಲೋವಿಗೆ ಹೋಗುವುದಕ್ಕೆ ಸಿದ್ಧನಾಗಲು ಹನ್ನಳು 22 ೨೨ “ಮಗನು ಮೊಲೆಬಿಡುವ ವರೆಗೂ ನಾನು ಬರುವುದಿಲ್ಲ; ಅವನು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಯಾವಾಗಲೂ ಅಲ್ಲಿಯೇ ಇರುವ ಹಾಗೆ ಅವನನ್ನು ಕರೆದುಕೊಂಡು ಬರುವೆನು” ಎಂದು ಹೇಳಿದಳು. 23 ೨೩ ಆಕೆಯ ಗಂಡನಾದ ಎಲ್ಕಾನನು ಆಕೆಗೆ “ನಿನಗೆ ಸರಿತೋರುವ ಹಾಗೆ ಆಗಲಿ; ಮಗನು ಮೊಲೆಬಿಡುವವರೆಗೆ ಇರು. ಯೆಹೋವನು ತನ್ನ ವಾಕ್ಯವನ್ನು ದೃಢಪಡಿಸಲಿ” ಅಂದನು. ಮಗನು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಸಾಕಿದಳು. 24 ೨೪ ಅನಂತರ ಆಕೆಯು ಮೂರು ವರ್ಷದ ಒಂದು ಹೋರಿಯನ್ನೂ, ಒಂದು ಏಫಾ ಹಿಟ್ಟನ್ನೂ, ಒಂದು ತಿತ್ತಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಪುತ್ರನೊಂದಿಗೆ ಶೀಲೋವಿನಲ್ಲಿದ್ದ ಯೆಹೋವನ ಮಂದಿರಕ್ಕೆ ಬಂದಳು. ಮಗನು ಇನ್ನೂ ಚಿಕ್ಕವನಾಗಿದ್ದನು. 25 ೨೫ ಅವರು ಹೋರಿಯನ್ನು ಯಜ್ಞಮಾಡಿದ ಮೇಲೆ ಮಗನನ್ನು ಏಲಿಯ ಬಳಿಗೆ ಕರೆದುಕೊಂಡು ಬಂದರು. 26 ೨೬ ಹನ್ನಳು ಏಲಿಗೆ “ಸ್ವಾಮೀ, ನಿನ್ನ ಜೀವದಾಣೆ; ಮೊದಲು ಯೆಹೋವನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ, ಇಲ್ಲಿ ನಿನ್ನ ಹತ್ತಿರ ನಿಂತಿದ್ದ ಸ್ತ್ರೀಯು ನಾನೇ. 27 ೨೭ ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; 28 ೨೮ ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು” ಎಂದು ಹೇಳಿದಳು. ಆ ಮೇಲೆ ಅವರು ಶಿಲೋವಿನಲ್ಲಿ ಯೆಹೋವನನ್ನು ಆರಾಧಿಸಿದರು.

< ಸಮುವೇಲನು - ಪ್ರಥಮ ಭಾಗ 1 >