< ಅರಸುಗಳು - ಪ್ರಥಮ ಭಾಗ 7 >

1 ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
2 ಅವನು ಕಟ್ಟಿಸಿದ ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರವು ನೂರು ಮೊಳ ಉದ್ದ, ಐವತ್ತು ಮೊಳ ಅಗಲ ಮತ್ತು ಮೂವತ್ತು ಮೊಳ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳೂ, ಅವುಗಳ ಮೇಲೆ ಇಡಲ್ಪಟ್ಟ ದೇವದಾರಿನ ತೊಲೆಗಳೂ ಅದಕ್ಕೆ ಆಧಾರವಾಗಿದ್ದವು.
ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು.
3 ಸ್ತಂಭಗಳ ಮೇಲಿರುವ ತೊಲೆಗಳ ಮೇಲೆ ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು. ಸ್ತಂಭಗಳು ಪ್ರತಿಯೊಂದು ಸಾಲಿನಲ್ಲಿ ಹದಿನೈದರಂತೆ ಒಟ್ಟು ನಲ್ವತ್ತೈದು ಇದ್ದವು.
ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು.
4 ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕಿನ ಕಿಟಕಿಗಳಿದ್ದವು
ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು.
5 ಎಲ್ಲಾ ದ್ವಾರಗಳೂ, ಬೆಳಕಿನ ಕಿಟಕಿಗಳೂ ಚತುಷ್ಕೋಣದ ಆಕಾರವುಳ್ಳವುಗಳಾಗಿದ್ದವು. ಮೂರು ಮೂರು ಸಾಲು ಬೆಳಕಿನ ಕಿಟಕಿಗಳು ಎದುರುಬದುರಾಗಿದ್ದವು.
ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.
6 ಇದಲ್ಲದೆ ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ ಐವತ್ತು ಮೊಳ, ಅಗಲ ಮೂವತ್ತು ಮೊಳ. ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು. ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.
22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.
7 ಇದಲ್ಲದೆ ಅವನು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಅಲ್ಲಿ ನ್ಯಾಯತೀರ್ಮಾನ ಮಾಡುತ್ತಿದ್ದರಿಂದ ಅದಕ್ಕೆ ನ್ಯಾಯಮಂದಿರವೆಂತಲೂ ಹೆಸರಾಯಿತು. ಇದರ ಎಲ್ಲಾ ಗೋಡೆಗಳೂ ನೆಲದಿಂದ ಮಾಳಿಗೆಯ ವರೆಗೆ ದೇವದಾರು ಮರದ ಹಲಿಗೆಗಳಿಂದ ಹೊದಿಸಲ್ಪಟ್ಟಿದ್ದವು.
ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು.
8 ನ್ಯಾಯಮಂದಿರದ ಹಿಂದಿನ ಪ್ರಾಕಾರದಲ್ಲಿ ತನ್ನ ವಾಸಕ್ಕಾಗಿ ಅರಮನೆಯನ್ನೂ, ತನ್ನ ಹೆಂಡತಿಯಾದ ಫರೋಹನ ಮಗಳಿಗೋಸ್ಕರ ಇನ್ನೊಂದು ಮನೆಯನ್ನು ಕಟ್ಟಿಸಿದನು. ಅದನ್ನು ನ್ಯಾಯಮಂದಿರದ ಹಾಗೆಯೇ ಇವುಗಳನ್ನು ಕಟ್ಟಿಸಿದನು.
ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.
9 ಈ ಎಲ್ಲಾ ಮಂದಿರಗಳನ್ನೂ ಅವುಗಳ ಸುತ್ತು ಗೋಡೆಯನ್ನೂ, ದೊಡ್ಡ ಪ್ರಾಕಾರದ ಸುತ್ತು ಗೋಡೆಯನ್ನೂ, ಅಸ್ತಿವಾರದ ಮೇಲಣಿಂದ ಕಡೇ ವರಸೆಯವರೆಗೆ ಅಳತೆಯ ಮೇರೆಗೆ ಕೆತ್ತಲ್ಪಟ್ಟ ಎರಡು ಮಗ್ಗುಲಿಗೂ ಗರಗಸದಿಂದ ಕೊಯ್ಯಲ್ಪಟ್ಟಂಥ ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು.
ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು.
10 ೧೦ ಅಸ್ತಿವಾರಕ್ಕೆ ಹಾಕಿದ ಶ್ರೇಷ್ಠವಾದ ದೊಡ್ಡ ಕಲ್ಲುಗಳು ಎಂಟು ಮೊಳ ಹಾಗೂ ಹತ್ತು ಮೊಳ ಉದ್ದವಾಗಿದ್ದವು.
ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು.
11 ೧೧ ಅಸ್ತಿವಾರದ ಮೇಲಣ ಭಾಗಕ್ಕೆ ಅಳತೆಯ ಮೇರೆಗೆ ಕೆತ್ತಿದ ಶ್ರೇಷ್ಠವಾದ ಕಲ್ಲುಗಳನ್ನೂ, ದೇವದಾರಿನ ಮರವನ್ನೂ ಉಪಯೋಗಿಸಿದನು.
ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು.
12 ೧೨ ಒಳಗಿನ ಪ್ರಾಕಾರವೆನ್ನಿಸಿಕೊಳ್ಳುವ ಯೆಹೋವನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ, ಒಂದು ಸಾಲು ದೇವದಾರಿನ ಮರದ ಕಂಬಗಳೂ ಇದ್ದವು.
ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು.
13 ೧೩ ಅರಸನಾದ ಸೊಲೊಮೋನನು ತೂರ್ ಪಟ್ಟಣದಿಂದ ಹೀರಾಮ್ ಎಂಬುವನನ್ನು ಕರೆಯಿಸಿದನು.
ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.
14 ೧೪ ಅವನು ನಫ್ತಾಲಿ ಕುಲದ ಒಬ್ಬ ವಿಧವೆಯಲ್ಲಿ ತೂರ್ ಪಟ್ಟಣದ ಒಬ್ಬ ಕಂಚುಗಾರನಿಗೆ ಹುಟ್ಟಿದವನು. ಜಾಣನೂ, ತಾಮ್ರದ ಕೆಲಸದಲ್ಲಿ ನಿಪುಣನೂ, ಅನುಭವಶಾಲಿಯೂ ಆಗಿದ್ದ ಅವನು ಅರಸನ ಬಳಿಗೆ ಬಂದು ಅರಸನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿದನು.
ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.
15 ೧೫ ಅವನು ಎರಡು ತಾಮ್ರದ ಕಂಬಗಳನ್ನು ಮಾಡಿದನು. ಅವು ಹದಿನೆಂಟು ಮೊಳ ಎತ್ತರವಿದ್ದವು. ಅವುಗಳ ಸುತ್ತಳತೆಯು ಹನ್ನೆರಡು ಮೊಳ.
ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು.
16 ೧೬ ಇದಲ್ಲದೆ ಅವನು ತಾಮ್ರವನ್ನು ಎರಕ ಹೊಯ್ದು ಕಂಬಗಳ ಮೇಲೆ ಇಡುವುದಕ್ಕೊಸ್ಕರ ಐದೈದು ಮೊಳ ಎತ್ತರವಾದ ಎರಡು ಕುಂಭಗಳನ್ನೂ,
ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು.
17 ೧೭ ಒಂದೊಂದಕ್ಕೆ ಏಳೇಳರಂತೆ ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ತಾಮ್ರದ ಸರಿಗೆಯ ಜಾಲರಿಗಳನ್ನೂ ಮಾಡಿದನು.
ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು.
18 ೧೮ ಇದಲ್ಲದೆ ಅವನು ತಾಮ್ರದ ದಾಳಿಂಬೆಹಣ್ಣುಗಳನ್ನು ಮಾಡಿ, ಅವುಗಳನ್ನು ಕಂಬಗಳ ಮೇಲಣ ಪ್ರತಿಯೊಂದು ಕುಂಭದ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.
ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು.
19 ೧೯ ಕಂಬಗಳ ಮೇಲಿರುವ ಕುಂಭಗಳ ಒಡಲು ನಾಲ್ಕು ಮೊಳಗಳವರೆಗೆ ಕಮಲದ ಆಕಾರ ಉಳ್ಳದ್ದಾಗಿತ್ತು.
ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು.
20 ೨೦ ಆ ಕುಂಭಗಳ ಮೇಲಿರುವ ಭಾಗದಲ್ಲಿ ಒಡಲಿನ ಸುತ್ತಲೂ ಜಾಲರಿಯ ಹೊರಗೆ ದಾಳಿಂಬೆ ಹಣ್ಣಿನ ಆಕಾರವುಳ್ಳ ಗುಂಡುಗಳಿದ್ದವು. ಪ್ರತಿಯೊಂದು ಕುಂಭದ ಸುತ್ತಲೂ ಇನ್ನೂರು ಗುಂಡುಗಳನ್ನು ಸಾಲಾಗಿ ಸಿಕ್ಕಿಸಿದನು.
ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.
21 ೨೧ ತರುವಾಯ ಅವನು ಆ ಎರಡು ಕಂಬಗಳನ್ನೂ ದೇವಾಲಯದ ಮಂಟಪದ ಬಳಿಯಲ್ಲಿ ನಿಲ್ಲಿಸಿ, ಬಲಗಡೆಯ ಕಂಬಕ್ಕೆ ಯಾಕೀನ್ ಎಂದೂ, ಎಡಗಡೆಯ ಕಂಬಕ್ಕೆ ಬೋವಜ್ ಎಂದು ಹೆಸರಿಟ್ಟನು.
ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
22 ೨೨ ಅವನು ಕಂಬಗಳ ಮೇಲೆ ಕಮಲಾಕಾರವನ್ನು ಮಾಡಿ ಅವುಗಳ ಕೆಲಸವನ್ನು ತೀರಿಸಿದನು.
ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.
23 ೨೩ ಅನಂತರ ಹೀರಾಮನು ಸಮುದ್ರ ಎನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿದನು. ಅದರ ಬಾಯಿ‍ ಚಂದ್ರಾಕಾರವಾಗಿಯೂ, ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ ಮತ್ತು ಸುತ್ತಳತೆ ಮೂವತ್ತು ಮೊಳ.
ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು.
24 ೨೪ ಅದನ್ನು ಎರಕ ಹೊಯ್ಯುವಾಗ ಅದರ ಅಂಚಿನ ಕೆಳಗೆ ಸುತ್ತಲೂ ಹತ್ತತ್ತು ಮೊಳ ಉದ್ದವಾದ ಬಳ್ಳಿಗಳನ್ನು ಎರಡು ಸಾಲಾಗಿ ಎರಕ ಹೊಯ್ದಿದ್ದನು.
ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.
25 ೨೫ ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.
ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
26 ೨೬ ಪಾತ್ರೆಯು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲದ ಆಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಎರಡು ಸಾವಿರ ಬಾನೆಗಳಷ್ಟು ನೀರು ಹಿಡಿಯುತ್ತಿತ್ತು.
ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
27 ೨೭ ಇದಲ್ಲದೆ ಅವನು ಹತ್ತು ತಾಮ್ರದ ಪೀಠಗಳನ್ನು ಮಾಡಿದನು. ಪ್ರತಿಯೊಂದು ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ, ಮೂರು ಮೊಳ ಎತ್ತರ ಇತ್ತು.
ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು.
28 ೨೮ ಅವುಗಳನ್ನು ಮಾಡಿದ ವಿಧಾನ ಹೇಗೆಂದರೆ, ಅವುಗಳಲ್ಲಿ ನಿಲುವು ಪಟ್ಟಿಗಳಿಂದ ಕೂಡಿದ ಅಡ್ಡಪಟ್ಟಿಗಳಿದ್ದವು.
ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು.
29 ೨೯ ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ ಮತ್ತು ಕೆರೂಬಿ ಇವುಗಳ ಚಿತ್ರಗಳಿದ್ದವು. ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು. ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣ ಚಿತ್ರಗಳಿದ್ದವು.
ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.
30 ೩೦ ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕ ಹೊಯ್ದ ತಾಮ್ರದ ಹಿಡಿಗಳಿದ್ದವು. ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣ ಚಿತ್ರಗಳಿದ್ದವು.
ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.
31 ೩೧ ಗಂಗಾಳವನ್ನು ಇಡುವುದಕ್ಕೋಸ್ಕರ ಪೀಠದ ಮೇಲಣ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿತ್ತು. ಚಕ್ರಾಕಾರವಾಗಿರುವ ಈ ಬಾಯಿಯು ಒಂದುವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚೌಕಾಕಾರವಾಗಿದ್ದವು.
ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.
32 ೩೨ ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗಿದ್ದವು. ತಿರುಗೋಲು ಮತ್ತು ಪೀಠವು ಅಖಂಡವಾಗಿದ್ದವು. ಪ್ರತಿಯೊಂದು ಗಾಲಿಯು ಒಂದುವರೆ ಮೊಳ ಎತ್ತರವಿತ್ತು.
ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.
33 ೩೩ ಅವು ಸಾಧಾರಣವಾದ ಬಂಡಿಗಳ ಗಾಲಿಗಳಂತೆಯೇ ಇದ್ದವು. ಆದರೆ ಅವುಗಳ ಕಟ್ಟು, ಅರ, ಕುಂಭ ಇವುಗಳಿಗೆ ಸಂಬಂಧಪಟ್ಟ ತಿರುಗೋಲು ತಾಮ್ರದವುಗಳು.
ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.
34 ೩೪ ಪ್ರತಿಯೊಂದು ಪೀಠದ ತುದಿಯಲ್ಲಿದ್ದ ನಾಲ್ಕು ಹಿಡಿಗಳು ಪೀಠದೊಡನೆ ಅಖಂಡವಾಗಿದ್ದವು.
ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು.
35 ೩೫ ಪೀಠದ ಮೇಲಣ ಭಾಗದಲ್ಲಿದ್ದ ಚಕ್ರಾಕಾರವಾದ ಬಾಯಿಯು ಅರ್ಧ ಮೊಳ ಎತ್ತರವಾಗಿತ್ತು. ಪೀಠದ ಮೇಲಿನ ಭಾಗದಲ್ಲಿದ್ದ ಹಿಡಿಗಳೂ ಅಡ್ಡ ಪಟ್ಟಿಗಳೂ ಅದರೊಡನೆ ಅಖಂಡವಾಗಿದ್ದವು.
ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು.
36 ೩೬ ಅಡ್ಡಪಟ್ಟಿಗಳಿಗೂ ಹಿಡಿಗಳ ಹೊರಮೈಗೂ ಸ್ಥಳವಿದ್ದ ಕಡೆಗೆ ಕೆರೂಬಿ, ಸಿಂಹ, ಖರ್ಜೂರವೃಕ್ಷ ಇವುಗಳ ಚಿತ್ರಗಳನ್ನೂ ಈ ಚಿತ್ರಗಳ ಸುತ್ತಲೂ ತೋರಣ ಚಿತ್ರಗಳನ್ನೂ ಮಾಡಿಸಿದನು.
ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.
37 ೩೭ ಲೋಹಗಳನ್ನು ಒಂದೇ ಸಾರಿ ಕರಗಿಸಿ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳ ಆಕಾರವು ಅಳತೆಯೂ ಒಂದೇಯಾಗಿತ್ತು.
ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.
38 ೩೮ ಇದಲ್ಲದೆ ಅವನು ನಲ್ವತ್ತು ಬತ್ ನೀರು ಹಿಡಿಯುವ ನಾಲ್ಕು ಮೊಳ ಅಗಲವಾದ ಹತ್ತು ಗಂಗಾಳಗಳನ್ನು ಮಾಡಿ, ಪ್ರತಿಯೊಂದು ಪೀಠದ ಮೇಲೆ ಒಂದೊಂದನ್ನು ಇಟ್ಟನು.
ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.
39 ೩೯ ಐದು ಪೀಠಗಳನ್ನು ದೇವಾಲಯದ ಬಲಗಡೆಯಲ್ಲಿಯೂ, ಐದು ಪೀಠಗಳನ್ನು ಎಡಗಡೆಯಲ್ಲಿಯೂ ಇಟ್ಟನು. ಸಮುದ್ರವೆನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿರಿಸಿದನು.
ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು.
40 ೪೦ ಇದಲ್ಲದೆ ಹೀರಾಮನು ಬಟ್ಟಲುಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ ಮಾಡಿದನು. ಅವನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಹೀರಾಮನು ಮಾಡಿಸಿದ ಒಟ್ಟು ಸಾಮಾನುಗಳ ಪಟ್ಟಿ.
ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
41 ೪೧ ಎರಡು ಕಂಬಗಳು ಅವುಗಳ ಮೇಲಿನ ಎರಡು ಕುಂಭಗಳು, ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ಎರಡು ಜಾಲರಿಗಳು
ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
42 ೪೨ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬಹಣ್ಣುಗಳು,
ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,
43 ೪೩ ಹತ್ತು ಪೀಠಗಳು, ಅವುಗಳ ಮೇಲಿದ್ದ ಹತ್ತು ಗಂಗಾಳಗಳು,
ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,
44 ೪೪ ಸಮುದ್ರವೆನಿಸಿಕೊಳ್ಳುವ ಪಾತ್ರೆಯೂ, ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
45 ೪೫ ಹಂಡೆ, ಸಲಿಕೆ ಬೋಗುಣಿಗಳು ಇವೇ. ಹೀರಾಮನು ಅರಸನಾದ ಸೊಲೊಮೋನನ ಅಪ್ಪಣೆಯಂತೆ ಯೆಹೋವನ ಆಲಯಕ್ಕೋಸ್ಕರ ಈ ಎಲ್ಲಾ ಸಾಮಾನುಗಳನ್ನು ರುಜುವಾತು ಪಡಿಸಿ ತಾಮ್ರದಿಂದ ಮಾಡಿಸಿದನು.
ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು.
46 ೪೬ ಅರಸನು ಯೊರ್ದನಿನ ತಗ್ಗಿನಲ್ಲಿ ಸುಕ್ಕೋತಿಗೂ ಮತ್ತು ಚಾರೆತಾನಿಗೂ ಮಧ್ಯದಲ್ಲಿರುವ ಜೇಡಿ ಮಣ್ಣು ಇರುವ ನೆಲದಲ್ಲಿ ಎರಕ ಹೊಯ್ಯಿಸಿದನು.
ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
47 ೪೭ ಸೊಲೊಮೋನನು ತಾನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದರಿಂದ ಅವುಗಳ ತಾಮ್ರದ ತೂಕವು ಎಷ್ಟೆಂಬುದನ್ನು ಗೊತ್ತುಮಾಡಲಾಗಲ್ಲಿಲ್ಲ.
ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
48 ೪೮ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವುವೆಂದರೆ - ಬಂಗಾರದ ಧೂಪವೇದಿಯು ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,
ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,
49 ೪೯ ಮಹಾಪರಿಶುದ್ಧಸ್ಥಳದ ಎದುರಿಗೆ ಎಡಗಡೆಯಲ್ಲಿಯೂ, ಬಲಗಡೆಯಲ್ಲಿಯೂ ಇಡುವುದಕ್ಕಾಗಿ ಐದೈದರಂತೆ ಇಡುವುದಕ್ಕೋಸ್ಕರ ಚೊಕ್ಕ ಬಂಗಾರದಿಂದ ಮಾಡಿದ ಪುಷ್ಪಾಲಂಕಾರವುಳ್ಳ ಹತ್ತು ದೀಪಸ್ತಂಭಗಳು, ಬಂಗಾರದ ಹಣತೆ, ಇಕ್ಕಳಗಳು, ಚೊಕ್ಕ ಬಂಗಾರದ ಬಟ್ಟಲುಗಳು,
ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ, ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,
50 ೫೦ ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು ಅಗ್ಗಿಷ್ಟಿಕೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದ ಬಾಗಿಲುಗಳಿಗೂ
ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.
51 ೫೧ ಪರಿಶುದ್ಧಸ್ಥಳದ ಬಾಗಿಲುಗಳಿಗೂ ಇರುವ ಬಂಗಾರದ ತಿರುಗುಣಿಗಳು ಇವುಗಳೇ. ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದ ನಂತರ ತನ್ನ ತಂದೆಯಾದ ದಾವೀದನು ಯೆಹೋವನಿಗೆ ಹರಕೆಹೊತ್ತು ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಮತ್ತು ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.
ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.

< ಅರಸುಗಳು - ಪ್ರಥಮ ಭಾಗ 7 >