< ಅರಸುಗಳು - ಪ್ರಥಮ ಭಾಗ 4 >

1 ಸೊಲೊಮೋನ ರಾಜನು ಎಲ್ಲಾ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು. 2 ಅವನ ಮುಖ್ಯ ಉದ್ಯೋಗಸ್ಥರು ಯಾರಾರೆಂದರೆ: ಚಾದೋಕನ ಮಗನಾದ ಅಜರ್ಯನು ಯಾಜಕನು. 3 ಶೀಷನ ಮಕ್ಕಳಾದ ಎಲೀಹೋರೇಫ್ ಮತ್ತು ಅಹೀಯಾಹು ಎಂಬುವರು ಲೇಖಕರು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಮಂತ್ರಿಯು. 4 ಯೆಹೋಯಾದಾವನ ಮಗನಾದ ಬೆನಾಯನು ಸೈನ್ಯಾಧಿಪತಿ. ಚಾದೋಕನೂ ಮತ್ತು ಎಬ್ಯಾತಾರನೂ ಯಾಜಕರು. 5 ನಾತಾನನ ಮಗನಾದ ಅಜರ್ಯನು ದೇಶಾಧಿಪತಿಗಳ ಮುಖ್ಯಸ್ಥನು. ನಾತಾನನ ಮಗನಾದ ಜಾಬೂದನು ಯಾಜಕನೂ ಹಾಗು ಅರಸನ ಮಿತ್ರನೂ ಆಗಿದ್ದನು. 6 ಅಹೀಷಾರನು ರಾಜಗೃಹಾಧಿಪತಿಯು. ಅಬ್ದನ ಮಗನಾದ ಅದೋನೀರಾಮನು ಬಿಟ್ಟೀಕೆಲಸ ಮಾಡಿಸುವವರ ಮುಖ್ಯಸ್ಥನು. 7 ಸೊಲೊಮೋನನು ಎಲ್ಲಾ ಇಸ್ರಾಯೇಲರ ಮೇಲ್ವಿಚಾರಣೆಗಾಗಿ ಹನ್ನೆರಡು ಕಾರ್ಯನಿರ್ವಾಹಕರನ್ನು ನೇಮಿಸಿದನು. ಅವರಲ್ಲಿ ಪ್ರತಿಯೊಬ್ಬನು ಒಂದೊಂದು ತಿಂಗಳು ಅರಸನಿಗೂ ಮತ್ತು ಅವನ ಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪ್ರತಿವರ್ಷವೂ ಒದಗಿಸಿಕೊಡಬೇಕಾಗಿತ್ತು. 8 ಅವರು ಯಾರಾರೆಂದರೆ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿದ್ದ ಹೂರನ ಮಗ, 9 ಮಾಕಾಚ್, ಶಾಲ್ಬೀಮ್, ಬೇತ್‌ಷೆಮೆಷ್‌, ಏಲೋನ್ ಬೇತ್ ಹಾನಾನ್‌ ಎಂಬ ಊರುಗಳ ಒಡೆಯನಾದ ದೆಕೆರನ ಮಗನು. 10 ೧೦ ಅರುಬ್ಬೋತಿನಲ್ಲಿ ವಾಸವಾಗಿದ್ದ ಹೆಸೆದನ ಮಗ, ಅವನು ಸೋಕೋ ಮತ್ತು ಹೇಫೆರ್ ಎಂಬ ಪ್ರದೇಶಗಳಿಗೆ ಅಧಿಪತಿಯಾಗಿದ್ದನು. 11 ೧೧ ದೋರ್ ಗುಡ್ಡದ ಪ್ರದೇಶದಲ್ಲಿದ್ದ ಅಬೀನಾದಾಬನ ಮಗ, ಸೊಲೊಮೋನನ ಮಗಳಾದ ಟಾಫತಳು ಅವನ ಹೆಂಡತಿಯಾಗಿದ್ದಳು. 12 ೧೨ ತಾಣಕ್ ಮತ್ತು ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿಯೂ ಇಜ್ರೇಲಿನ ಕೆಳಗಣಭಾಗಗಳೂ, ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇರುವಂಥ ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿರುವಂಥ ಬೇತ್ ಷೆಯಾನಿನ ಎಲ್ಲಾ ಪ್ರದೇಶ ಇವುಗಳಿಗೆ ಅಹೀಲೂದನ ಮಗನಾದ ಬಾಣಾ ಅಧಿಪತಿಯಾಗಿದ್ದನು. 13 ೧೩ ರಾಮೋತ್ ಗಿಲ್ಯಾದಿನಲ್ಲಿದ್ದ ಗೆಬೇರನ ಮಗ, ಅವನು ಗಿಲ್ಯಾದಿನಲ್ಲಿ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಪತಿಯಾಗಿದ್ದನು. 14 ೧೪ ಮಹನಯಿಮಿನಲ್ಲಿದ್ದ ಇದ್ದೋವಿನ ಮಗನಾದ ಅಹೀನಾದಾಬನು. 15 ೧೫ ನಫ್ತಾಲಿ ಪ್ರದೇಶದಲ್ಲಿದ್ದ ಅಹೀಮಾಚನು, ಅವನು ಸೊಲೊಮೋನನ ಮಗಳಾದ ಬಾಸೆಮತಳನ್ನು ಮದುವೆಮಾಡಿಕೊಂಡಿದ್ದನು. 16 ೧೬ ಅಶೇರಿಗೂ ಮತ್ತು ಆಲೋತಿಗೂ ಒಡೆಯನಾದ ಹೂಷೈಯ ಮಗನಾದ ಬಾಣನು, 17 ೧೭ ಇಸ್ಸಾಕಾರ್ ಪ್ರಾಂತ್ಯದಲ್ಲಿದ್ದ ಫಾರೂಹನ ಮಗನಾದ ಯೆಹೋಷಾಫಾಟನು, 18 ೧೮ ಬೆನ್ಯಾಮೀನಿನಲ್ಲಿದ್ದ ಏಲನ ಮಗನಾದ ಶಿಮ್ಮೀ, 19 ೧೯ ಅಮೋರಿಯರ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ರಾಜ್ಯವಾಗಿದ್ದ ಗಿಲ್ಯಾದ್ ಪ್ರದೇಶಕ್ಕೆಲ್ಲಾ ಒಬ್ಬನೇ ಅಧಿಪತಿಯಾಗಿದ್ದನು ಅವನು ಊರಿಯನ ಮಗನಾದ ಗೆಬೆರ್ ಎಂಬುವವನು. 20 ೨೦ ಇಸ್ರಾಯೇಲರು ಮತ್ತು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯರಾಗಿ ಅಭಿವೃದ್ಧಿಯಾದರು. ಅವರು ಅನ್ನಪಾನಗಳನ್ನು ಮಾಡುತ್ತಾ ತೃಪ್ತರಾಗಿ ಸಂತೋಷದಿಂದಿದ್ದರು. 21 ೨೧ ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. 22 ೨೨ ಸೊಲೊಮೋನನ ಅರಮನೆಗೆ ಪ್ರತಿದಿನ ಬೇಕಾಗುವ ಆಹಾರಪದಾರ್ಥಗಳು, ಮೂವತ್ತು ಕೋರ್ ಗೋದಿಯ ಹಿಟ್ಟು, ಅರುವತ್ತು ಕೋರ್ ಜವೆಗೋದಿಯ ಹಿಟ್ಟು, 23 ೨೩ ಹತ್ತು ಕೊಬ್ಬಿದ ಎತ್ತುಗಳು, ಇಪ್ಪತ್ತು ಹುಲ್ಲುಗಾವಲಿನಲ್ಲಿರುವ ಎತ್ತುಗಳು, ನೂರು ಕುರಿಗಳು ಇವುಗಳಲ್ಲದೆ ಕಡವೆ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು ಇವುಗಳೇ. 24 ೨೪ ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು. 25 ೨೫ ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದವರೆಗಿರುವ ಸಮಸ್ತ ಇಸ್ರಾಯೇಲರೂ ಮತ್ತು ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದ ಗಿಡ ಇವುಗಳ ನೆರಳಿನಲ್ಲಿ ವಾಸಮಾಡುತ್ತಾ ಸುರಕ್ಷಿತರಾಗಿದ್ದರು. 26 ೨೬ ಸೊಲೊಮೋನನ ಲಾಯಗಳಲ್ಲಿ ನಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು. ಅವನಿಗೆ ಹನ್ನೆರಡು ಸಾವಿರ ಕುದುರೆಸವಾರರಿದ್ದರು. 27 ೨೭ ಮೇಲೆ ಕಾಣಿಸಿರುವ ಕಾರ್ಯನಿರ್ವಾಹಕರು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೂ, ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುವವರೆಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸಿಕೊಡುತ್ತಿದ್ದರು. 28 ೨೮ ಇದಲ್ಲದೆ ಅವರು ರಥಾಶ್ವಗಳಿಗಾಗಿಯೂ ಮತ್ತು ಸವಾರಿಕುದುರೆಗಳಿಗಾಗಿಯೂ ನೇಮಕವಾದಷ್ಟು ಜವೆಗೋದಿಯನ್ನು, ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೇ ತಂದೊಪ್ಪಿಸುತ್ತಿದ್ದರು. 29 ೨೯ ದೇವರು ಸೊಲೊಮೋನನಿಗೆ ವಿಶೇಷವಾದ ಜ್ಞಾನ, ವಿವೇಕಗಳನ್ನೂ, ಸಮುದ್ರ ತೀರದ ಮರಳಿನಷ್ಟು ಅಪರಿಮಿತವಾದ ಮನೋವಿಶಾಲತೆಯನ್ನೂ ಅನುಗ್ರಹಿಸಿದನು. 30 ೩೦ ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದುದಾಗಿತ್ತು. 31 ೩೧ ಅವನು‍ ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಣ ಎಲ್ಲಾ ಜನಾಂಗಗಳಲ್ಲಿ ಅವನ ಹೆಸರು ಸುಪ್ರಸಿದ್ಧವಾಯಿತು. 32 ೩೨ ಅವನ ಜ್ಞಾನೋಕ್ತಿಗಳು ಮೂರು ಸಾವಿರ ಮತ್ತು ಗೀತೆಗಳು ಸಾವಿರದ ಐದು. 33 ೩೩ ಅವನು ಲೆಬನೋನಿನ ದೇವದಾರು ವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ, ಎಲ್ಲಾ ಪಶುಪಕ್ಷಿ, ಜಲಚರಗಳು, ಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸ ಬಲ್ಲವನಾಗಿದ್ದನು. 34 ೩೪ ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನದ ವಿಶೇಷತೆಯನ್ನು ಕುರಿತು ಕೇಳಿದ ಅನೇಕ ರಾಜರೂ ಮತ್ತು ವಿದ್ವಾಂಸರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಬರುತ್ತಿದ್ದರು.

< ಅರಸುಗಳು - ಪ್ರಥಮ ಭಾಗ 4 >