< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 4 >

1 ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ದೇವರ ಮನೆವಾರ್ತೆಯವರೆಂತಲೂ ಪರಿಗಣಿಸಲಿ. 2 ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ. 3 ನನಗಾದರೂ ನಿಮ್ಮಿಂದಾಗಲಿ ಅಥವಾ ಮನುಷ್ಯರು ಮಾಡುವ ವಿಚಾರಣೆಯಾಗಲಿ ತೀರಾ ಲಘುವೆನಿಸಿದೆ. ನಾನೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ. 4 ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ. 5 ಆದ್ದರಿಂದ ಕರ್ತನು ಬರುವ ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು. 6 ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು “ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು,” ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ. 7 ನಿನ್ನನ್ನು ಇತರರಿಗಿಂತಲೂ ಶ್ರೇಷ್ಠನನ್ನಾಗಿ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದಿದ್ದಲ್ಲವೆಂಬಂತೆ ಯಾಕೆ ಕೊಚ್ಚಿಕೊಳ್ಳುತ್ತೀ? 8 ಇಷ್ಟು ಬೇಗನೆ ನೀವು ತೃಪ್ತರಾದಿರಿ. ಇಷ್ಟುಬೇಗನೆ ಐಶ್ವರ್ಯವಂತರಾದಿರಿ. ನಮ್ಮ ಸಹಾಯವಿಲ್ಲದೆ ಅರಸರಂತೆ ಆದಿರಿ. ನೀವು ನಿಜವಾಗಿ ಆಳುವವರಾಗಿದ್ದರೇ ನನಗೆ ಆನಂದವಾಗುತ್ತಿತ್ತು. ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೇವು. 9 ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು. 10 ೧೦ ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು. 11 ೧೧ ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ, 12 ೧೨ ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. 13 ೧೩ ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ. 14 ೧೪ ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. 15 ೧೫ ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ. 16 ೧೬ ಆದ್ದರಿಂದ ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17 ೧೭ ಈ ಕಾರಣದಿಂದ ಕರ್ತನಲ್ಲಿ ನನ್ನ ಪ್ರಿಯ ಮತ್ತು ನಂಬಿಗಸ್ತ ಮಗನಾದ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ನಾನು ಪ್ರತಿಯೊಂದು ಸಭೆಗಳಲ್ಲಿಯೂ, ಎಲ್ಲೆಲ್ಲಿಯೂ ಬೋಧಿಸುವ ಹಾಗೆ ಕ್ರಿಸ್ತನಲ್ಲಿರುವ ನನ್ನ ನಡವಳಿಕೆಗಳನ್ನು ಅವನು ನಿಮ್ಮ ನೆನಪಿಗೆ ತರುವನು. 18 ೧೮ ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು ಉಬ್ಬಿಕೊಂಡಿದ್ದಾರೆ. 19 ೧೯ ಆದರೆ ಕರ್ತನ ಚಿತ್ತವಾದರೆ ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ. 20 ೨೦ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ. 21 ೨೧ ನಿಮ್ಮ ಇಷ್ಟವೇನು? ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯದ ಆತ್ಮದಿಂದಲೂ ಕೂಡಿದವನಾಗಿ ಬರಲೋ?

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 4 >