< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 20 >

1 ಮರುವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿ, ಅಮ್ಮೋನಿಯರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಬ್ಬಕ್ಕೆ ಹೋಗಿ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.
ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ, ಯೋವಾಬನು ಬಲವಾದ ಸೈನ್ಯವನ್ನು ಕರೆದುಕೊಂಡು ಹೋಗಿ, ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ, ರಬ್ಬ ನಗರಕ್ಕೆ ಮುತ್ತಿಗೆಹಾಕಿದನು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣದ ಮೇಲೆ ದಾಳಿಮಾಡಿ, ಅದನ್ನು ನಾಶಮಾಡಿದನು.
2 ದಾವೀದನು ಮಲ್ಕಾಮ್ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲಾ ತೂಕದ್ದು. ಅದರಲ್ಲಿದ್ದ ಅಮೂಲ್ಯವಾದ ರತ್ನಗಳನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಅವನು ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದನು.
ಇದಲ್ಲದೆ ದಾವೀದನು ರಬ್ಬಾ ನಗರಕ್ಕೆ ಬಂದಾಗ, ಮಲ್ಕಾಮ್ ಮೂರ್ತಿಯ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು. ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು.
3 ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಮಾಡುವ ಕೆಲಸಕ್ಕೆ ನೇಮಿಸಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಸರ್ವಸೈನಿಕರೊಡನೆ ಯೆರೂಸಲೇಮಿಗೆ ಬಂದನು.
ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
4 ಅನಂತರ ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷ ಊರಿನವನಾದ ಸಿಬ್ಬೆಕೈ ಎಂಬುವವನು ರೆಫಾಯನಾದ ಸಿಪ್ಪೈ ಎಂಬುವವನನ್ನು ಕೊಲ್ಲಲು ಫಿಲಿಷ್ಟಿಯರು ಕುಗ್ಗಿಹೋದರು.
ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದದ್ದರಿಂದ ಫಿಲಿಷ್ಟಿಯರು ಸೋತುಹೋದರು.
5 ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮನಾದ ಲಹ್ಮೀಯನನ್ನು ಕೊಂದನು. ಲಹ್ಮೀಯನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.
ಅನಂತರ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾದಾಗ, ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
6 ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು ಅವನ ಕೈಕಾಲುಗಳಿಗೆ ಆರಾರು ಬೆರಳುಗಳಿದ್ದವು. ಅವನೂ ರೆಫಾಯನು.
ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
7 ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮ್ಮನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
8 ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.
ಇವರು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 20 >