< ಕೀರ್ತನೆಗಳು 28 >

1 ದಾವೀದನ ಕೀರ್ತನೆ. ಯೆಹೋವ ದೇವರೇ, ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು. 2 ನಾನು ನಿಮಗೆ ಮೊರೆಯಿಡುವಾಗ, ನನ್ನ ಕೈಗಳನ್ನು ನಿಮ್ಮ ಮಹಾಪರಿಶುದ್ಧ ಸ್ಥಳದ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯನ್ನು ಲಾಲಿಸಿರಿ. 3 ದುಷ್ಟರ ಸಂಗಡವೂ ಅಪರಾಧ ಮಾಡುವವರ ಸಂಗಡವೂ ನನ್ನನ್ನು ಎಳೆಯಬೇಡಿರಿ; ಅವರು ತಮ್ಮ ನೆರೆಯವರೊಂದಿಗೆ ಸಮಾಧಾನವಾಗಿ ಮಾತನಾಡುತ್ತಾರೆ; ಆದರೆ ಕೇಡು ಅವರ ಹೃದಯದಲ್ಲಿ ಇದೆ. 4 ಅವರ ಕೃತ್ಯಗಳ ಪ್ರಕಾರವಾಗಿಯೂ, ಅವರ ಕೆಟ್ಟತನಗಳ ಪ್ರಕಾರವಾಗಿಯೂ ಅವರಿಗೆ ಪ್ರತಿಫಲಕೊಡಿರಿ; ಅವರ ಕೈಕೃತ್ಯಗಳ ಪ್ರಕಾರವಾಗಿ ಅವರಿಗೆ ಕೊಡಿರಿ, ಅರ್ಹತೆಗೆ ತಕ್ಕಂತೆಯೇ ಅವರಿಗೆ ಬರಮಾಡಿರಿ. 5 ಅವರು ಯೆಹೋವ ದೇವರ ಕೃತ್ಯಗಳನ್ನೂ, ಅವರ ಕೈಗಳ ಕೆಲಸವನ್ನೂ ಲಕ್ಷಿಸುವುದಿಲ್ಲ; ಆದ್ದರಿಂದ ದೇವರು ಅವರನ್ನು ವೃದ್ಧಿಗೊಳಿಸದೆ ದಂಡಿಸುವರು. 6 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಕರುಣೆಗಾಗಿ ನನ್ನ ಮೊರೆಯನ್ನು ಅವರು ಕೇಳಿದ್ದಾರೆ. 7 ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ; ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು; ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು; ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು. 8 ಯೆಹೋವ ದೇವರು ತಮ್ಮ ಜನರಿಗೆ ಬಲವಾಗಿದ್ದಾರೆ; ತಮ್ಮ ಅಭಿಷಿಕ್ತನಿಗೆ ರಕ್ಷಣೆಯ ಕೋಟೆ ಆಗಿದ್ದಾರೆ. 9 ನಿಮ್ಮ ಜನರನ್ನು ರಕ್ಷಿಸಿರಿ; ನಿಮ್ಮ ವಾರಸುದಾರರನ್ನು ಆಶೀರ್ವದಿಸಿರಿ; ನೀವು ಅವರ ಕುರುಬ ಆಗಿದ್ದು; ಅವರನ್ನು ಯಾವಾಗಲೂ ಮುನ್ನಡೆಸಿರಿ.

< ಕೀರ್ತನೆಗಳು 28 >