< ಕೀರ್ತನೆಗಳು 149 >

1 ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ, ಭಕ್ತರ ಸಭೆಯಲ್ಲಿ ದೇವರ ಸ್ತೋತ್ರವನ್ನೂ ಹಾಡಿರಿ. 2 ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ; ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ. 3 ದೇವರ ಹೆಸರನ್ನು ನರ್ತಿಸುತ್ತಾ ಸ್ತುತಿಸಲಿ; ದಮ್ಮಡಿಯಿಂದಲೂ ಕಿನ್ನರಿಯಿಂದಲೂ ದೇವರನ್ನು ಕೀರ್ತಿಸಲಿ. 4 ಏಕೆಂದರೆ ಯೆಹೋವ ದೇವರು ತಮ್ಮ ಜನರಲ್ಲಿ ಹರ್ಷಿಸುತ್ತಾರೆ. ದೀನರನ್ನು ಜಯದ ಕಿರೀಟದಿಂದ ಅಲಂಕರಿಸುತ್ತಾರೆ. 5 ಇಂಥಾ ಸನ್ಮಾನದಲ್ಲಿ ನಂಬಿಗಸ್ತರು ಸಂತೋಷಪಡಲಿ ಹಾಸಿಗೆಯಲ್ಲಿರುವಾಗಲೂ ಆನಂದಗಾನ ಹಾಡಲಿ. 6 ಉನ್ನತ ದೇವರ ಸ್ತೋತ್ರವು ಅವರ ಬಾಯಿಯಲ್ಲಿ ಇರಲಿ. ಇಬ್ಬಾಯಿ ಖಡ್ಗ ಅವರ ಕೈಯಲ್ಲಿಯೂ ಇರಲಿ. 7 ಜನಾಂಗಗಳಲ್ಲಿ ನ್ಯಾಯ ಪ್ರತೀಕಾರವಾಗಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ. 8 ಅಪರಾಧದ ಅರಸರನ್ನು ಸಂಕೋಲೆಗಳಿಂದಲೂ, ಪ್ರಮುಖರನ್ನು ಕಬ್ಬಿಣದ ಬೇಡಿಗಳಿಂದಲೂ ಬಂಧಿಸಲಿ. 9 ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ, ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.

< ಕೀರ್ತನೆಗಳು 149 >