< ಕೀರ್ತನೆಗಳು 144 >

1 ದಾವೀದನ ಕೀರ್ತನೆ. ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ. ದೇವರು ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ. 2 ಅವರು ನನ್ನನ್ನು ಪ್ರೀತಿಸುವ ದೇವರು, ಅವರು ನನ್ನ ಕೋಟೆಯೂ, ನನ್ನ ಬಲವಾದ ಆಶ್ರಯವೂ, ನನ್ನನ್ನು ತಪ್ಪಿಸುವವರೂ, ನನ್ನ ಭರವಸೆಯೂ, ನನ್ನ ಗುರಾಣಿಯೂ, ಜನಾಂಗಗಳನ್ನು ನನಗೆ ವಶಮಾಡುವವರೂ ಆಗಿದ್ದಾರೆ. 3 ಯೆಹೋವ ದೇವರೇ, ನೀವು ಮಾನವನನ್ನು ಲಕ್ಷವಿಡುವ ಹಾಗೆ ಅವನು ಎಷ್ಟರವನು? ನೀವು ಅವನನ್ನು ನೆನಸುವ ಹಾಗೆ ಮಾನವನು ಎಷ್ಟರವನು? 4 ಮನುಷ್ಯನು ಕೇವಲ ಉಸಿರಿನಂತಿದ್ದಾನೆ; ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ. 5 ಯೆಹೋವ ದೇವರೇ, ನಿಮ್ಮ ಆಕಾಶಗಳನ್ನು ಒಡೆದು ಇಳಿದು ಬನ್ನಿರಿ; ಬೆಟ್ಟಗಳನ್ನು ಮುಟ್ಟಿರಿ, ಆಗ ಅವುಗಳಿಂದ ಹೊಗೆ ಹೊರಹೊಮ್ಮುವುದು. 6 ಮಿಂಚಿನಿಂದ ವೈರಿಗಳನ್ನು ಚದರಿಸಿರಿ. ನಿಮ್ಮ ಬಾಣಗಳನ್ನು ಎಸೆದು, ಅವರನ್ನು ದಂಡಿಸಿರಿ. 7 ನಿಮ್ಮ ಕೈಯನ್ನು ಉನ್ನತದಿಂದ ಚಾಚಿ, ಮಹಾ ಜಲದಿಂದಲೂ, ಪರದೇಶದವರ ಕೈಯಿಂದಲೂ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ. 8 ಅವರ ಬಾಯಿ ಸುಳ್ಳನ್ನು ನುಡಿಯುತ್ತಿದೆ, ಅವರ ಬಲಗೈ ಮೋಸದ ಬಲಗೈ ಆಗಿದೆ. 9 ಓ ದೇವರೇ, ನಾನು ಹೊಸಹಾಡನ್ನು ನಿಮಗೆ ಹಾಡುವೆನು; ಹತ್ತು ತಂತಿಗಳ ವಾದ್ಯದಿಂದ ನಿಮ್ಮನ್ನು ಕೀರ್ತಿಸುವೆನು. 10 ಅರಸರಿಗೆ ಜಯವನ್ನು ಕೊಡುವ ದೇವರೇ, ನಿಮ್ಮ ಸೇವಕನಾದ ದಾವೀದನನ್ನೂ ಭಯಂಕರ ಖಡ್ಗದಿಂದ ಬಿಡಿಸಿದ್ದೀರಿ. 11 ಪರದೇಶದವರ ಕೈಯಿಂದ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ; ಅವರ ಬಾಯಿ ವಂಚನೆಯನ್ನು ನುಡಿಯುತ್ತಿದೆ. ಅವರ ಬಾಯಿ ಸುಳ್ಳನ್ನೇ ನುಡಿಯುತ್ತಿದೆ. 12 ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ಯೌವನದಲ್ಲಿ ಉತ್ತಮವಾಗಿ ಬೆಳೆದವರಾಗಿರಲಿ; ನಮ್ಮ ಹೆಣ್ಣುಮಕ್ಕಳು ಅರಮನೆಯ ಶೃಂಗಾರಕ್ಕಾಗಿ ಕೆತ್ತಿದ ಸುಂದರ ಸ್ತಂಭಗಳ ಹಾಗಿರಲಿ. 13 ನಮ್ಮ ಉಗ್ರಾಣಗಳು ನಾನಾ ವಿಧವಾದ ಧಾನ್ಯಗಳನ್ನು ತುಂಬಿರಲಿ. ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಹೊಲಗಳಲ್ಲಿ ಹತ್ತು ಸಹಸ್ರವಾಗಿ ಹೆಚ್ಚಲಿ. 14 ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ; ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ. ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ. 15 ಹೀಗಿರುವ ಜನರು ಧನ್ಯರು; ಯೆಹೋವ ದೇವರು ಯಾರಿಗೆ ದೇವರಾಗಿದ್ದಾರೋ, ಅವರು ಧನ್ಯರು.

< ಕೀರ್ತನೆಗಳು 144 >