< ಕೀರ್ತನೆಗಳು 14 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋಗಿ, ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ. 2 ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ಯೆಹೋವ ದೇವರು ಸ್ವರ್ಗದಿಂದ, ಮನುಷ್ಯರ ಮೇಲೆ ದೃಷ್ಟಿಸಿದರು. 3 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದಾರೆ; ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ. 4 ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ. 5 ದೇವರು ನೀತಿವಂತರ ಸಹವಾಸದಲ್ಲಿ ಇರುವುದರಿಂದ, ದುಷ್ಟತ್ವವನ್ನು ನಡೆಸುವವರು ಅತ್ಯಂತ ಭಯಭ್ರಾಂತರಾಗುವರು. 6 ದುಷ್ಟತ್ವ ನಡೆಸುವವರೇ, ನೀವು ಬಡವರ ಯೋಜನೆಗಳನ್ನು ನಿರಾಶೆಗೊಳಿಸುತ್ತೀರಿ, ಆದರೆ ಯೆಹೋವ ದೇವರೇ ಅವರ ಆಶ್ರಯವಾಗಿದ್ದಾರೆ. 7 ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ಯೆಹೋವ ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ, ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.

< ಕೀರ್ತನೆಗಳು 14 >