< ಮತ್ತಾಯನು 13 >

1 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟುಹೋಗಿ ಸರೋವರದ ಬಳಿಯಲ್ಲಿ ಕುಳಿತುಕೊಂಡರು. 2 ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು. 3 ಆಗ ಯೇಸು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದು: “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು; 4 ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು, ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು. 6 ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು. 7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. 8 ಆದರೆ ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು, ಒಂದು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲಕೊಟ್ಟವು. 9 ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.” 10 ತರುವಾಯ ಶಿಷ್ಯರು ಬಂದು ಯೇಸುವಿಗೆ, “ನೀವು ಸಾಮ್ಯಗಳಲ್ಲಿ ಅವರೊಡನೆ ಮಾತನಾಡುವುದೇಕೆ?” ಎಂದು ಕೇಳಿದರು. 11 ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ. 12 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.” 13 ಆದ್ದರಿಂದ, ನಾನು ಅವರೊಡನೆ ಸಾಮ್ಯಗಳಲ್ಲಿ ಮಾತನಾಡುತ್ತೇನೆ: “ಏಕೆಂದರೆ ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕೇಳಿದರೂ ತಿಳಿದುಕೊಳ್ಳುವುದಿಲ್ಲ; ಅವರು ಗ್ರಹಿಸುವುದೂ ಇಲ್ಲ. 14 ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ. 15 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ. ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ. 16 ಆದರೆ ನಿಮ್ಮ ಕಣ್ಣುಗಳು ಕಾಣುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಧನ್ಯರು. 17 ನಾನು ಸತ್ಯವಾಗಿ ನಿಮಗೆ ಹೇಳುತ್ತೇನೆ, ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ. 18 “ಆದ್ದರಿಂದ ಬಿತ್ತುವವನ ಸಾಮ್ಯದ ಅರ್ಥವನ್ನು ನೀವು ಕೇಳಿರಿ: 19 ಯಾರಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ, ಕೆಡುಕನು ಬಂದು ಅವರ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ, ಇದೇ ದಾರಿಯ ಪಕ್ಕದಲ್ಲಿ ಬಿತ್ತಲಾಗಿರುವ ಬೀಜವಾಗಿರುವದು. 20 ಕಲ್ಲು ನೆಲದ ಮೇಲೆ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ. 21 ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ. 22 ಮುಳ್ಳುಗಿಡಗಳಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ. (aiōn g165) 23 ಆದರೆ ಒಳ್ಳೆಯ ಭೂಮಿಯಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿ ಅದನ್ನು ಗ್ರಹಿಸಿಕೊಳ್ಳುತ್ತಾರೆ. ಇವರು ಫಲ ಫಲಿಸುವವರಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾರೆ.” 24 ಯೇಸು ಮತ್ತೊಂದು ಸಾಮ್ಯವನ್ನು ಹೇಳಿದರು: “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25 ಆದರೆ ಜನರು ನಿದ್ರಿಸುತ್ತಿರುವಾಗ, ಅವನ ವೈರಿಯು ಬಂದು ಗೋಧಿಯ ನಡುವೆ ಕಳೆಯನ್ನು ಬಿತ್ತಿ ಹೊರಟುಹೋದನು. 26 ಗೋಧಿಯು ಮೊಳೆತು ಬೆಳೆಯುತ್ತಿರುವಾಗ, ಕಳೆ ಸಹ ಕಾಣಿಸಿಕೊಂಡಿತು. 27 “ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು. 28 “ಯಜಮಾನನು ಅವರಿಗೆ, ‘ವೈರಿಯು ಇದನ್ನು ಮಾಡಿದ್ದಾನೆ,’ ಎಂದನು. “ಆಗ ಸೇವಕರು ಅವನಿಗೆ, ‘ನಾವು ಹೋಗಿ ಅವುಗಳನ್ನು ಕಿತ್ತುಹಾಕೋಣವೇ?’ ಎಂದು ಕೇಳಿದರು. 29 “ಆದರೆ ಯಜಮಾನನು, ‘ಬೇಡ, ನೀವು ಕಳೆಯನ್ನು ಕೀಳುವಾಗ, ಅವುಗಳೊಂದಿಗೆ ಗೋಧಿಯನ್ನೂ ಕಿತ್ತುಬಿಟ್ಟೀರಿ. 30 ಸುಗ್ಗಿಯ ಕಾಲದವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ. ಸುಗ್ಗಿಯ ಕಾಲದಲ್ಲಿ ನಾನು ಕೊಯ್ಯುವವರಿಗೆ: ಮೊದಲು ಕಳೆಯನ್ನು ಕೂಡಿಸಿ ಅವುಗಳನ್ನು ಸುಡುವುದಕ್ಕೆ ಬೇರೆ ಕಟ್ಟಿಡಿರಿ, ಗೋಧಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು,’ ಅಂದನು.” 31 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು, ಒಬ್ಬ ಮನುಷ್ಯನು ಸಾಸಿವೆ ಕಾಳನ್ನು ತೆಗೆದುಕೊಂಡುಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದಕ್ಕೆ ಹೋಲಿಕೆಯಾಗಿದೆ. 32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದ್ದರೂ ಅದು ಬೆಳೆದಾಗ, ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು, ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡುತ್ತವೆ.” 33 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು.” 34 ಯೇಸು ಇವೆಲ್ಲವನ್ನು ಜನಸಮೂಹದೊಂದಿಗೆ ಸಾಮ್ಯಗಳಲ್ಲಿಯೇ ಹೇಳಿದರು; ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ. 35 ಹೀಗೆ ಒಬ್ಬ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರಿತು: “ನಾನು ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು. ನಾನು ಲೋಕ ಪ್ರಾರಂಭದಿಂದ ಮರೆಯಾದವುಗಳನ್ನು ಪ್ರಕಟಪಡಿಸುವೆನು.” 36 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ಮನೆಯೊಳಕ್ಕೆ ಹೋದರು. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಹೊಲದಲ್ಲಿರುವ ಕಳೆಯ ಸಾಮ್ಯವನ್ನು ನಮಗೆ ವಿವರಿಸಿರಿ,” ಎಂದರು. 37 ಯೇಸು ಉತ್ತರವಾಗಿ ಅವರಿಗೆ, “ಒಳ್ಳೆಯ ಬೀಜ ಬಿತ್ತುವವನು ಮನುಷ್ಯಪುತ್ರನು. 38 ಹೊಲವು ಈ ಲೋಕ; ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳು; ಕಳೆಯು ಕೆಡುಕನ ಮಕ್ಕಳಾಗಿದ್ದಾರೆ. 39 ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ. (aiōn g165) 40 “ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು. (aiōn g165) 41 ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ, 42 ದೂತರು ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು. 43 ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ. 44 “ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ಕಂಡುಕೊಂಡು ಮುಚ್ಚಿಟ್ಟು, ಅದರ ಸಂತೋಷದ ನಿಮಿತ್ತ ಹೊರಟುಹೋಗಿ, ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ. 45 “ಪರಲೋಕ ರಾಜ್ಯವು ಒಳ್ಳೆಯ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. 46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು, ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಳ್ಳುತ್ತಾನೆ. 47 “ಪರಲೋಕ ರಾಜ್ಯವು, ಸರೋವರದಲ್ಲಿ ಬೀಸಲಾಗಿ ಎಲ್ಲಾ ತರವಾದ ಮೀನುಗಳನ್ನು ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ. 48 ಬಲೆ ತುಂಬಿದಾಗ, ಬೆಸ್ತರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಬುಟ್ಟಿಗಳಲ್ಲಿ ತುಂಬಿಸಿ, ಕೆಟ್ಟವುಗಳನ್ನು ಹೊರಗೆ ಬಿಸಾಡುತ್ತಾರೆ. 49 ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ, (aiōn g165) 50 ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು,” ಎಂದು ಹೇಳಿದರು. 51 ಯೇಸು ಶಿಷ್ಯರಿಗೆ, “ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ?” ಎಂದು ಕೇಳಿದರು. ಅದಕ್ಕೆ, ಅವರು ಯೇಸುವಿಗೆ, “ಹೌದು,” ಎಂದು ಹೇಳಿದರು. 52 ಯೇಸು ಅವರಿಗೆ, “ಆದಕಾರಣ ಪರಲೋಕ ರಾಜ್ಯದ ಶಿಷ್ಯನಾಗಿರುವ ಪ್ರತಿಯೊಬ್ಬ ನಿಯಮ ಬೋಧಕನು, ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ,” ಎಂದರು. 53 ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟು ಹೋದರು. 54 ಯೇಸು ತಮ್ಮ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಅವರಿಗೆ ಬೋಧನೆ ಮಾಡಲು ಪ್ರಾರಂಭಿಸಲು, ಅವರು ವಿಸ್ಮಯಗೊಂಡು, “ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದವು? 55 ಈತನು ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ? 56 ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡರು. 57 ಅವರು ಯೇಸುವನ್ನು ತಾತ್ಸಾರ ಮಾಡಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು. 58 ಯೇಸು ಅವರ ಅಪನಂಬಿಕೆಯ ದೆಸೆಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲ.

< ಮತ್ತಾಯನು 13 >